ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 19 :
ಪಂಚ ಗ್ಯಾರಂಟಿ ಯೋಜನೆಗಳು ಜಿಲ್ಲೆಯ ಜನತೆಗೆ ಆರ್ಥಿಕವಾಗಿ ಬಲ ತುಂಬುವಲ್ಲಿ ಯಶಸ್ವಿಯಾಗಿದ್ದು, ಕಳೆದ ಜನವರಿ 2026ರ ವರೆಗೆ ಈ ಯೋಜನೆಗಳಿಗಾಗಿ 4030.19 ಕೋಟಿ ರೂ. ಸರ್ಕಾರ ಖರ್ಚು ಮಾಡಿದ್ದು, ಇಷ್ಟು ಮೊತ್ತದ ಹಣ ವಿಜಯಪುರ ಜನತೆಗೆ ವಿವಿಧ ಯೋಜನೆಗಳ ಮೂಲಕ ದೊರಕಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಇಲಿಯಾಸ್ ಬೋರಾಮಣಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳನ್ನು ವಿಜಯಪುರ ಜಿಲ್ಲೆಯಲ್ಲಿ ಫಲಾನುಭವಿಗಳಿಗೆ ಸಮರ್ಪಕವಾಗಿ ಒದಗಿಸಲಾಗುತ್ತಿದೆ. ವಿಶೇಷವಾಗಿ ಶಕ್ತಿ ಯೋಜನೆ ಅಡಿಯಲ್ಲಿ ಕಳೆದ ಜನವರಿ 2026 ರವರೆಗೆ 17,99,34,336 ಪ್ರಯಾಣಿಕರು ಬಸ್‌ನಲ್ಲಿ ಸಂಚರಿಸಿದ್ದು 607.93 ಕೋಟಿ ರೂ. ಖರ್ಚು ಮಾಡಲಾಗಿದ್ದು, ಗೃಹ ಜ್ಯೋತಿ ಯೋಜನೆಯಡಿಯಲ್ಲಿ 4,46,616 ಮನೆಗಳಿಗೆ 538.15 ಕೋಟಿ ರೂ. ವೆಚ್ಚದಲ್ಲಿ ಯೋಜನೆಯ ಲಾಭ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ 16,55,941 ಕುಟುಂಬಗಳಿಗೆ 457.03 ಕೋಟಿ ರೂ. ವೆಚ್ಚದಲ್ಲಿ ಪಡಿತರ ಧಾನ್ಯ ವಿತರಿಸಲಾಗಿದ್ದು, ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 5,04,109 ಫಲಾನುಭವಿಗಳಿಗೆ 2385.89 ಕೋಟಿ ರೂ. ವೆಚ್ಚದಲ್ಲಿ ತಲಾ 2 ಸಾವಿರ ರೂ. ನೀಡಲಾಗಿದೆ. ಯುವ ನಿಧಿ ಯೋಜನೆಯಲ್ಲಿ 24,404 ಫಲಾನುಭವಿಗಳಿಗೆ 41.10 ಕೋಟಿ ರೂ. ಪ್ರೋತ್ಸಾಹಧನ ಒದಗಿಸಲಾಗಿದೆ ಎಂದು ವಿವರಿಸಿದರು.
ಅನುಷ್ಠಾನ ಕಾರ್ಯಾಗಾರ ಹಾಗೂ ಪ್ರಗತಿ ಪರಿಶೀಲನೆ ಫೆ.21 ರಂದು
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಇವರ ಸಹಯೋಗದಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಕಾರ್ಯಗಾರ ಹಾಗೂ ಪ್ರಗತಿ ಪರಿಶೀಲನೆ ಸಭೆಯು ಫೆ.21ರಂದು ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಬೋರಾಮಣಿ ತಿಳಿಸಿದರು.
ಈ ಕಾರ್ಯಾಗಾರಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಕಾರ್ಯಾಗಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ್ ಅವರು ಉದ್ಘಾಟಿಸುವರು. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಸಚಿವ ಶಿವಾನಂದ ಪಾಟೀಲ ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ಬೆಳಗಾವಿ ವಿಭಾಗದ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ (ಬ್ಯಾಡಗಿ) ಸಹ ಭಾಗವಹಿಸಲಿದ್ದಾರೆ. ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಭಾಗಗಳ ಅನುಷ್ಠಾನ ಸಮಿತಿ ಪದಾಧಿಕಾರಿಗಳು ಸಹ ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದು, ಡಾ.ವಾಸು ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸ ಮಂಡಿಸಲಿದ್ದಾರೆ.
ಪಾಲಿಕೆಯ ವ್ಯಾಪ್ತಿಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಬ್ಬೀರ ಅಹ್ಮದ ಜಾಗೀರದಾರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಹೊನ್ನಮಲ್ಲ ಸಾರವಾಡ, ಮಹಾದೇವಿ ಗೋಕಾಕ, ಆನಂದ ಛಾಯಾಗೋಳ, ಭಾರತಿ ನಾವಿ, ಪ್ರವೀಣ ಚವ್ಹಾಣ, ಸುಂದರಪಾಲ ರಾಠೋಡ, ನಬೀಲಾಲ ನಾಯ್ಕೋಡಿ, ಆನಂದ ಜಾಧವ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಫೆ. 21ರಂದು ಪಂಚ ಗ್ಯಾರಂಟಿ ಅನುಷ್ಠಾನ ಕಾರ್ಯಾಗಾರ: ಬೋರಾಮಣಿ


