ಸಪ್ತಸಾಗರ ವಾರ್ತೆ ವಿಜಯಪುರ, ಮಾ. 4 :
ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಎತ್ತ ನೋಡಿದರೂ ಬಣ್ಣದಾಟದ ಸಡಗರ….ಕೆಂಪು, ಹಳದಿ, ಕೇಸರಿ ಹೀಗೆ ನಾನಾ ಬಣ್ಣಗಳನ್ನು ಬಳಿದುಕೊಂಡು, ಇತರರಿಗೂ ಉತ್ಸಾಹದಿಂದ ಎರಚಲು ಮುಂದಾದ ಯುವಕರ ಗುಂಪು…ಅಲ್ಲಲ್ಲಿ ಹೋಲಿ ಇವೆಂಟ್‌ಗಳಲ್ಲಿ ಯುವಕರ ಅಮಿತೋತ್ಸಾಹದ ಬಣ್ಣದಾಟ, ಕುಣಿದಾಟ, ಬೈಕ್ ಮೇಲೆ ಯುವಕರ ಹರ್ಷೋದ್ಘಾರದ ಸಂಚಾರ…
ಹೋಳಿ ಹುಣ್ಣಿಮೆ ಅಂಗವಾಗಿ ಬುಧವಾರ ವಿಜಯಪುರದಲ್ಲಿ ಕಂಡು ಬಂದ ದೃಶ್ಯಗಳಿವು.
ಬೆಳಿಗ್ಗೆಯಿಂದಲೇ ವಿಜಯಪುರ ರಂಗಿನಾಟದಲ್ಲಿ ಮಿಂದೆದಿತ್ತು. ಸೂರ್ಯನ ಪ್ರಖರವಾದ ಬಿಸಿಲು ಬಣ್ಣದಾಟಕ್ಕೆ ಬ್ರೇಕ್ ಬೀಳಲಿಲ್ಲ. ಮಧ್ಯಾಹ್ನವಾದರೂ ಬಣ್ಣದಾಟದ ಉತ್ಸಾಹಕ್ಕೆ ಮಾತ್ರ ಕೊರತೆ ಇರಲಿಲ್ಲ. ಮಧ್ಯಾಹ್ನದಲ್ಲಿ ಅನೇಕ ಯುವಕರು ತಂಪು ಪಾನೀಯ ಸೇವಿಸಿ ಬಣ್ಣದಾಟದಲ್ಲಿ ತೊಡಗಿದರು.
ಬೆಳಿಗ್ಗೆಯಿಂದಲೇ ಬಣ್ಣದಾಟದ ಸಂಭ್ರಮ ಜೋರಾಗಿತ್ತು. ನಿನ್ನೆ ಕಾಮದಹನ ನೆರವೇರಿಸಿದ ನಂತರ ಯುವಕರು, ಚಿಣ್ಣರು ಬೆಳಿಗ್ಗೆಯಿಂದಲೇ ಬಣ್ಣದಾಟದಲ್ಲಿ ತೊಡಗಿಸಿಕೊಂಡರು. ಹತ್ತಾರು ಬಣ್ಣ ಬಳಿದುಕೊಂಡು ತಮ್ಮ ಸ್ನೇಹಿತರ ಮನೆಗೆ ಹೋಗಿ ಅವರನ್ನು ಬಣ್ಣ ಬಳಿದು ಸಂಭ್ರಮಿಸಿದರು. ಬಣ್ಣ ಆಡಲು ಆಸಕ್ತಿ ಇಲ್ಲದೇ ಹೊರಗಡೆ ಹೋಗಿದ್ದ ಸ್ನೇಹಿತರನ್ನು ಅವರಿದ್ದ ಸ್ಥಳಕ್ಕೆ ಧೀಡಿರ್ ಭೇಟಿ ನೀಡಿ ಬಣ್ಣ ಎರಚಿ ಅವರನ್ನು ಬಣ್ಣದ ಸಂಭ್ರಮದಲ್ಲಿ ಮಿಂದೇಳುವಂತೆ ಮಾಡಿದ ಅನೇಕ ದೃಶ್ಯಾವಳಿಗಳು ಎಲ್ಲೆಡೆ ಗೋಚರಿಸಿದವು.
ಚಿಕ್ಕಮಕ್ಕಳು ಪಿಚಕಾರಿ ಮೂಲಕ ಬಣ್ಣ ಉಗ್ಗಿದರು. ಇನ್ನೂ ನವಬಗೆಯ ಗನ್ ಮಾದರಿಯಲ್ಲಿ ಬಣ್ಣ ಬಳಿದುಕೊಂಡು ಬಣ್ಣವನ್ನು ಶೂಟ್ ಮಾಡುವ ಮೂಲಕವೂ ಚಿಣ್ಣರು ಸಂಭ್ರಮಿಸುವ ಪರಿ ಎಲ್ಲರಿಗೂ ಖುಷಿ ತರಿಸಿತು.
ಯುವಕರು ಹಲಗೆ ಬಾರಿಸುತ್ತಾ, ಭರ್ಜರಿಯಾಗಿ ಬೈಕ್ ರೈಡ್ ಮಾಡುತ್ತಾ ಹರ್ಷೋದ್ಘಾರ ಮಾಡುತ್ತಾ ರಸ್ತೆಯುದ್ದಕ್ಕೂ ಸಂಭ್ರಮಿಸಿದರು. `ಹೋಲಿ ಹೈ….’ ಎಂಬ ಹರ್ಷೋದ್ಘಾರ ಮಾಡಿ ಸಂಭ್ರಮಿಸಿದ್ದೇ ಸಂಭ್ರಮಿಸಿದ್ದರು. ಎಲ್ಲೆಡೆ ರಂಗಿನಾಟದ ವೈಭವ ಮನೆ ಮಾಡಿತ್ತು. ಇನ್ನೂ ಕೆಲವರು ಅಣುಕು ಶವಯಾತ್ರೆ, ಸೋಗು ಹಾಕುವ ಮೂಲಕ ಸಂಭ್ರಮಿಸಿದರು.
ಅಮಿತೋತ್ಸಾಹದ ಬಣ್ಣದಾಟ…
ಕೆಲವು ತೋಟದ ನಿವಾಸಗಳಲ್ಲಿ ಬಣ್ಣದಾಟದ ಇವೆಂಟ್ ಆಯೋಜಿಸಲಾಗಿತ್ತು. ಬಗೆ ಬಗೆಯ ಸಿಹಿ ತಿನಿಸುಗಳು, ತಂಪು ಪಾನೀಯಗಳ ವ್ಯವಸ್ಥೆ ಮಾಡಲಾಗಿತ್ತು.
ಅಲ್ಲಿ ಉತ್ಸಾಹಿಗಳು `ರಂಗ ಬರಸೇ….’ ಎಂಬಿತ್ಯಾದಿ ಬಣ್ಣದಾಟಕ್ಕೆ ಸಂಬಂದಧಿಸಿದ ಚಲನಚಿತ್ರ ಗೀತೆಗಳಿಗೆ ಉತ್ಸಾಹದಿಂದ ಹೆಜ್ಜೆ ಹಾಕಿದರು. ರೈನ್ ಡ್ಯಾನ್ಸ್ ಅಡಿಯಲ್ಲಿ ಬಣ್ಣದಾಟ ಆಡಿ ಯುವಕರ ಅಮಿತೋತ್ಸಾಹ ಮುಗಿಲು ಮುಟ್ಟಿತ್ತು.
ಅನೇಕ ಸ್ಥಳಗಳಲ್ಲಿ ಡಿಜೆಯ ಅಬ್ಬರದಲ್ಲಿ ಹೋಳಿ ಹಬ್ಬದ ಗೀತೆಗಳಿಗೆ ಸಾವಿರಾರು ಯುವಕರು ಸಂಭ್ರಮದಿಂದ ಬಣ್ಣ ಎರಚಿ ನರ್ತನ ಮಾಡಿ ಖುಷಿ ಪಟ್ಟರು.


