ಸಪ್ತಸಾಗರ ವಾರ್ತೆ, ವಿಜಯಪುರ, ಮಾ. 6:
ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಸಿದ ಆರೋಪದ ಹಿನ್ನಲೆಯಲ್ಲಿ ಜಿಲ್ಲೆಯ ಇಂಡಿಯ ಕೆಬಿಜೆಎನ್ ಎಲ್ ಕಿರಿಯ ಎಂಜಿನಿಯರ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ 4.60 ಕೋಟಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.
ಇಂಡಿ ಕೆಬಿಜೆಎನ್ ಎಲ್ ಕಿರಿಯ ಎಂಜಿನಿಯರ್ ಪ್ರಕಾಶ ಈರಪ್ಪ ಗೊಡಬೋಳೆ ಅವರು ಅಕ್ರಮ ಆಸ್ತಿ ಗಳಿಸಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ.
ಇಂಡಿ ಕೆಬಿಜೆಎನ್ ಎಲ್ ಕಿರಿಯ ಎಂಜಿನಿಯರ್ ಗೋಡಬೊಳೆ ಅವರು ಆದಾಯಕ್ಕಿಂತ ಹೆಚ್ಚು ಅಕ್ರಮವಾಗಿ ಆಸ್ತಿ ಗಳಿಸಿದ ಬಗ್ಗೆ ಮಾಹಿತಿ ಆಧರಿಸಿ ಲೋಕಾಯುಕ್ತ ಪೊಲೀಸರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಃಡು ಕೋರ್ಟ್ ವಾರಂಟ್ ಪಡೆದು ಗೋಡಬೊಳೆ ಅವರ ಮನೆ, ಕಚೇರಿ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿದ್ದಾರೆ.
ಮಾ. 3 ರಂದು ಬೆಳಿಗ್ಗೆ ಆಪಾದಿತ ನೌಕರರಿಗೆ ಸಂಬಂಧಿಸಿದ ಬೆಂಗಳೂರು ನಗರದ ಮಹಾದೇವಪುರ ವಿದ್ಯಾ ಹೆರಿಟೇಜ್ ಅಪಾರ್ಟಮೆಂಟ್ನಲ್ಲಿರುವ ಮನೆ, ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ವರವಟ್ಟಿ ಬಿ. ಗ್ರಾಮದ ಮನೆ, ಆಪಾದಿತರಿಗೆ ಸಂಬಂಧಿಸಿದ ಶಾಲೆ ಮತ್ತು ಆಪಾದಿತರು ಕರ್ತವ್ಯ ನಿರ್ವಹಿಸುತ್ತಿರುವ ಕಛೇರಿ ಶೋಧನೆ ಕಾರ್ಯ ನಡೆಸಿದ್ದು, ಶೋಧನೆ ವೇಳೆ ಆಪಾದಿತರ ಬೆಂಗಳೂರು ನಗರದ ಮನೆಯಲ್ಲಿ 4 ಐಷಾರಾಮಿ ವಾಹನಗಳು, ರೂ.21,97,500 ಬೆಳ್ಳಿ ಬಂಗಾರದ ಆಭರಣಗಳು ಮತ್ತು ಇತರೆ ಆಸ್ತಿಗಳಿಗೆ ಸಂಬಂಧಿಸಿದ ದಾಖಲಾತಿಗಳು ದೊರೆತಿದ್ದು, ಅಂದಾಜು 4.60 ಕೋಟಿಗೂ ಹೆಚ್ಚಿನ ಅಕ್ರಮ ಆಸ್ತಿ ಗಳಿಸಿರುವದು ಪತ್ತೆಯಾಗಿದೆ.
ವಿಜಯಪುರ ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶ್ ಅವರ ಮಾರ್ಗದರ್ಶನದಲ್ಲಿ ಡಿಎಸ್ಪಿ ಮಲ್ಲಿಕಾರ್ಜುನ ತುಳಸಿಗೇರಿ, ಪೊಲೀಸ್ ಇನ್ಸಪೆಕ್ಟರ್ ರುಗಳಾದ ಆನಂದ ವಿ. ಟಕ್ಕನ್ನವರ್, ಆನಂದ ಡೋಣಿ, ನಿಂಗಪ್ಪ ಪೂಜೇರಿ, ಬಾಬಾಸಾಹೇಬ ಪಾಟೀಲ, ಮಲ್ಲಿಕಾರ್ಜುನ ಬಿರಾದಾರ ಹಾಗೂ ಕರ್ನಾಟಕ ಲೋಕಾಯುಕ್ತ, ವಿಜಯಪುರ ಹಾಗೂ ಬಾಗಲಕೋಟೆ, ಬೀದರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಶೋಧನೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಇಂಡಿ ಕೆಬಿಜೆಎನ್ ಎಲ್ ಕಿರಿಯ ಎಂಜಿನಿಯರ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ


