ಬಜೆಟ್: ವಿಜಯಪುರ ಮಹಾನಗರ ನಿರ್ಲಕ್ಷ್ಯ-ಎಂಎಲ್ಸಿ ಕೇಶವ ಪ್ರಸಾದ

ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 6: ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ವಿಜಯಪುರ ಮಹಾನಗರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಬಹುನಿರೀಕ್ಷಿತ ವಿಮಾನ ನಿಲ್ದಾಣವನ್ನು ಯಾವಾಗ ಪ್ರಾರಂಭಮಾಡಲಾಗುತ್ತದೆ ಎಂಬುದರ ಬಗ್ಗೆ ಖಚಿತತೆ ಇಲ್ಲ ಎಂದು ವಿಧಾನ ಪರಿಷತ್ ಶಾಸಕ ಕೇಶವ ಪ್ರಸಾದ ಎಸ್. ಹೇಳಿದ್ದಾರೆ.
ವಿಶೇಷವಾಗಿ ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ನಿರ್ದಿಷ್ಟವಾದ ಅನುದಾನವನ್ನು ಒದಗಿಸಿಲ್ಲ.
•ಕಳೆದ ಬಜೆಟ್ ನಲ್ಲಿ ಘೋಷಿಸಲಾದ ಫುಡ್ಪಾರ್ಕ್ ಹಾಗೂ ದ್ರಾಕ್ಷಿ ಬೆಳೆಗಾರರ ಕೋಲ್ಡ್ ಸ್ಟೋರೇಜ್ ಪ್ರಗತಿಯಾಗಿಲ್ಲ, ಈ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪವಿಲ್ಲ.
ಉತ್ತರ ಕರ್ನಾಟಕ ಭಾಗದ ಕ್ರೀಡೆಯ ಪ್ರೋತ್ಸಾಹಕ್ಕೆ ವಿಜಯಪುರ ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬಹು ಉಪಯೋಗಿ ಕ್ರೀಡಾಂಗಣವನ್ನು ನಿರ್ಮಿಸಲಾಗುವುದೆಂದು ಆಶಿಸಲಾಗಿತ್ತು, ಅದರ ಬಗ್ಗೆ ಈ ಬಜೆಟ್ ನಲ್ಲಿ ಚಕಾರವಿಲ್ಲ.
ಶ್ರೀ ಲಿಂಗಕೈ ಶ್ರೀ ಸಿದ್ದೇಶ್ವರ ಶ್ರೀಗಳ ಅಧ್ಯಯನ ಕೇಂದ್ರ ಸ್ಥಾಪಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ತಿಳಿಸಿದರು.
ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ವರ್ಷದಲ್ಲಿ ತರಗತಿ ಪ್ರಾರಂಭಿಸಲಾಗುವುದೆಂದು ಆಶಿಸಲಾಗಿತ್ತು. ಅದು ಹುಸಿಯಾಗಿದೆ ಎಂದರು.
ವಿಜಯಪುರ ಮಹಾನಗರವು ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಅನುದಾನದ ಬಗ್ಗೆ ಪ್ರಸ್ತಾಪವಿಲ್ಲದೆ ನಿರಾಸೆಯಾಗಿದೆ. ಜಿಲ್ಲೆಯಲ್ಲಿ ಉತ್ಕೃಷ್ಟ ಮಟ್ಟದ ದ್ರಾಕ್ಷಿ ಹಾಗೂ ಹತ್ತಿಯನ್ನು ಬೆಳೆಯಲಾಗುತ್ತಿದ್ದು, ವೈನ್ ಪಾರ್ಕ್ ಹಾಗೂ ಜವಳಿ ಪಾರ್ಕ್ ಸ್ಥಾಪನೆಯ ಬಗ್ಗೆ ಇದ್ದ ಕನಸುಗಳು ಬತ್ತಿಹೋಗಿವೆ ಎಂದು ಹೇಳಿದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಅನುದಾನವನ್ನು ನೀಡಿ ಮಹಿಳಾ ಶಿಕ್ಷಣಕ್ಕೆ ಪೂರಕ ವಾತಾವರಣ ಸೃಷ್ಠಿಸಿಲ್ಲ.
ಲಿಂಬೆ ಮುಂತಾದ ತೋಟಗಾರಿಕಾ ಬೆಳೆಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಸಂಬಂಧಿಸಿದ ವಿಚಾರಗಳಿಗೆ ವಿಶೇಷ ಮಾರುಕಟ್ಟೆ ಸ್ಥಾಪನೆಯ ಬಗ್ಗೆ ಪ್ರಸ್ತಾಪವಿಲ್ಲ ಎಂದಿದ್ದಾರೆ.

Share this