ಸಪ್ತಸಾಗರ ವಾರ್ತೆ ವಿಜಯಪುರ, ಮಾ. 6:
ಒಳ ಮೀಸಲಾತಿ ವಿಷಯವಾಗಿ ಯಾವ ಸೂಕ್ತ ನಿರ್ಧಾರವನ್ನು ಪ್ರಸಕ್ತ ಬಜೆಟ್ ವೇಳೆಯಲ್ಲಿ ಕೈಗೊಳ್ಳದ ಮುಖ್ಯಮಂತ್ರಿಗಳು ದಲಿತ ವರ್ಗಕ್ಕೆ ದೊಡ್ಡ ದ್ರೋಹ ಮಾಡಿದ್ದಾರೆ, ಇದು ಬಜೆಟ್ ಆಗಿರದೇ ಕೇವಲ ಘೋಷಣಾ ಪತ್ರವಾಗಿದೆ ಎಂದು ಭಾರತೀಯ ಜನತಾ ಪಕ್ಷದ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಒಳ ಮೀಸಲಾತಿ ಜಾರಿಯ ಬಗ್ಗೆ ಯಾವ ನಿರ್ಧಾರವನ್ನು ಪ್ರಕಟಿಸದ ಮುಖ್ಯಮಂತ್ರಿಗಳು ದಲಿತ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಅಹಿಂದ ನಾಯಕ ಎಂದು ಕರೆಯಿಸಿಕೊಳ್ಳುವ ಯಾವ ನೈತಿಕತೆಯನ್ನು ಅವರು ಉಳಿಸಿಕೊಂಡಿಲ್ಲ ಎಂದು ಕಾರಜೋಳ ಹೇಳಿದ್ದಾರೆ.
ಇದು ಬಜೆಟ್ ವಿಶ್ಲೇಷಣೆ ಎನ್ನುವುದಕ್ಕಿಂತ ಬಜೆಟ್ ಎನ್ನದೇ ಇದೊಂದು ಘೋಷಣೆ ಎನ್ನಬಹುದಾಗಿದೆ. ಯಾವ ಯೋಜನೆಗೆ ಅನುಷ್ಠಾನಕ್ಕೆ ಸಂಬಂಧಿಸಿದ ಮಹತ್ವದ ನಿರ್ಧಾರಗಳಿಲ್ಲ. ಕೇವಲ ರೈಲು ಬಿಟ್ಟಂತೆ ಘೋಷಣೆಗಳನ್ನು ಘೋಷಣೆ ಮಾಡುತ್ತಾ ಹೋಗಿದ್ದಾರೆ, ವಿಜಯಪುರ ಜಿಲ್ಲೆಯ ಸರ್ಕಾರಿ ಮೆಡಿಕಲ್ ಕಾಲೇಜ್ ವಿಷಯವಾಗಿ ದೊಡ್ಡ ಹೋರಾಟ ನಡೆಯಿತು. ಜನತೆ ಸಹ ನಿರೀಕ್ಷೆ ಇಟ್ಟುಕೊಂಡಿದ್ದರೂ, ಎಲ್ಲ ಸೌಲಭ್ಯಗಳಿದ್ದ ಸರ್ಕಾರಿ ಮೆಡಿಕಲ್ ಕಾಲೇಜ್‌ಗೆ ಕೇವಲ ಪ್ರಸ್ತಾವನೆ ಸಿದ್ಧಪಡಿಸುವ ಘೋಷಣೆ ಅದು ಕಾಟಾಚಾರಕ್ಕೆ ಎಂಬಂತೆ ಘೋಷಣೆ ಮಾಡಲಾಗಿದೆ. ಅನುದಾನದ ಲಭ್ಯತೆಗೆ ಇನ್ನೂ ಎಷ್ಟು ವರ್ಷ ಕಾಯಬೇಕೋ? ಎಂಬುದು ಗೊತ್ತಾಗದ ಸಂಗತಿ. ಕೃಷ್ಣಾ ಮೇಲ್ದಂಡೆ ಯೋಜನೆಗಳ ಬಗ್ಗೆ ಈ ಹಿಂದೆ ಮಾಡಿದ ನಿರ್ಧಾರವನ್ನೇ ಮರು ಮುದ್ರಣ ಮಾಡಿದ್ದಾರೆ. ಹೊಸ ಹೆಜ್ಜೆಗಳ ಬಗ್ಗೆ ಉಲ್ಲೇಖಿಸಿಲ್ಲ. ನಿಗದಿಗೊಳಿಸಿದ ಅನುದಾನದ ಬಗ್ಗೆ ಯಾವ ಮಾಹಿತಿಯೂ ಅಡಕವಾಗಿಲ್ಲ. ಇದೊಂದು ನಿರಾಶಾದಾಯಕ ಬಜೆಟ್ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಅವರು ಹೇಳಿದ್ದಾರೆ.
ಇದು ಬಜೆಟ್ ಅಲ್ಲ, ಕೇವಲ ಘೋಷಣಾ ಪತ್ರ: ಉಮೇಶ ಟೀಕೆ


