ಸಪ್ತಸಾಗರ ವಾರ್ತೆ,ವಿಜಯಪುರ, ಮಾ.7:
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪ್ರಗತಿ ಹಂತದಲ್ಲಿರುವ ಎಲ್ಲ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೂಡಲೇ ಪೂರ್ಣಗೊಳಿಸಬೇಕು ಎಂಸು ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಹೇಳಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ನಾನಾ ವಿಷಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಪಂಗಳಿಗೆ ಬಿಡುಗಡೆ ಮಾಡಿರುವ ಸಾಮಗ್ರಿ ವೆಚ್ಚದ ಅನುದಾನವನ್ನು ವಿಳಂಬ ಮಾಡದೇ ಇದೇ ಮಾ. 16ನೇ ತಾರೀಖಿನೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೋಂದಾಯಿಸಲ್ಪಟ್ಟ ಎಲ್ಲ ಕೂಲಿಕಾರರ ಇಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಮುಖ್ಯವಾಗಿ ಸಕ್ರಿಯ ಕೂಲಿಕಾರರ ಇಕೆವೈಸಿಯನ್ನು ಕಡ್ಡಾಯವಾಗಿ ಮಾ. 17 ನೇ ತಾರೀಖಿನೊಳಗೆ ಶೇ.100 ರಷ್ಟು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚಿಸಿದರು.
ಪ್ರತಿ ಗ್ರಾಪಂಗಳಲ್ಲಿ ನರೇಗಾ ಯೋಜನೆಯಡಿ ಚಾಲ್ತಿಯಲ್ಲಿರುವ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಕೂಲಿಕಾರರ ಮುಖ ದೃಢೀಕರಣ ಮಾಡಿಸಬೇಕು ಎಂದು ಸೂಚಿಸಿದರು.
ಈಗಾಗಲೇ ಬೇಸಿಗೆ ಆರಂಭವಾಗಿರುವುದರಿಂದ ಗ್ರಾಮೀಣ ಜನರಿಗೆ ಉದ್ಯೋಗದ ಅವಶ್ಯಕತೆಯಿದೆ. ಅಂತಹವರಿಗೆ ಗ್ರಾಪಂ ವತಿಯಿಂದ ಕಡ್ಡಾಯವಾಗಿ ಉದ್ಯೋಗ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಪ್ರಸ್ತುತ ಸಾಲಿನಲ್ಲಿ ವಿಜಯಪುರ ಜಿಲ್ಲೆಗೆ 29.00 ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ 23.90 ಲಕ್ಷ ಮಾನವ ದಿನಗಳ ಸೃಜನೆಯಾಗಿದೆ. ಪ್ರಸ್ತುತ ವರ್ಷ ಮುಕ್ತಾಯಗೊಳ್ಳಲು ಕೆಲವು ದಿನಗಳ ಮಾತ್ರ ಬಾಕಿ ಇರುತ್ತದೆ. ಆದ್ದರಿಂದ ಬಾಕಿ ಉಳಿದ ಮಾನವ ದಿನಗಳನ್ನು ಸೃಜನೆ ಮಾಡಿ ಶೇ.100 ರಷ್ಟು ಪ್ರಗತಿ ಸಾಧಿಸಬೇಕು ಎಂದು ಸೂಚಿಸಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಕ್ಷೇತ್ರ ಮಟ್ಟದಲ್ಲಿ ಅತ್ಯಂತ ಕ್ರಿಯಾಶೀಲರಾಗಿ ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂನ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ಜಿಲ್ಲೆಯ ಎಲ್ಲ ತಾಲೂಕುಗಳ ಸಹಾಯಕ ನಿರ್ದೇಶಕರು(ಗ್ರಾ.ಉ), ಜಿ.ಪಂ. ನ ಅಭಿವೃದ್ಧಿ ಶಾಖೆಯ ಅಧೀಕ್ಷಕರು, ಎ.ಡಿ.ಪಿ.ಸಿ, ಜಿಲ್ಲಾ ಎಂ.ಐ.ಎಸ್. ಸಂಯೋಜಕರು, ಜಿಲ್ಲಾ ಅಕೌಂಟ್ಸ್ ಮ್ಯಾನೇಜರ್, ಜಿಲ್ಲಾ ಐಇಸಿ ಸಂಯೋಜಕರು, ಜಿ.ಪಂ.ನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು, ತಾಲೂಕು ಎಮ್.ಐ.ಎಸ್ ಸಂಯೋಜಕರು, ಐಇಸಿ ಸಂಯೋಜಕರು, ಆಡಳಿತ ಸಹಾಯಕರು, ಬಿ.ಎಫ್.ಟಿ ಗ್ರಾಮ ಕಾಯಕ ಮಿತ್ರರು ಉಪಸ್ಥಿತರಿದ್ದರು.
ಆದ್ಯತೆ ಮೇರೆಗೆ ಮನರೇಗಾ ಯೋಜನೆ ಕಾಮಗಾರಿ ಪೂರ್ಣಗೊಳಿಸಿ: ಪ್ರಕಾಶ ವಡ್ಡರ ಅಧಿಕಾರಿಗಳಿಗೆ ಸೂಚನೆ


