ಸಪ್ತಸಾಗರ ವಾರ್ತೆ, ವಿಜಯಪುರ, ಮಾ. 8:
ಮಹಿಳೆಯರು ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳಲ್ಲಿ ಕ್ರಿಯಾಶೀಲರಾಗಿ ಆರ್ಥಿಕ ಸಬಲೀಕರಣ ಹೊಂದಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಶು ಅಭಿವೃದ್ಧಿ ಯೋಜನೆ, ಸರ್ಕಾರೇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಇಲ್ಲಿನ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಅನೇಕ ಯೋಜನೆಗಳ ಅನುಷ್ಟಾನದ ಮೂಲಕ ಮಹಿಳೆಯರನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲರನ್ನಾಗಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸಲಾಗುತ್ತಿದೆ. ಮಹಿಳೆಯರು ಇಂದು ಎಲ್ಲ ರಂಗಗಳಲ್ಲೂ ದಾಪುಗಾಲನ್ನಿಟ್ಟಿರುವುದು ಸಂತಸದ ಸಂಗತಿ ಎಂದರು.
ಆದರೆ ಸಾಮಾಜಿಕ ಪಿಡುಗಾಗಿರುವ ಬಾಲ್ಯವಿವಾಹ, ವರದಕ್ಷಿಣೆ, ಪ್ರಸವ ಪೂರ್ವ ಲಿಂಗ ಪತ್ತೆ ಹಾಗೂ ಹತ್ಯೆ, ಕೌಟುಂಬಿಕ ಹಿಂಸೆಯಂತಹ ಸಮಸ್ಯೆಗಳನ್ನು ತೊಡೆದು ಹಾಕಲು ಸಾಕಷ್ಟು ಕಾಯ್ದೆ ಕಾನೂನು ಜಾರಿಯಲ್ಲಿದ್ದು, ಸಂಬಂಧಿಸಿದ ಇಲಾಖೆಗಳು ಈ ನಿಟ್ಟಿನಲ್ಲಿ ಕೈ ಜೋಡಿಸುವ ಮೂಲಕ ಈ ಪಿಡುಗುಗಳ ನಿರ್ಮೂಲನೆ ಹಾಗೂ ಕಡಿವಾಣಕ್ಕೆ ಕಟಿಬದ್ಧರಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಹಿಳೆಯರು ತಮಗಿರುವ ಆರ್ಥಿಕ ಸೌಲಭ್ಯಗಳ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ತಮಗಿರುವ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು ಎಂದು ಮಹಿಳೆಯರಿಗೆ ಸಲಹೆ ಮಾಡಿದರು.
ಮಹಿಳೆಯರು ಇಂದು ಬಾಹ್ಯಾಕಾಶ ಸಾಧನೆ ಮಾಡಿದ್ದಾರೆ. ಫ್ಲೈಟ್ ಓಡಿಸುತ್ತಿದ್ದಾರೆ. ಸೈನ್ಯದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಮಹಿಳಾ ಕ್ರಿಕೆಟ್ ನಲ್ಲಿ ನಮ್ಮದೇಶದ ಮಹಿಳೆಯರು ತೋರಿರುವ ಸಾಧನೆ ಅಪಾರವಾಗಿದೆ ಎಂದು ಮಹಿಳಾ ಸಾಧನೆಗಳನ್ನು ವಿವರಗಳನ್ನು ನೆರೆದ ಮಹಿಳೆಯರ ಮುಂದೆ ತೆರೆದಿಟ್ಟರು.
ಸಾಮಾಜಿಕ ಸ್ಥಳದಲ್ಲಿ ಮಹಿಳೆ ಸ್ವಾವಲಂಬಿಯಾಗಿ ತನ್ನ ಕುಟುಂಬವನ್ನು ಸಮರ್ಪಕವಾಗಿ ನಿಭಾಯಿಸುವ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಹಲವು ಸಾಮಾಜಿಕ ಸಮಸ್ಯೆಗಳಿಗೆ ಕಾಯ್ದೆ ಕಾನೂನುಗಳ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾಕಷ್ಟು ಮಹಿಳೆಯರು ಇಂದು ಅಭಿವೃದ್ಧಿಯ ಪಥದತ್ತಮುಖ ಮಾಡಿದ್ದಾರೆ. ಆದಾಗ್ಯೂ
ಮಹಿಳೆಯರು ಉನ್ನತ ಶಿಕ್ಷಣ ಪಡೆಯುವುದು ಮೂಲಕ ಸ್ವಾವಲಂಬಿ ಜೀವನದತ್ತ ದಿಟ್ಟ ಹೆಜ್ಜೆ ಇರಿಸಬೇಕು ಎಂದರು.
ಮಹಿಳೆಯರ ಸಬಲೀಕರಣಕ್ಕೆ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು.ವಿಶೇಷವಾಗಿ ಮಹಿಳಾಪರ ಕಾನೂನುಗಳಿವೆ. ಅವುಗಳನ್ನು ಸದ್ಬಳಕೆ ಮಾಡುಕೊಳ್ಳಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದಲೂ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ.
ಪೋಕ್ಸೊ ಪ್ರಕರಣ ಜರುಗದಂತೆ,ಬಾಲ್ಯ ವಿವಾಹ ತಡೆಗಟ್ಟಲಾಗುತ್ತಿದೆ. ಜೊತೆಗೆ ಪೋಷಣ ಅಭಿಯಾನ, ಬೇಟಿ ಬಚಾವೋ ಬೇಟಿ ಪಡಾವೋ ಸೇರಿದಂತೆ ಅನೇಕ ಕಾಯ್ದೆ, ಯೋಜನೆ ಮಹಿಳೆಯರ ಅಭ್ಯುದಯಕ್ಕಾಗಿವೆ. ಮಹಿಳೆಯರು ಅವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಮಹಿಳೆಯರ ಬದುಕಿನಲ್ಲಿ ಇಂದು ಸಾಕಷ್ಟು ಬದಲಾವಣೆಯಾಗಿದೆ. ಸ್ವಂತ ನಿರ್ಣಯ ಕೈಗೊಳ್ಳುವ ಮಹತ್ತರ ಹೊಣೆಗಾರಿಕೆ ನಿಭಾಯಿಸುವ ಮೂಲಕ ಸಮಾಜಕ್ಕೆ ಶ್ರೇಷ್ಠ ಕೊಡುಗೆ ನೀಡುತ್ತಿದ್ದಾರೆ ಎಂದರು.
ಗ್ರಾಮೀಣ ಭಾಗದಲ್ಲಿ ಮಹಿಳೆಯರೇ ಭಾಗವಹಿಸುವ ಅನೇಕ ಸಮಿತಿ ಹಾಗೂ ಉಪ ಸಮಿತಿಗಳಿವೆ.
ಬಾಲ ವಿಕಾಸ ಸಮಿತಿಯು ಅಂಗನವಾಡಿಯಲ್ಲಿನ ಸಮಸ್ಯೆ, ಇತ್ಯರ್ಥ ಹಾಗೂ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಗ್ರಾಪಂ ಮಟ್ಟದಲ್ಲಿ ಮಹಿಳೆಯರನ್ನೊಗೊಂಡ
ಸಮಿತಿಗಳಿವೆ. ಈ ಸಮಿತಿಗೆ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
ಸ್ವಸಹಾಯ ಸಂಘದಲ್ಲಿ ಸಿಗುವ ಸೌಲಭ್ಯ ಬಳಸಿಕೊಂಡು ಮಹಿಳೆಯರು ಆರ್ಥಿಕವಾಗಿ ಸಬಲರಾಬೇಕು. ಜೊತೆಗೆ ಉದ್ಯೋಗ ಸೃಷ್ಟಿಸಿಕೊಂಡು ಮಹಿಳೆಯರು ಸಬಲೀಕರಣರಾಗಬೇಕು ಎಂದ ಅವರು, ಈ ನಿಟ್ಟಿನಲ್ಲಿ ಮಹಿಳಾ ಕ್ಷೇತ್ರದಲ್ಲಿ ಅನೇಕ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವುವುದು ಸಬಲೀಕರಣಕ್ಕೆ ಸಾಕ್ಷಿಯಾಗಿದೆ ಎಂದರು.
ಸಖಿ ಒನ್ ಸ್ಟಾಪ್ ನಲ್ಲಿ ಕಾನೂನು ಸಲಹೆ ನೀಡಲಾಗುತ್ತಿದೆ. ಮಹಿಳಾ ಸಿಬ್ಬಂದಿ ಇರುವ ಅಕ್ಕ ಪಡೆ ವ್ಯವಸ್ಥೆ ಇದೆ ಎಂದರು.
ಅಂಗನವಾಡಿಗಳಲ್ಲಿ ಮಕ್ಕಳಿಗೆ ನಿಯಮಾನುಸಾರ ಇರುವ ಪೌಷ್ಟಿಕಾಂಶ ನೀಡಬೇಕು. ಮಗುವಿನ ತೂಕ ಮತ್ತು ಎತ್ತರ ಗಮನಿಸಬೇಕು. ಆರೋಗ್ಯಯುತ ಮಗು ದೇಶದ ಸಂಪತ್ತು, ಮಗು ಹಾಗೂ ತಾಯಿಗೆ ಪೌಷ್ಟಿಕಾಂಶ ಒದಗಿಸಬೇಕು. ಮಕ್ಕಳ ಕಲಿಕಾ ಚಟುವಟಿಕೆ ಕೈಗೊಳ್ಳಬೇಕು. ಇದರಿಂದ ಮಕ್ಕಳ ಬೆಳವಣಿಗೆ ಉತ್ತಮವಾಗುವುದರೊಂದಿಗೆ ಆ ಮಗು ನಿಸ್ಸಂಕೋಚವಾಗಿ ಬದುಕು ರೂಪಿಸಿಕೊಳ್ಳಲಿದೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಣದಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ. ಚವ್ಹಾಣ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆಯಡಿ ಮಹಿಳಾ ಸಬಲೀಕರಣ ಹಾಗೂ ಸ್ವಾವಲಂಬನೆಯ ಬದುಕು ನಡೆಸಲು ಬಹಳ ಅನುಕೂಲಕರವಾಗಿದೆ. ಗೃಹ ಲಕ್ಷ್ಮೀ ಯೋಜನೆಯಡಿ ನಮ್ಮ ಜಿಲ್ಲೆಯಲ್ಲಿ ಶೇ.98 ರಷ್ಟು ಲಾಭವನ್ನು ಪಡೆದುಕೊಂಡಿದ್ದರಿಂದ ರಾಜ್ಯದಲ್ಲಿ 6ನೇ ಸ್ಥಾನದಲ್ಲಿದ್ದೇವೆ.
ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯು ರಾಜ್ಯದ ಹೆಣ್ಣು ಮಕ್ಕಳಗಳಿಗೆ ಬಹಳ ದೊಡ್ಡ ಮಟ್ಟದಲ್ಲಿ ಅನುಕೂಲವಾಗಿದೆ ಎಂದರು.
ಇದೇ ವೇಳೆ ಬಾಲ್ಯ ವಿವಾಹ ದಂತಹ ಅನೇಕ ಸಾಮಾಜಿಕ ಸೇವೆ, ಮಕ್ಕಳ ಹಕ್ಕುಗಳ ರಕ್ಷಣೆ ಸೇರಿದಂತೆ ಸಾಮಾಜಿಕ ಕಳಕಳಿಯ ಕಾರ್ಯ ನಿರ್ವಹಿಸಿರುವ ಮಹಿಳಾ ಮೇಲ್ವಿಚಾರಕರು, ಇಲಾಖೆಯ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಗ್ರಾಮೀಣ ಭಾಗದಲ್ಲಿ ಮಕ್ಕಳ ಶ್ರೇಯೋಭಿವೃದ್ಧಿಗೆ ಕಾರ್ಯ ನಿರ್ವಹಿಸಿರುವ ವಿವಿಧ ಸರ್ಕಾರೇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಮೇಲ್ವಿಚಾರಕರು ಕಾರ್ಯಕರ್ತರು ಹಾಗೂ ಸಹಾಯಕಿರು, ಸಾರ್ವಜನಿಕರು ಉಪಸ್ಥಿತರಿದ್ದರು.
ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು- ಡಿಸಿ ಡಾ. ಆನಂದ ಕೆ.ಅಭಿಮತ


