ಸಪ್ತಸಾಗರ ವಾರ್ತೆ ವಿಜಯಪುರ, ಮಾ. 8: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಭಾನುವಾರ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವಿಜಯಪುರ ಜಿಲ್ಲಾ ಘಟಕವು ಮಹಿಳೆ ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ತಡೆಗಟ್ಟಲು ಆಗ್ರಹಿಸಿ ಸಹಿ ಸಂಗ್ರಹ ಮತ್ತು ಸಾಹಿತ್ಯ ಮಾರಾಟವನ್ನು ನಗರದ ಗಾಂಧಿ ವೃತದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮಹಿಳೆಯರು ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಜ್ಞಾನ ಪ್ರಪಂಚಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅದನ್ನೆಲ್ಲ ಲೆಕ್ಕಿಸದೆ ಬರಿ ಹೆಣ್ಣು ಭೋಗದ ವಸ್ತು ಎಂಬಂತೆ ಬಿತ್ತರಿಸಲಾಗುತ್ತಿದೆ. ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಊಳಿಗಮಾನ್ಯ ಮೌಲ್ಯಗಳು ಅವಳನ್ನು ದಾಸ್ಯದಲ್ಲಿರಿಸಿದರೆ, ಇಂದಿನ ಕೊಳೆತ ಸಾಂಸ್ಕೃತಿಕ ವ್ಯವಸ್ಥೆಯಿಂದಾಗಿ ಅಶ್ಲೀಲ ಸಿನಿಮಾ ಸಾಹಿತ್ಯ, ಜಾಹೀರಾತುಗಳು, ಪೊ ಸೈಟ್ ಗಳು , ಮದ್ಯ ಮಾದಕ ವಸ್ತುಗಳ ಹಾವಳಿಯಿಂದಾಗಿ ಸಾಮಾಜಿಕ ವಾತಾವರಣ ಕಲುಷಿತಗೊಂಡು ಅವಳ ಜೀವ -ಜೀವನದ ಮೇಲೆ ನಿರಂತರವಾಗಿ ದಾಳಿಗಳು ಹೆಚ್ಚುತ್ತಿವೆ.
ಮಹಿಳೆಯರ ಜ್ವಲಂತ ಸಮಸ್ಯೆಗಳಾದ ಬಾಲ್ಯ ವಿವಾಹ , ಸ್ತ್ರೀ ಭ್ರೂಣ ಹತ್ಯೆ , ವರದಕ್ಷಣೆ ಕೊಲೆ, ಲಿಂಗ ತಾರತಮ್ಯ, ಅಪೌಷ್ಟಿಕತೆ, ಅಭದ್ರತೆ ಹಾಗೂ ಕೌಟುಂಬಿಕ ದೌರ್ಜನ್ಯ, ಉದ್ಯೋಗಸ್ಥ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ಎಲ್ಲ ಸ್ಥರದ ಮಹಿಳೆಯರನ್ನು ಸಂಘಟಿಸಲಾಗುತ್ತಿದೆ.
ರಾಜ್ಯದಲ್ಲಿ ಮಕ್ಕಳು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಗುಂಪು ಅತ್ಯಾಚಾರಗಳು ಕ್ರೂರ ದಾಳಿಗಳು ಜನತೆಯನ್ನು ಆಕ್ರೋಶ ಭರಿತರನ್ನಾಗಿಸಿವೆ . ಕರ್ನಾಟಕದಲ್ಲಿ ಅತ್ಯಾಚಾರ- ಗುಂಪು ಅತ್ಯಾಚಾರದ ಪ್ರಕರಣಗಳು ಗಣನೀಯವಾಗಿ ಏರಿಕೆ ಆಗುತ್ತಲಿವೆ. 2023ರಲ್ಲಿ 600, 2024ರಲ್ಲಿ 739 ಕೇಸುಗಳು ಹಾಗೂ 2025 ಜುಲೈವರೆಗಿನ ಕೇವಲ ಏಳು ತಿಂಗಳಲ್ಲಿ 547 ಪ್ರಕರಣಗಳು ದಾಖಲಾಗಿವೆ. ಅಲ್ಲದೆ ರಾಜ್ಯದಲ್ಲಿ 4 ತಿಂಗಳಲ್ಲಿಯೇ 979 ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ರಾಜಧಾನಿಯಾದ ಬೆಂಗಳೂರಲ್ಲಿ ಅತಿ ಹೆಚ್ಚು ಎಂದು ಪೊಲೀಸ್ ಇಲಾಖೆ ಬಹಿರಂಗಪಡಿಸಿದೆ.
ಇನ್ನು ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಮಿತಿಮೀರುತ್ತಿವೆ, 2025 ರ ವರದಿಯ ಪ್ರಕಾರ ಕಳೆದ ಎರಡು ವರ್ಷದಲ್ಲಿ 43000 ಕ್ಕೂ ಅಧಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಹಾಗೂ ಆಡಿ ನಲಿಯಬೇಕಿದ್ದ ಎಳೆಯ ವಯಸ್ಸಿನ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುವ ಸಂಖ್ಯೆ ಭಾರಿ ಹೆಚ್ಚಳವಾಗಿದೆ. ಎರಡು ವರ್ಷದಲ್ಲಿ ಶೇ. 26 ರಷ್ಟು ಫೋಕ್ಸೊ ಕೇಸುಗಳು ಹೆಚ್ಚಾಗಿದೆ ಎಂದು ವರದಿಯಾಗಿದೆ. ಅದರಂತೆ ದಾಖಲಾಗದ ಅರ್ಧದಷ್ಟು ಪ್ರಕರಣಗಳು ಖುಲಾಸೆಯಾಗುತ್ತಿವೆ. 2022 ರಲ್ಲಿ ದಾಖಲಾದ 3209 ಪ್ರಕರಣದಲ್ಲಿ 1567 ಪ್ರಕರಣ ಖುಲಾಸೆಯಾಗಿದೆ. 1224 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದರೆ ಕೇವಲ 186 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ. ಇಂತಹ ಪ್ರಕರಣಗಳಲ್ಲಿ ಶಿಕ್ಷಕರು, ಪ್ರಭಾವಿ ರಾಜಕೀಯ ನಾಯಕರು, ಮಠಾಧೀಶರಂಥವರು ಭಾಗಿಯಾಗಿರುವುದು ನಾಡಿನ ದುರಂತವೇ ಸರಿ ಎಂದರು.
ಅದೇ ರೀತಿ ಕರ್ನಾಟಕದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಗರ್ಭಧಾರಣೆ ಆತಂಕಕಾರಿಯಾಗಿ ಬೆಳವಣಿಗೆ ಕಂಡಿದೆ. ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಆರ್ ಸಿಎಚ್ ಕೋಶದ ಅಂಕಿ ಅಂಶಗಳ ಪ್ರಕಾರ ಕರ್ನಾಟಕ ಏಪ್ರಿಲ್ 2024 ಮತ್ತು ಫೆಬ್ರುವರಿ 2025ರ ನಡುವೆ ಅಂದರೆ 10 ತಿಂಗಳಲ್ಲಿ 25,436 ಹದಿಹರೆಯದವರ ಗರ್ಭಧಾರಣೆಯನ್ನು ವರದಿ ಮಾಡಿದೆ. ಹದಿಹರೆಯದ ವರ ಗರ್ಭಧಾರಣೆ ಹೆಚ್ಚು ವರದಿಯಾದ ಜಿಲ್ಲೆಗಳಲ್ಲಿ ವಿಜಯಪುರ 3ನೇ ಸ್ಥಾನ ದಲ್ಲಿದೆ. ಇದು ದಾಖಲಾದ ಅಂಕಿ ಅಂಶಗಳಾದರೆ ಕೌಟುಂಬಿಕ ಗೌರವಕ್ಕೆ ಧಕ್ಕೆ ಉಂಟಾಗಬಹುದು ಎಂಬ ಕಾರಣಗಳಿಗಾಗಿ ಹಲವಾರು ದೂರುಗಳು ದಾಖಲಾಗದೆ ಉಳಿದಿರುವ ಎಷ್ಟೋ ಪ್ರಕರಣಗಳು ಇನ್ನೂ ಇವೆ. ಇತ್ತೀಚೆಗೆ 340 ವರದಕ್ಷಣೆ ಸಾವುಗಳು ವರದಿಯಾಗಿವೆ. ಹಳೆಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಸ್ತ್ರೀ ಭ್ರೂಣ ಹತ್ಯೆ, ಮರ್ಯಾದೆ ಹತ್ಯೆ ಅಂತಹ ಪ್ರಕರಣಗಳಿಗೆ ಮಹಿಳೆಯರು ಬಲಿಯಾಗುತ್ತಿದ್ದಾರೆ. ಎಲ್ಲ ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸಿ ಜೊತೆಗೆ ಶಿಕ್ಷಣ ಉದ್ಯೋಗ ಆರೋಗ್ಯದಂತ ಮೂಲ ಸೌಲಭ್ಯಗಳು ದೊರಕಬೇಕಾಗಿದೆ. ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸುವುದರೊಂದಿಗೆ ಹೆಣ್ಣು ಮಕ್ಕಳ ಆತ್ಮ ರಕ್ಷಣಾ ಕೌಶಲ್ಯ ತರಬೇತಿ (ಜೂಡೊ-ಕರಾಟೆ) ಶಾಲಾ ಕಾಲೇಜುಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳ್ಳಬೇಕು ಮತ್ತು ಮಹಿಳೆಯರ ಉದ್ಯೋಗದ ಸ್ಥಳಗಳಲ್ಲಿ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ಆಂತರಿಕ ದೂರು ಸಮಿತಿಗಳನ್ನು ರಚಿಸಬೇಕು. ಉದ್ಯೋಗಸ್ಥ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ , ಮಾಧ್ಯಮದಲ್ಲಿ ಬರುವಂತಹ ಅಶ್ಲೀಲತೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು ಎಂದು ನಡೆಯುತ್ತಿರುವ ಸಹಿಸಂಗ್ರಹಣೆಗೆ ವಿಜಯಪುರ ಜನತೆ ಸಂಪೂರ್ಣವಾಗಿ ಬೆಂಬಲಿಸಿ ತಮ್ಮ ಸಹಿ ನೀಡುವ ಮೂಲಕ ಹಾಗೂ ಉತ್ತಮ ಸಾಹಿತ್ಯವನ್ನು ತೆಗೆದುಕೊಳ್ಳುವ ಮೂಲಕ ಬೆಂಬಲ ನೀಡಿದರು. ಈ ಅಭಿಯಾನದಲ್ಲಿ ಎಐಎಂಎಸ್ಎಸ್ ಜಿಲ್ಲಾ ಅಧ್ಯಕ್ಷ ಗೀತಾ ಎಚ್. ಅವರು ಜಿಲ್ಲಾ ಕಾರ್ಯದರ್ಶಿ ಶಿವಬಾಳಮ್ಮ ಕೊಂಡಗೂಳಿ, ಜಂಟಿ ಕಾರ್ಯದರ್ಶಿ ಶಿವರಂಜಿನಿ, ಸದಸ್ಯರಾದ ಜಬಿನಾ ಅಥಣಿ, ಲಕ್ಷ್ಮಿ ಮುಂತಾದ ನೂರಾರು ಜನ ಸಾರ್ವಜನಿಕರು ಭಾಗವಹಿಸಿದ್ದರು.
ಮಹಿಳೆ ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ತಡೆಗಟ್ಟಲು ಆಗ್ರಹಿಸಿ ಸಹಿ ಸಂಗ್ರಹ ಮತ್ತು ಸಾಹಿತ್ಯ ಮಾರಾಟ


