ನಂಜನಗೂಡು ಮಠದಲ್ಲಿ ಶ್ರೀ ಸುಯತೀಂದ್ರರ ಆರಾಧನೆ

ಸಪ್ತಸಾಗರ ವಾರ್ತೆ,ವಿಜಯಪುರ,ಮಾ. 8:
ನವಮಂತ್ರಾಲಯದ ರೂವಾರಿ ಶ್ರೀ ಸುಯತೀಂದ್ರ ಶ್ರೀಪಾದಂಗಳವರ ಆರಾಧನೆಯನ್ನು ಭಾನುವಾರ ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅತ್ಯಂತ ಭಕ್ತಪೂರ್ವಕವಾಗಿ ಆಮಂತ್ರಿತ ಭಕ್ತರ ಸಮ್ಮುಖದಲ್ಲಿ ಆಚರಿಸ ಲಾಯಿತು.
ಅದರಂಗವಾಗಿ ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರ ನಡೆದು, ಬಳಿಕ ವೃಂದಾವನಕ್ಕೆ ಪಂಚಾಮೃತ ಅಭಿಷೇಕ ಮಾಡ ಲಾಯಿತು. ಬಳಿಕ ಪ್ರಲ್ಹಾದರಾಜರಿಗೆ ಕನಕಾಭಿಷೇಕ ನಡೆದು, ಶ್ರೀ ಸುಯತೀಂದ್ರರ ಭಾವಚಿತ್ರವನ್ನಿಟ್ಟ ರಥೋತ್ಸವ ಜರುಗಿತು.
2009ರಲ್ಲಿ ಪೀಠಾಧಿಕಾರಿಗಳ ಅವಧಿಯಲ್ಲಿ ಶತಮಾನ ಕಂಡರಿಯದ ಪ್ರವಾಹದಿಂದ ತಲ್ಲಣಿಸಿದ ಮಂತ್ರಾಲಯ ಪುಣ್ಯಕ್ಷೇತ್ರ ನಿರ್ಮಿಸಿದ ಪರಿಯಲ್ಲೆ ಶ್ರೀ ಸುಯತೀಂದ್ರತೀರ್ಥರು ತಾವು ಭಿನ್ನರೆಂದು ಲೌಕಿಕ ಜಗತ್ತಿಗೆ ಸಾರಿದ್ದನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಉಪನ್ಯಾಸ ನೀಡಿದ ಪಂಡಿತ ಮಧ್ವೇಶಾಚಾರ್ಯ ಜೋಶಿ(ಮುತ್ತಗಿ), ಮಂತ್ರಾಲಯ ಸುಕ್ಷೇತ್ರ ಇಂದು ವೈಭವಯುತವಾಗಿ ಬೆಳೆದಿದೆ. ಅದನ್ನು ಬೆಳಕಿಗೆ ತಂದ ಕೀರ್ತಿ ಶ್ರೀ ಸುಯತೀಂದ್ರರದು ಎಂದರು.
ಪ್ರವಚನ ಕೇಳುವದರಿಂದ ಮನಸ್ಸಿನಲ್ಲಿಯ ದುರ್ಬುದ್ಧಿ ದೂರವಾಗುತ್ತದೆ. ಭಕ್ತಿಯೇ ಮುಕ್ತಿಗೆ ಸಾಧನ. ಭಗವಂತನ ಸ್ಮರಣೆಯಿಂದ ಸಕಲ ವ್ಯಾಧಿ ದೂರವಾಗಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದರು.
ಜ್ಞಾನದಿಂದಲೇ ಮೋಕ್ಷ, ಅದರ ಸಾಧನೆಗೆ ಭಗವಂತನ ಅನುಗ್ರಹ ಅತ್ಯವಶ್ಯ ಎಂದರು. ಭಗವಂತನ ಅನುಗ್ರಹ ಆಗಲು ಜ್ಞಾನ ಮುಖ್ಯ” ಎಂದರು.
ಮಠದ ಅರ್ಚಕ ರವಿ ಆಚಾರ್ಯ ಹಾಗೂ ಶ್ರೀಧರಾಚಾರ್ಯ ವೃಂದಾವನಕ್ಕೆ ಬಗೆ ಬಗೆಯ ಹೂಮಾಲೆಗಳಿಂದ ಅಲಂಕರಿಸಿದ್ದರು.
ಶ್ರೀಮಠದ ವಿಚಾರಣಾಕರ್ತಾ ಗೋಪಾಲ ನಾಯಕ, ವಾಮನರಾವ ದೇಶಪಾಂಡೆ, ಕೆ ಜಿ ದೇಶಪಾಂಡೆ, ಪ್ರಕಾಶ ಬಿಜಾಪುರ, ಶ್ರೀಧರ ಜೋಶಿ (ಮುತ್ತಗಿ), ಅರುಣ ತೊರವಿ, ಹವಾಲದಾರ, ಕುಲಕರ್ಣಿ, ಗೊವಿಂದ ಸವದತ್ತಿ, ಅಶೋಕ ತಾವರಗೇರಿ, ಡಿ ಆರ್ ನಾಡಿಗ, ವಿಜಯೀಂದ್ರ ಎಸ್ ಜೋಶಿ, ಭೀಮಣ್ಣ ಹೆಗಡ್ಯಾಳ, ಪ್ರದೀಪ ಪಾಟೀಲ, ಅನಿಲ ಕುಮಾರ ಕಣಬೂರ ಮುಂತಾದವರು ಭಾಗವಹಿಸಿದ್ದರು.

Share this