ರುದ್ರಪ್ಪ ಆಸಂಗಿ
ಸಪ್ತಸಾಗರ ವಾರ್ತೆ ವಿಜಯಪುರ, ಮಾ. 9:
ವಿಶ್ವಖ್ಯಾತ ಗೋಳಗುಮ್ಮಟ ನಗರಿ ವಿಜಯಪುರ ನಗರದಲ್ಲಿ ಸಂಚಾರ ವ್ಯವಸ್ಥೆಗೆ ತುಕ್ಕು ಹಿಡಿದಿದ್ದು, ಶೀಘ್ರವಾಗಿ ಬೆಳವಣಿಗೆ ಹೊಂದುತ್ತಿರುವ ವಿಜಯಪುರ ನಗರದಲ್ಲಿ ಸಂಚಾರ ವ್ಯವಸ್ಥೆಗೆ ಕೂಡಲೇ ಮೇಜರ್ ಸರ್ಜರಿ ಬೇಕಿದೆ.
ಹೌದು. ಕಳೆದ ಹತ್ತಾರು ವರ್ಷಗಳಿಂದ ವಿಜಯಪುರ ಮಹಾನಗರದಲ್ಲಿ ತುಕ್ಕು ಹಿಡಿದ ಸಂಚಾರ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಇದರಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ನಗರದಲ್ಲಿ ಸಂಚರಿಸಲು ತುಂಬಾ ಕಷ್ಟವಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಹಾನಗರದಲ್ಲಿ ಜನಸಂಖ್ಯೆಯ ಜೊತೆ ಜೊತೆಯಲ್ಲಿಯೇ ವಾಹನಗಳ ಸಂಖ್ಯೆಯು ದ್ವಿಗುಣವಾಗುತ್ತಿದೆ. ಪಾದಚಾರಿಗಳಷ್ಟೇ ಅಲ್ಲ. ವಾಹನ ಸವಾರರು ಕೂಡ ವಿಜಯಪುರ ನಗರದಲ್ಲಿ ತಂತಿ ಮೇಲಿನ ನಡಿಗೆಯಂತೆ ಸಂಚರಿಸಬೇಕಾದ ಸ್ಥಿತಿ ಇದೆ.
ವರ್ಷದಿಂದ ವರ್ಷಕ್ಕೆ ನಗರ ತೀವ್ರ ಬೆಳವಣಿಗೆ ಹೊಂದುತ್ತಿದ್ದು, ಆದರೆ ನಗರದ ರಸ್ತೆಗಳು ಮಾತ್ರ ಹೇಳಿಕೊಳ್ಳುವಷ್ಟು ಅಗಲವಾಗಿಲ್ಲ. ಹೀಗಾಗಿ ಜನದಟ್ಟಣೆ ಜೊತೆ ಜೊತೆಯಲ್ಲೇ ವಾಹನಗಳ ಸಂಖ್ಯೆ ಅಧಿಕವಾಗಿ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ವಿಜಯಪುರ ನಗರದಲ್ಲಿ ವಾಹನ ಸವಾರರು ಅಷ್ಟೇ ಅಲ್ಲ. ಪಾದಚಾರಿಗಳೂ ಸಂಕಟ ಎದುರಿಸಬೇಕಾಗಿದೆ.
ವಿಜಯಪುರ ನಗರದಲ್ಲಿ ರೇಲ್ವೆ ಸ್ಟೇಷನ್ ನಿಂದ ಗಾಂಧಿ ವೃತದ ಮಾರ್ಗವಾಗಿ ಇಟಗಿ ಪೆಟ್ರೋಲ್ ಪಂಪ್ ವರೆಗೆ ದ್ವಿಪಥ ರಸ್ತೆ ನಿರ್ಮಾಣ ಮಾಡಲಾಗಿದೆ. ಗಾಂಧಿ ವೃತದಿಂದ ಸಿದ್ದೇಶ್ವರ ದೇವಸ್ಥಾನ ಮಾರ್ಗವಾಗಿ ಆಶ್ರಮ ಹೊರಗಿನ ರಸ್ತೆಯು ಕೂಡ ಅಷ್ಟೊಂದು ಅಗಲವಾಗಿಲ್ಲ. ನಗರದಲ್ಲಿ ಸರಿಯಾಗಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಎಡ, ಬಲ ಬದಿಯಲ್ಲಿ ಕಾರ್ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಎರಡು ಬದಿಯ ಬಹುತೇಕ ರಸ್ತೆಯಲ್ಲಿ ವಾಹನಗಳು ನಿಲುಗಡೆಯಾಗುತ್ತಿರುವುದರಿಂದ ರಸ್ತೆಗಳು ಇಕ್ಕಟ್ಟಾಗಿ ಇವೆ. ಇದಲ್ಲದೆ ರಸ್ತೆಗಳ ಎಡ, ಬಲಬದಿಯಲ್ಲಿ ಬೀದಿ ವ್ಯಾಪಾರಿಗಳು ರಸ್ತೆಗಳನ್ನು ಆಕ್ರಮಣ ಮಾಡಿಕೊಂಡಿರುವುದರಿಂದ ರಸ್ತೆಗಳು ಅಗಲೀಕರಣವಾದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಹಲವು ಬಾರಿ ರಸ್ತೆ ಅಗಲೀಕರಣ ಕಾರ್ಯ ಕೈಗೊಂಡಿದ್ದರೂ ಹೇಳಿಕೊಳ್ಳುವ ಮಟ್ಟಿಗೆ ರಸ್ತೆಗಳು ವಿಸ್ತಾರಗೊಂಡಿಲ್ಲ. ಹೀಗಾಗಿ ಈ ಹಿಂದೆ ಕೈಗೊಂಡ ರಸ್ತೆ ಅಗಲೀಕರಣ ಕಾರ್ಯವು ಬರೀ ನಾಮಕಾವಾಸ್ತೆ ಎನ್ನುವಂತಾಗಿದೆ.
ಐತಿಹಾಸಿಕ ವಿಜಯಪುರ ನಗರಕ್ಕೆ ದೇಶ, ವಿದೇಶದಿಂದ ಸಹಸ್ರಾರು ಪ್ರವಾಸಿಗರು ನಿತ್ಯವೂ ಆಗಮಿಸುವುದು ಸಹಜ. ಬಂದವರೆಲ್ಲ ನಗರದಲ್ಲಿನ ಸಂಚಾರ ವ್ಯವಸ್ಥೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸುವ ಬದಲು ಅಪಹಾಸ್ಯ ಮಾಡಿ ತೆರಳುವಂತಾಗಿದೆ.
ನಗರ ಯೋಜನೆಯನ್ನು ಸಿದ್ಧಪಡಿಸಬೇಕಾದ ನಗರ ಅಭಿವೃದ್ಧಿ ಯೋಜನಾ ಇಲಾಖೆಯು ಇದ್ದೂ ಇಲ್ಲದಂತಾಗಿದೆ. ವಾಹನ ಸವಾರರ ಹಾಗೂ ಪಾದಚಾರಿಗಳ ತೊಂದರೆ ಕಡೆಗೆ ನಗರ ಅಭಿವೃದ್ಧಿ ಯೋಜನಾ ಇಲಾಖೆ ಕಿಂಚಿತ್ತೂ ಗಮನ ಹರಿಸದೇ ಕುಂಭಕರ್ಣ ನಿದ್ರೆಯಲ್ಲಿದೆ ಎಂದು ಜನರು ಹಿಡಿ ಶಾಪ ಹಾಕುತ್ತಿದ್ದಾರೆ.
ನಗರದ ಸ್ಟೇಷನ್ ರಸ್ತೆಯಿಂದ ಇಟಗಿ ಪೆಟ್ರೋಲ್ ಪಂಪ್ ವರೆಗೆ ದ್ವಿಪಥ ರಸ್ತೆ ಇದ್ದರೂ ಎಲ್ಲ ವಾಹನಗಳಿಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು ಜಾರಿ ಮಾಡಿಲ್ಲ. ಸ್ಟೇಷನ್ ನಿಂದ, ಗಣೇಶನಗರದಿಂದ ತೊರವಿಯಿಂದ ಸಂಚರಿಸುವ ಆಟೋಗಳಿಗೆ ಗಾಂಧಿ ಚೌಕ್ ಬಳಿ ಇರುವ ಸರ್ಕಾರಿ ಗೌರ್ಮೆಂಟ್ ಕಾಲೇಜ್ ಪಕ್ಕದ ರಸ್ತೆಯಲ್ಲಿಯೇ ಆಟೋಗಳಿಗೆ ಸಂಚರಿಸಲು ಅವಕಾಶ ನೀಡಿದ್ದರಿಂದ ಸರ್ಕಾರಿ ಗೌರ್ಮೆಂಟ್ ಕಾಲೇಜ್ ಬದಿಯಲ್ಲಿ ಇರುವೆ ಕಾಲಿಡದಷ್ಟು ರಸ್ತೆಯಲ್ಲಿ ಆಟೋಗಳ ದಟ್ಟಣೆ ಆಗುತ್ತಿದ್ದು, ಗೌರ್ಮೆಂಟ್ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಕಾಲೇಜಿಗೆ ಹೋಗಿ ಬರಲು ಜೀವ ಕೈ ಯಲ್ಲಿ ಹಿಡಿದು ಸಂಚರಿಸಬೇಕಾಗಿದೆ. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಈ ಬಗ್ಗೆ ಹತ್ತಾರು ಸಲ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಅವೈಜ್ಞಾನಿಕ ಪಿಕಪ್ ಪಾಯಿಂಟ್
ಈ ಮೊದಲು ವಿಜಯಪುರ ನಗರದ ಹೆಡ್ ಪೋಸ್ಟ್ ಆಫೀಸ್ ಬದಿ ರಸ್ತೆಯಲ್ಲಿ ಜನರು ಆಟೋ ಹಿಡಿಯಲು ಪಿಕಪ್ ಪಾಯಿಂಟ್ ಕಲ್ಪಿಸಲಾಗಿತ್ತು. ಅದನ್ನು ರದ್ದುಪಡಿಸಿ ಗಾಂಧಿ ವ್ರತದಲ್ಲಿ ರಸ್ತೆ ಸಿಗ್ನಲ್ ಬುಡದಲ್ಲಿಯೇ ಸಾರ್ವಜನಿಕರಿಗೆ ಆಟೋ ಹಿಡಿಯಲು ಪಿಕಪ್ ಪಾಯಿಂಟ್ ಕಲ್ಪಿಸಲಾಗಿದೆ. ಇದು ಅವೈಜ್ಞಾನಿಕ ಪಿಕಪ್ ಪಾಯಿಂಟ್ ಎಂದು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದರೂ ಸಂಬಂಧಿಸಿದ ಇಲಾಖೆಯವರು ಕಿಂಚಿತ್ತೂ ಗಮನ ಹರಿಸಿಲ್ಲ.
ಒಟ್ಟಿನಲ್ಲಿ ವಿಜಯಪುರ ನಗರದಲ್ಲಿ ಸಂಚಾರ ವ್ಯವಸ್ಥೆ ಎಂಬುದು ಸಾರ್ವಜನಿಕರ ಪಾಲಿಗೆ ನರಕ ಯಾತನೆ ಅನುಭವಿಸುವಂತಾಗಿದೆ.
ಇನ್ನಾದರೂ ಜಿಲ್ಲೆಯ ಜನಪ್ರತಿನಿದಿನಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹದಗೆಟ್ಟ ಸಂಚಾರ ವ್ಯವಸ್ಥೆಗೆ ಮೇಜರ್ ಸರ್ಜರಿಗೆ ಕ್ರಮ ಕೈಗೊಳ್ಳುವರೆ? ಎಂದು ವಿಜಯಪುರ ಜನತೆ ಜಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ.


