ಸಪ್ತಸಾಗರ ವಾರ್ತೆ,ಇಂಡಿ, ಮಾ. 11: ಧೂಮಪಾನವು ಗಂಭೀರ ವ್ಯಸನವಾಗಿದ್ದು, ಇದು ವ್ಯಕ್ತಿಯ ಆರೋಗ್ಯ, ಸುತ್ತಲಿನ ಪರಿಸರದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಧೂಮಪಾನ ಎಂದರೆ ದೇಹತ್ಯಾಗ ಎಂದರಿತುಕೊಂಡು ಆರೋಗ್ಯಕರ ಜೀವನಕ್ಕಾಗಿ ಎಲ್ಲರೂ ಧೂಮಪಾನದಿಂದ ದೂರವಿರುವುದು ಅತ್ಯಗತ್ಯ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಬುಧವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಧೂಮಪಾನ ನಿಷೇಧ ದಿನದ ನಿಮಿತ್ತ ಹಮ್ಮಿಕೊಂಡ ಧೂಮಪಾನದ ದುಷ್ಪರಿಣಾಮ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧೂಮಪಾನವು ನಿಧಾನಗತಿಯ ವಿಷವಾಗಿದೆ. ಅದು ಶ್ವಾಸಕೋಶದ ಕ್ಯಾನ್ಸರ್, ಹೃದಯರಕ್ತನಾಳದ ಕಾಯಿಲೆ, ಪಾರ್ಶ್ವವಾಯು ಮತ್ತು ಉಸಿರಾಟದ ದೀರ್ಘಕಾಲದ ಸಮಸ್ಯೆಗಳಿಗೆ ಕಾರಣವಾಗಿದ್ದು, ಇದನ್ನು ತ್ಯಜಿಸಿ,ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಜನರ ಸ್ವಯಂ ಜಾಗೃತಿ ಅತ್ಯಗತ್ಯ ಎಂದು ಹೇಳಿದರು.
ಧೂಮಪಾನವು ಆರೋಗ್ಯಕ್ಕೆ ಮಾರಕ. 2022ರಲ್ಲಿ ಪ್ರಕಟವಾದ ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಸುಮಾರು 7 ಮಿಲಿಯನ್ ವ್ಯಕ್ತಿಗಳು ಜಾಗತಿಕವಾಗಿ ಧೂಮಪಾನದಿಂದ ಬಳಲುತ್ತಿದ್ದು, 1.2 ಮಿಲಿಯನ್ ಜನರು ಇತರರಿಂದ ಸೂಸುವ ಸಿಗರೇಟ್ ಹೊಗೆಯನ್ನು ಸೇವಿಸಿ, ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಅಂಕಿಅಂಶ ಮನುಕುಲದ ಆರೋಗ್ಯದ ಬದುಕಿಗೆ ಆತಂಕಕಾರಿಯಾಗಿದೆ ಎಂದು ಹೇಳಿದರು.
ಶಿಕ್ಷಕ ಎಸ್.ಎಸ್. ಅರಬ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವದಾದ್ಯಂತ ಧೂಮಪಾನದಿಂದಾಗಿ ಲಕ್ಷಾಂತರ ಅಕಾಲಿಕ ಸಾವುಗಳು ಸಂಭವಿಸುತ್ತಿವೆ. ವ್ಯಕ್ತಿಯ ಆರೋಗ್ಯ, ಆರ್ಥಿಕ ಸ್ಥಿತಿ ಮತ್ತು ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಧೂಮಪಾನ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಶಿಕ್ಷಕರಾದ ಎನ್.ಬಿ. ಚೌಧರಿ, ಎಸ್.ಪಿ. ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಮಕ್ಕಳು ಧೂಮಪಾನ ನಿಷೇಧದ ಜಾಗೃತಿಯ ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಿದರು.
ಧೂಮಪಾನ ನಿಷೇಧಕ್ಕೆ ಜನರ ಸ್ವಯಂ ಜಾಗೃತಿ ಅತ್ಯಗತ್ಯ- ಸಂತೋಷ ಬಂಡೆ


