ಸಪ್ತಸಾಗರ ವಾರ್ತೆ ಇಂಡಿ, ಮಾ. 12: ಇಂಡಿ ಲಿಂಬೆಗೆ ಜಿ ಐ ಟ್ಯಾಗ್ ಮಾನ್ಯತೆ ಪಡೆದ ಹಿನ್ನಲೆಯಲ್ಲಿ ವಿಶ್ವದೆಲ್ಲೆಡೆ ಬೇಡಿಕೆ ಹೆಚ್ಚಾಗಿದೆ ಎಂದು ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರು ಮತ್ತು ಯೋಜನಾ ಸಂಯೋಜಕರಾದ ಡಾ ಬಿ.ಫಕ್ರುದ್ದಿನ್ ಹೇಳಿದರು. ತಾಲ್ಲೂಕಿನ ತಡವಲಗಾ ಗ್ರಾಮದ ಜೋಡಗುಡಿಯ ಶ್ರೀ ಮರುಳಸಿದ್ದೇಶ್ವರ ಮಂಗಲ ಕಾರ್ಯಲಯ ಆವರಣದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ ಹಾಗೂ ರಾಜ್ಯ 20 ಜಿಐ ಟ್ಯಾಗ್ ಹೊಂದಿರುವ ಬೆಳೆಗಳು ಹಾಗೂ ಇತರೆ ದೇಸಿ ತಳಿಗಳ ಬೀಜ ಬ್ಯಾಂಕ್ ಸ್ಥಾಪನೆ ಯೋಜನೆ ತೋಟಗಾರಿಕೆ ಇಲಾಖೆ ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಇಂಡಿ -ವಿಜಯಪೂರ ಇವರ ಸಹಯೋಗದಲ್ಲಿ ಒಂದು ದಿನದ ತರಬೇತಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಜಯಪುರ ಜಿಲ್ಲೆಯ ಇಂಡಿ ಲಿಂಬೆ ತನ್ನ ವಿಶಿಷ್ಟ ಗುಣಮಟ್ಟ, ತೆಳುವಾದ ಸಿಪ್ಪೆ, ಮತ್ತು ಹೆಚ್ಚಿನ ರಸಭರಿತತೆಗೆ ಹೆಸರು ವಾಸಿಯಾಗಿದ್ದು, ಜಿಐ ಟ್ಯಾಗ್ ಮಾನ್ಯತೆ ಪಡೆಯಲು ವಿಶ್ವ ವಿದ್ಯಾಲಯ ವಿಜ್ಞಾನಿಗಳು ಒಂದು ವರ್ಷ ಆರು ತಿಂಗಳ ಸತತ ಪ್ರಯತ್ನದಿಂದ ಜಿ ಅಯ್ ಟ್ಯಾಗ್ ಸಾಧ್ಯವಾಗಿದೆ ಎಂದು ಹೇಳಿದರು.
ಈ ಪ್ರದೇಶವು ಕರ್ನಾಟಕದ ಸುಮಾರು ಶೇ.50ರಷ್ಟು ನಿಂಬೆ ಪೂರೈಸುತ್ತದೆ ಮತ್ತು ಇದು ಈಗ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಒಮಾನ್, ದುಬೈ, ಯುಕೆ, ಸೇರಿದಂತೆ ಅನೇಕ ರಾಷ್ಟ್ರಗಳಿಗೆ ರಫ್ತಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಇಂಡಿ ವ್ಯವಸ್ಥಾಪಕ ನಿರ್ದೇಶಕ ರಾಹುಲಕುಮಾರ ಬಾವಿದೊಡ್ಡಿ ಮಾತನಾಡಿ, ರಾಜ್ಯದಲ್ಲಿ 11 ಸಾವಿರ ಹೆಕ್ಟೇರ್ನಲ್ಲಿ ಲಿಂಬೆ ಬೆಳೆ ಇದ್ದರೆ, ವಿಜಯಪುರ ಜಿಲ್ಲೆಯಲ್ಲಿ 8 ಸಾವಿರ ಹೆಕ್ಟೇರ್, ಅದರಲ್ಲಿ ಇಂಡಿ ತಾಲೂಕಿನಲ್ಲೇ 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದೆ. ಈಗ ಕಾಗ್ಜಿ ತಳಿಯ ಲಿಂಬೆ ಬೆಳೆ ಕೈಗೊಳ್ಳಲು ಬೇರೆ ಜಿಲ್ಲೆ, ರಾಜ್ಯಗಳ ರೈತರು ಮುಂದಾಗಿದ್ದಾರೆ. ಹೀಗಾಗಿ ಲಿಂಬೆ ಬೆಳೆಯಲ್ಲಿ ಸಾಧನೆಗೈದ ಇಂಡಿ ತಾಲೂಕಿನ ಕೆಲ ರೈತರು ನರ್ಸರಿ ಮೂಲಕ ಲಿಂಬೆ ಸಸಿಗಳನ್ನು ತಯಾರಿಸಿ ಮಾರಾಟ ಪ್ರಕ್ರಿಯೆ ಕೈಗೊಂಡಿದ್ದಾರೆ ಎಂದು ಹೇಳಿದರು.
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ. ವೆಂಕಟೇಶಲು ಮಾತನಾಡಿ, ಇಂಡಿ ಕಾಗ್ಜಿ ಲಿಂಬೆಗೆ ಜಿಐ ಟ್ಯಾಗ್ ದೊರೆತ ನಂತರ, ಬೇಡಿಕೆ ಹೆಚ್ಚಾಗಿದ್ದು, ರೈತರು ಸಸಿಗಳನ್ನು ತಯಾರಿಸಿ ರಾಜ್ಯ ಹಾಗೂ ಹೊರರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕಾಗ್ಜಿ ತಳಿಯ ಲಿಂಬೆ ವರ್ಷಪೂರ್ತಿ ಫಸಲು ನೀಡುವ ಕಾರಣ, ರೈತರು ಆಸಕ್ತಿ ತೋರುತ್ತಿದ್ದಾರೆ. ಸಸಿ ಮಾರಾಟದಿಂದ ರೈತರು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ತಿಡಗುಂದಿ ತೋಟಗಾರಿಕೆ ಸಂಶೋಧನಾ ಕೇಂದ್ರ ಸಹಾಯಕ ಪ್ರಾಧ್ಯಾಪಕರು ಹಾಗೂ ಹಣ್ಣು ವಿಜ್ಞಾನ ವಿಭಾಗದ ಡಾ ಸಿದ್ದಣ್ಣ ಠೋಕೆ ಅವರು ರೈತರಿಗೆ ಲಿಂಬೆ ಹಣ್ಣುಗಳನ್ನು ಹೇಗೆ ಬೆಳೆಯಬೇಕು ಹಾಗೂ ನಿರ್ವಹಣೆ ಹಾಗೂ ಸಂಸ್ಕರಣ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಡವಲಗಾ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ತಮ್ಮಣ್ಣ ಪೂಜಾರಿ ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಗತಿ ಪರ ರೈತರಾದ ಮಲ್ಲನಗೌಡ ಪಾಟೀಲ (ಡೋಮನಾಳ), ರಾಜಶೇಖರ ನಿಂಬರಗಿ, ಬಸವರಾಜ ಇಂಡಿ, ಭೀಮರಾಯ ಹೀರಾಪೂರೆ, ಅಶೋಕ ಮಿರ್ಜಿ, ಮಳಸಿದ್ದಪ್ಪ ಖಸ್ಕಿ, ಬಸೀರ ಬಳೇಗಾರ, ಇಲಾಖೆಯ ಡಾ. ಮಲ್ಲಿಕಾರ್ಜುನ ಅವಟಿ, ಡಾ ರಾಘವೇಂದ್ರ ಆಚಾರಿ ಡಾ. ರಾಘವೇಂದ್ರ ಅವರು ರೈತರಿಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮವನ್ನು ತೋಟಗಾರಿಕೆ ಸಹ ಪ್ರಾಧ್ಯಾಪಕ ಡಾ. ಸತೀಶ್ ಡಿ ಸ್ವಾಗತಿಸಿದರು.
ಲೇಖನ ಎಲ್ ಎಂ ನಿರೂಪಿಸಿದರು. ಅಭಿನಯ ಎಂ. ವಂದಿಸಿದರು.
ಇಂಡಿ ಲಿಂಬಿಗೆ ವಿಶ್ವದೆಲ್ಲೆಡೆ ಒಮಾನ್ , ದುಬೈ , ಯುಕೆ , ಸೇರಿದಂತೆ ಇತರೆ ರಾಷ್ಟ್ರಗಳಿಗೆ ಬೇಡಿಕೆ :ಡಾ ಬಿ ಫಕ್ರುದ್ದೀನ್


