ಸಪ್ತಸಾಗರ ವಾರ್ತೆ, ವಿಜಯಪುರ,ಮಾ. 14:
ಬಾಬಾನಗರ ಬಳಿ ಎರಡೂವರೆ ವರ್ಷದಲ್ಲಿ ಡ್ಯಾಂ ನಿರ್ಮಾಣವಾಗಲಿದ್ದು, ಇದರಿಂದ ತಿಕೋಟಾ ಭಾಗದ ರೈತರಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಶನಿವಾರ ಮುಸ್ಸಂಜೆ ತಿಕೋಟಾ ಪಟ್ಟಣದಲ್ಲಿ ಬಾಬಾನಗರ ಬಳಿ ಡ್ಯಾಂ ನಿರ್ಮಾಣಕ್ಕೆ ಕಾರಣರಾದ ಹಿನ್ನೆಲೆಯಲ್ಲಿ ಸಚಿವ ಎಂ. ಬಿ. ಪಾಟೀಲ ಅವರನ್ನು ರೈತರು ಅಭಿನಂದನೆ ಕಾರ್ಯಕ್ರಮ ಆಯೋಜಿಸಿ ಮಣುಕ(ಒಣದ್ರಾಕ್ಷಿ) ಹಾರದಿಂದ ಸನ್ಮಾನಿಸಿ ತಾವು ಬೆಳೆದ ತೋಟಗಾರಿಕೆ ಉತ್ಪನ್ನಗಳನ್ನು ಸಮರ್ಪಿಸಿ ಕೃತಜ್ಞತೆ ಸಲ್ಲಿಸಿದರು.
ರೈತರಿಂದ ಅಭಿನಂದನೆ ಸ್ವೀಕರಿಸಿ ಮಾತಮಾಡಿದ ಸಚಿವರು, ತಾವು ಜಲಸಂಪನ್ಮೂಲ ಸಚಿವರಾದ ನಂತರ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗಾಗಿ ಕೈಗೊಂಡ ಕ್ರಮಗಳು, ಎದುರಿಸಿದ ಸವಾಲುಗಳು, ಅಸಾಧ್ಯವಾದುದುನ್ನು ಸಾಧಿಸಿದ ಬಳಿಕ ರೈತರಿಗೆ ಆದ ಸಂತಸದ ಕುರಿತು ಅನುಭವ ಹಂಚಿಕೊಂಡರು.
ಆದರೂ, ಬೇಸಿಗೆಯಲ್ಲಿ ತಿಕೋಟಾ ತಾಲೂಕಿನಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿತ್ತು. ನೀರಾವರಿ ಆಗಿರುವ ಹಿನ್ನೆಲೆಯಲ್ಲಿ ರೈತರ ಜಮೀನು ಸ್ವಾಧೀನ ಮಾಡುವ ಸ್ಥಿತಿ ಇರಲಿಲ್ಲ. ಹೀಗಾಗಿ ತುಂಬಾ ಯೋಚಿಸಿ ಬಾಬಾನಗರ ಬಳಿ ಇರುವ ಸರಕಾರಿ ಜಮೀನಿನಲ್ಲಿ ಡ್ಯಾಂ ನಿರ್ಮಿಸಲು ಬಜೆಟ್ ನಲ್ಲಿ ರೂ. 602 ಕೋ. ವೆಚ್ಚದ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಮಾದರಿ ಡ್ಯಾಂ ಇದಾಗಲಿದ್ದು, ನಮ್ಮ ಕೆಲಸ ಇಷ್ಟಕ್ಕೆ ನಿಲ್ಲುವುದಿಲ್ಲ. ದೇಶಕ್ಕೆ ಮಾದರಿಯಾಗುವಂತೆ ಹಳ್ಳಗಳನ್ನು ತುಂಬಿಸುವ ಯೋಜನೆಗೂ ಕ್ರಮ ಕೈಗೊಳ್ಳಲಾಗಿದೆ. ಬಾಕಿ ಉಳಿದಿರುವ ಹೊಲಗಾಲುವೆ ಕಾಮಗಾರಿಗಳ ಕೆಲಸ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿ. ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ತುಬಚಿ- ಬಬಲೇಶ್ವರ ಏತನೀರಾವರಿ ಯೋಜನೆಯಡಿ ಬಾಬಾನಗರ ಬಳಿ ಜಮೀನಿನಲ್ಲಿ ರೂ. 602 ಕೋ. ವೆಚ್ಚದಲ್ಲಿ ಬಾಬಾನಗರ ಡ್ಯಾಂ ನಿರ್ಮಾಣಕ್ಕೆ ಬಜೆಟ್ ನಲ್ಲಿ ಘೋಷಣೆ ಮಾಡಲು ಸಚಿವ ಎಂ. ಬಿ. ಪಾಟೀಲ ಕಾರಣರಾಗಿದ್ದಾರೆ. ಇದರಿಂದ ನಮ್ಮ ಭಾಗದಲ್ಲಿ ಬೇಸಿಗೆಯಲ್ಲೂ ನೀರು ಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ರೈತರ ಪರವಾಗಿ ಅಭಿನಂದನೆ ಸಲ್ಲಿಸಲಾಗುತ್ತಿದೆ. ಸಚಿವರಿಗೆ ಎಷ್ಡೇ ಕೃತಜ್ಞತೆ ಸಲ್ಲಿಸಿದರು ಸಾಲದು. ಅವರಿಗೆ ಸದಾ ಚಿರ ಋಣಿಯಾಗಿರುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸೋಮದೇವರಹಟ್ಟಿ ದುರ್ಗಾದೇವಿ ದೇವಸ್ಥಾನದ ಜಗನು ಮಹಾರಾಜ, ರೈತ ಮುಖಂಡರಾದ ಸಿದ್ದು ಗೌಡನವರ, ಸೋಮನಾಥ ಬಾಗಲಕೋಟ, ಅರ್ಜುನ ಹೀರು ರಾಠೋಡ, ರಾಮನಿಂಗ ಮಸಳಿ, ರಾಮಣ್ಣ ಮೆಡೆಗಾರ, ಆರ್. ಜಿ. ಯರನಾಳ, ಎಂ. ಎಸ್. ಲೋಣಿ, ಈರನಗೌಡ ರುದ್ರಗೌಡರ, ಡಿ. ಎಲ್. ಚವ್ಹಾಣ, ಯಾಕೂಬ ಜತ್ತಿ, ಭಾಗೀರಥಿ ತೇಲಿ, ಜಿ. ಎಂ. ಪಾಟೀಲ, ಡಾ. ಮಹಿಶ್ಯಾಳೆ, ಗುದಗೆಣ್ಣವರ, ಮಧುಕರ ಜಾಧವ, ಗುರು ಮಾಳಿ, ಬಸಯ್ಯ ವಿಭೂತಿ, ರಾಮು ದೇಸಾಯಿ, ಜಕ್ಕಪ್ಪ ಯಡವೆ, ಅಲ್ಪಾಫ ಬಾಗವಾನ, ಪ್ರಶಾಂತ ಝಂಜೆ, ಮಧುಕರ ಜಾಧವ, ವಾಮನ ಚವ್ಹಾಣ, ಮಹಾದೇವ ರಾಠೋಡ, ಬಿ. ಬಿ. ಲಮಾಣಿ ಮುಂತಾದವರು ಉಪಸ್ಥಿತರಿದ್ದರು.
ಬಾಬಾನಗರ ಬಳಿ ಎರಡೂವರೆ ವರ್ಷದಲ್ಲಿ ಡ್ಯಾಂ ನಿರ್ಮಾಣ: ಸಚಿವ ಎಂ. ಬಿ. ಪಾಟೀಲ


