ಪ್ರಗತಿ ಹಂತದ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಿ: ಜಿಪಂ ಉಪಕಾರ್ಯದರ್ಶಿ ಪ್ರಕಾಶ ಅಧಿಕಾರಿಗಳಿಗೆ ಸೂಚನೆ

ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 15 :
ಜಿಲ್ಲೆಯ ತಿಕೋಟಾ, ಬಬಲೇಶ್ವರ ಹಾಗೂ ವಿಜಯಪುರ ತಾಲೂಕುಗಳ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಜಿಪಂ ಉಪ ಕಾರ್ಯದರ್ಶಿ‌ ಪ್ರಕಾಶ ವಡ್ಡರ ಆವರು ರಸ್ತೆ ಕಾಮಗಾರಿ ಹಾಗೂ ಬ್ರಿಡ್ಜ್ ಕಾಮಗಾರಿ ಪರಿಶೀಲಿಸಿದರು.
ತಿಕೋಟಾ ತಾಲೂಕಿನ ಹರನಾಳ ಗ್ರಾಮದ ಪೂರ್ಣಗೊಂಡಿರುವ ಡೋಣಿ ನದಿಯ ಹೂಳು ತೆಗೆಯುವ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಬಳಿಕ ಬಬಲೇಶ್ವರ ತಾಲೂಕಿನ ಸಾರವಾಡ ಹಾಗೂ ಹೊನಗನಹಳ್ಳಿ ಗ್ರಾಮದ ವ್ಯಾಪ್ತಿಯ ಸೇತುವೆ, ವಿಜಯಪುರ ತಾಲೂಕು ವ್ಯಾಪ್ತಿಯ ಹಿಟ್ಟಿನಹಳ್ಳಿ ಗ್ರಾಮದ ಹತ್ತಿರ ಇರುವ ಸೇತುವೆಗಳ ಹೂಳು ತೆಗೆಯುವ ಕಾಮಗಾರಿಗಳನ್ನು ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ಹೂಳು ತೆಗೆಯುವ ಕಾಮಗಾರಿಗಳು ಪ್ರಗತಿ ಹಂತದಲ್ಲಿರುವುದರಿಂದ ಅವುಗಳನ್ನು ಆದ್ಯತೆಯ ಮೇರೆಗೆ ನಿಯಮಾನುಸಾರ ಪೂರ್ಣಗೊಳಿಸಬೇಕು. ಹಿಟ್ಟಿನಹಳ್ಳಿ ಗ್ರಾಮದ ಸೇತುವೆ ಕಾಮಗಾರಿ ಸಮೀಕ್ಷೆಯನ್ನು ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.‌
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ಸಂಜಯ ಕೋಟೆನ್ನವರ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರ ವಿದ್ಯಾಧರ ನ್ಯಾಮಗೊಂಡ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರವಿ ಪವಾರ ಹಾಗೂ ತಾಲೂಕು ಮಟ್ಟದ ಹಾಗೂ ಗ್ರಾ.ಪಂ. ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

Share this