ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 15 :
ಮಹಿಳೆಯರನ್ನು ಪೂಜ್ಯನಿಯ ಭಾವದಿಂದ ನೋಡಬೇಕು. ಅವಳನ್ನು ಗೌರವಿಸಿದರೆ ದೇವತೆಗಳು ಪ್ರಸನ್ನರಾಗುತ್ತಾರೆ ಎಂದು ಶಿವಬಸವ ನಿಲಯದ ದಾನಮ್ಮತಾಯಿ ಹೇಳಿದರು.
ಭಾನುವಾರ ನಗರದ ಸಾಯಿ ಪಾರ್ಕ್ ಗೀತಾ ಪಾಠಶಾಲೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆ ಮನೆಯ ಒಳಗೂ ಮತ್ತು ಹೊರಗೂ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಾಳೆ. ಏನೇ ಕಷ್ಟ ಬಂದರೂ ಕುಟುಂಬ ನಿರ್ವಹಣೆ ಜೊತೆಗೆ ಉದ್ಯೋಗದಲ್ಲಿಯೂ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರಳಾಗುತ್ತಾಳೆ. ಹಾಗಾಗಿ ಸಮಾಜ ಅವಳಿಗೆ ಇನ್ನೂ ಹೆಚ್ಚಿನ ಅವಕಾಶವನ್ನು ಕಲ್ಪಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರಾದ ವಿಜಯಲಕ್ಷ್ಮಿ ಬಿರಾದಾರ, ಗುರುಬಾಯಿ ಕುಬಕಡ್ಡಿ ಮಹಿಳಾ ದಿನಾಚರಣೆ ಕುರಿತು ಮಾತನಾಡಿದರು.
ಕೃಷಿ ವಿಶ್ವವಿದ್ಯಾಲಯ ನಿವೃತ್ತ ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಮಹಿಳಾ ಸಬಲೀಕರಣ ಕುರಿತು ಉಪನ್ಯಾಸ ನೀಡಿದರು.
ದಿವ್ಯ ಸಾನ್ನಿಧ್ಯವಹಿಸಿ ರಾಜಯೋಗಿನಿ ಸಂಗೀತಾ ಅಕ್ಕನವರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಎಲ್ಲಾ ಕೇಂದ್ರಗಳಲ್ಲಿ ಮಹಿಳೆಯರೇ ಪ್ರಾತಿನಿಧ್ಯವನ್ನು ವಹಿಸಿ, ಪ್ರತಿಯೊಬ್ಬರಿಗೂ ಕೂಡ ಶಿವನ ಸಂದೇಶವನ್ನು ತಲುಪಿಸುವ ಮೂಲಕ ಶಿವನ ಸ್ವರೂಪಿ ಬಾಬಾ ಅವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.
ಸಾಯಿ ಪಾರ್ಕ್ ಗೀತಾ ಪಾಠಶಾಲೆ ಕೇಂದ್ರದ ಸಂಚಾಲಕಿ ಹಾಗೂ ರಾಜಯೋಗಿನಿ ಸುವರ್ಣ ಅಕ್ಕನವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮೇಶ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಶ್ರೀ ಗುರುಬಸಯ್ಯ ಹಿರೇಮಠ, ಅನಿತಾ ಅಕ್ಕನವರು, ಸಂಗೀತಾ ಹಾಗೂ ಕವಿತಾ ಅಕ್ಕನವರು, ಪ್ರಭು, ವಿಕ್ರಂ, ಶ್ರೇಯಾ, ಎನ್.ಡಿ. ಮಸೂತಿ, ಮಾಳಪ್ಪ ಸೇರಿದಂತೆ ಬಡಾವಣೆಯ ನೂರಾರು ಮಹಿಳೆಯರು, ಆಮಂತ್ರಿತರು ಭಾಗವಹಿಸಿದ್ದರು.
ಎಲ್ಲಿ ಮಹಿಳೆಯರಿಗೆ ಗೌರವವಿದೆಯೋ ಅಲ್ಲಿ ದೇವತೆಗಳು ವಾಸಿಸುತ್ತಾರೆ- ದಾನಮ್ಮ ತಾಯಿ


