ಶೀಘ್ರದಲ್ಲೇ ರಾಜ್ಯ ಮಟ್ಟದ‌‌ ಮಕ್ಕಳ‌ ಸಾಹಿತ್ಯ ಸಮ್ಮೇಳನ ಆಯೋಜನೆ:ಕರ್ನಾಟಕ ಬಾಲ‌ ವಿಕಾಸ ಅಕಾಡೆಮಿ ನೂತನ ಅಧ್ಯಕ್ಷ ಅಡಿವೇಶ‌ ಇಟಗಿ‌ ಹೇಳಿಕೆ‌

ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 17:
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ
ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ಬಾಲ ವಿಕಾಸ ಅಕಾಡೆಮಿ ನಿರ್ಧರಿಸಲಾಗಿದೆ ಎಂದು ಕರ್ನಾಟಕ ಬಾಲ‌ ವಿಕಾಸ ಅಕಾಡೆಮಿ ನೂತನ ಅಧ್ಯಕ್ಷ ಅಡಿವೇಶ‌ ಇಟಗಿ‌ ಹೇಳಿದರು.
ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಗೆ ಇದೇ ಮೊದಲ‌ ಬಾರಿಗೆ ಭೇಟಿ ನೀಡಿ, ರಾಜ್ಯ ಮಟ್ಟದ ಮಕ್ಕಳ‌ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ‌ ಕುರಿತು‌ ನಡೆದ ಪೂರ್ವಭಾವಿ‌ ಸಭೆಯ ಅಧ್ಯಕ್ಷತೆ‌ ವಹಿಸಿ‌ ಅವರು ಮಾತನಾಡಿದರು.
ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಪೂರಕವಾದ ವಾತಾವರಣ ಹೊಂದಿರುವ ಜಿಲ್ಲೆಯಲ್ಲಿ ಈ‌ ಸಮ್ಮೇಳನ ನಡೆಸಲಾಗುವುದು.
ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ 18 ವರ್ಷದೊಳಗಿನ ಎಲ್ಲ ಮಕ್ಕಳು ಈ‌ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿ ಕೊಡಲಾಗುವುದು ಎಂದರು.
ಅದರಲ್ಲಿ ವಿಶೇಷವಾಗಿ ಸರ್ಕಾರಿ ಬಾಲಕರ ಬಾಲಮಂದಿರ, ಬಾಲಕಿಯರ ಬಾಲಮಂದಿರ ಮಕ್ಕಳನ್ನು ಕೂಡ ಭಾಗವಹಿಸುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಮಾರ್ಚ್, ಎಪ್ರಿಲ್ ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಾಗೂ ಶಿಕ್ಷಕರಿಗೆ ಮೌಲ್ಯ ಮಾಪನ ಪ್ರಕ್ರಿಯೆ ಇರುವುದರಿಂದ ಜೂನ್-2026 ರ 1 ನೇ ವಾರದಲ್ಲಿ ಮಕ್ಕಳ ಆಯ್ಕೆ ಪ್ರಕ್ರಿಯೆ ಹಾಗೂ ಜೂನ್-2026 ಕೊನೆಯ ವಾರದಲ್ಲಿ ರಾಜ್ಯ ಮಟ್ಟದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಯಶ್ವಸಿಯಾಗಿ ನಡೆಸಲು ತಯಾರಿ ಮಾಡಿಕೊಳ್ಳಬೇಕೆಂದರು.
ಆಯಾ ಜಿಲ್ಲೆಯಲ್ಲಿರುವ ಮಕ್ಕಳ ಸಾಹಿತಿಗಳ ಪಟ್ಟಿ ಮಾಡಿಕೊಳ್ಳಲು ಎಲ್ಲ ಅಧಿಕಾರಿಗಳಿಗೂ ಸೂಚಿಸಿದರು. ಈ ಕುರಿತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಪಂ‌ ಸಿಇಒ ಜತೆ ಸಭೆ ಮಾಡಿ ಸಲಹೆ ಸೂಚನೆ ಪಡೆಯಲಾಗುವುದು ಎಂದರು.
ಮಕ್ಕಳ ಸರ್ವಾಂಗೀಣ ಬೆಳವಣಿಗೆ, ಸುರಕ್ಷತೆ ಹಾಗೂ ಭದ್ರತೆಗಾಗಿ ಇಲಾಖೆಯ ಎಲ್ಲ ಅಧಿಕಾರಿಗಳು ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.‌
ಜಿಲ್ಲಾ ನಿರೂಪಣಾ ಅಧಿಕಾರಿಗಳು ಮಾತನಾಡಿ, ಇಲಾಖೆ ವತಿಯಿಂದ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಮಾಡಲಾಗಿದ್ದು, ಅದೆ ರೀತಿ ಈ ಕಾರ್ಯಕ್ರಮದಲ್ಲಿ ಜಾನಪದ ಗೀತೆ, ಸಾಹಿತ್ಯ, ಸ್ವ-ರಚಿತ ಕವನ ವಾಚನ, ನೃತ್ಯ, ನಾಟಕ, ಡೊಳ್ಳು ಕುಣಿತ ಇಂತಹ ಅನೆಕ ಕಲೆಗಳನ್ನು ಹಾಗೂ ಸ್ಪರ್ಧೆಗಳನ್ನು ಮಾಡಬಹುದೆಂದರು.
ತಾಲೂಕು ಮತ್ತು ಜಿಲ್ಲೆಗಳಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರತಿ ಜಿಲ್ಲೆಯಿಂದ ಸಾಹಿತ್ಯ ಆಸಕ್ತಿ ಉಳ್ಳ 5 ಜನ ಮಕ್ಕಳನ್ನು ಗುರುತಿಸಿ ಆಯ್ಕೆ ಮಾಡಿ ರಾಜ್ಯ ಮಟ್ಟದಲ್ಲಿ ಕಳುಹಿಸಲಾಗುವುದು ಎಂದು ತಿಳಿಸಿದರು.
ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಸವರಾಜ ಜಿಗಳೂರು ಮಾತನಾಡಿ, ಸಮ್ಮೇಳನಕ್ಕಿಂತ ಮುಂಚೆ ಮಕ್ಕಳ ರಥ ಕಾರ್ಯಕ್ರಮ ಮಾಡಬಹುದು ಎಂದರು.
ಈ ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಧಿಕಾರಿಗಳು ಹಾಗೂ ಸಿಬ್ಬಂದಿಗಳು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲೆಯ ಎಲ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ನಿರೂಪಣಾಧಿಕಾರಿ ನಿರ್ಮಲಾ .ಎಚ್. ಸುರಪುರ ವಂದಿಸಿದರು.

Share this