ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 21 :
ವಿಜಯಪುರ ಜಿಲ್ಲೆಯಾದ್ಯಂತ ಈದ್ – ಉಲ್- ಫಿತರ ಹಬ್ಬವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಕಳೆದ ಒಂದು ತಿಂಗಳುಗಳಿಂದ ರೋಜಾ, ರಾತ್ರಿ ಹೊತ್ತು ವಿಶೇಷ ತರಾವೀಹ್ ನಮಾಜ್ ಸಲ್ಲಿಸಿದ ಮುಸ್ಲಿಂ ಬಾಂಧವರು ಶನಿವಾರ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು. ಹೊಸ ಬಟ್ಟೆ ಧರಿಸಿ, ಅತ್ತರ ಎಂಬ ಸುಗಂಧದ್ರವ್ಯ ಹಚ್ಚಿಕೊಂಡು, ಕಣ್ಣಿಗೆ ಸುರಮಾ ಹಚ್ಚಿಕೊಂಡು ನಮಾಜ್ ಸಲ್ಲಿಕೆಗೆ ಮಸಜೀದ್ ಹೆಜ್ಜೆ ಹಾಕುತ್ತಿರುವ ದೃಶ್ಯ ಕಂಡು ಬಂದಿತು.
ವಿಜಯಪುರದ ದಖನಿ ಈದ್ಗಾ, ಆಲಂಗೀರ ಈದ್ಗಾ, ಜಾಮೀಯಾ ಮಸಜೀದ್, ಧಾತರಿ ಮಸಜೀದ್, ಯಾಸೀನ್ ಮಸಜೀದ್, ಆಸಾರ ಮಹಲ್ ಸೇರಿದಂತೆ ಅನೇಕ ಮಸಜೀದ್ ಗಳಲ್ಲಿ ಈದ್ ಉಲ್ ಫಿತರ್ ಹಬ್ಬದ ಅಂಗವಾಗಿ ವಾಜಿಬ್ ನಮಾಜ್ ಸಲ್ಲಿಸಿದರು.
ನಮಾಜ್ ಸಲ್ಲಿಕೆಗೆ ಹೋಗುವ ಸಂದರ್ಭದಲ್ಲಿ ತಮ್ಮ ಕುಟುಂಬ, ಸ್ನೇಹಿತರೊಡನೆ ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ಲಾ ಇಲಾಹ ಇಲ್ಲಲ್ಲಾಹ…ಎಂದು ತಕಬೀರ್ ಹೇಳುತ್ತಾ ಹೋಗುತ್ತಿರುವ ದೃಶ್ಯ ಕಂಡು ಬಂದಿತು.
ನಮಾಜ್ ಪೂರ್ಣಗೊಂಡ ಬಳಿಕ ಪರಸ್ಪರ ಈದ್ ಮುಬಾರಕ್ ಈದ್ ಮುಬಾರಕ್ ಎಂದು ಶುಭಾಷಯ ವಿನಿಮಯ ಮಾಡಿಕೊಂಡರು.
ನಮಾಜ್ ಸಲ್ಲಿಸಿದ ನಂತರ ಮನೆಯಲ್ಲಿ ಈದ್ ಪ್ರಯುಕ್ತ ಸಿದ್ದಪಡಿಸಲಾಗುವ ಹಾಲು, ಮಸಾಲೆ ಪದಾರ್ಥಗಳನ್ನು ಒಳಗೊಂಡ ಸಿರಕುರಮಾ ಸವಿದರು. ಸ್ನೇಹಿತರಿಗಾಗಿ ಔತಣಕೂಟ ಏರ್ಪಡಿಸಿದರು. ಹಿಂದೂ ಬಾಂದವರು ಪ್ರೀತಿಯ ಔತಣಕೂಟದಲ್ಲಿ ಭಾಗಿಯಾಗಿ ಶುಭ ಕೋರಿದರು.
ಧರ್ಮದ ಹಾದಿಯಲ್ಲಿ ನಡೆಯಿರಿ
ಸತ್ಕಾರ್ಯಗಳನ್ನು ಹಾಗೂ ಧಾರ್ಮಿಕ ಕರ್ತವ್ಯಗಳನ್ನು ಸದಾ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಬೇಕು ಎಂದು ಕರ್ನಾಟಕ ಅಹಲೆ ಸುನ್ನತ್ ರಾಜ್ಯಾಧ್ಯಕ್ಷ, ಧಾರ್ಮಿಕ ಗುರು ಹಜರತ್ ಸೈಯ್ಯದ್ ತನ್ವೀರ ಪೀರಾ ಹಾಶ್ಮೀ ಹೇಳಿದರು.
ನಗರದ ದಖನಿ ಈದ್ಗಾ ಮೈದಾನದಲ್ಲಿ ಈದ್ ಅಂಗವಾಗಿ ವಿಶೇಷ ವಾಜಿಬ್ ನಮಾಜ್ ಮಾಡಿ ನಂತರ ಬೋಧನೆ ನೀಡಿದ ಅವರು, ರಮಜಾನ್ ಒಂದು ಆತ್ಮ ಶುದ್ದಿಯ ಪವಿತ್ರ ಮಾಸ, ಈ ವೇಳೆ ಧಾರ್ಮಿಕ ಕರ್ತವ್ಯಗಳನ್ನು ನಿಭಾಯಿಸುವ ರೀತಿ ಎಲ್ಲ ದಿನಗಳಲ್ಲಿಯೂ ಈ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು ಎಂದರು.
ಅದ್ಭುತವಾದ ಭಾರತ ದೇಶ ನಮ್ಮದು, ಈ ಮಹಾನ್ ದೇಶದ ಬಗ್ಗೆ ನಮ್ಮ ಅಭಿಮಾನ ನಮ್ಮ ಜೀವನದ ಅಂಗವಾಗಬೇಕಿದೆ ಎಂದು ಸಹ ಕರೆ ನೀಡಿದರು.
ನಾವು ವಾಸಿಸುವ ದೇಶದ ಸಂಸ್ಕೃತಿಯನ್ನು ನಾವು ಗೌರವಿಸಬೇಕು ಎಂದು ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ್ ಸಾರಿದ್ದಾರೆ, ಭಾವೈಕ್ಯತೆ ನೆಲೆಯಾಗಿರುವ ನಮ್ಮ ಭಾರತದ ಬಗ್ಗೆ ಹೆಮ್ಮೆ, ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ನಮ್ಮ ದೇಶದ ಶ್ರೇಷ್ಠ ಸಂವಿಧಾನವು, ತ್ರಿವರ್ಣ ಧ್ವಜದ ಬಗ್ಗೆ ಅದಮ್ಯವಾದ ಭಕ್ತಿ ಹೊಂದಬೇಕು ಎಂದು ಕರೆ ನೀಡಿದರು.
ಇಂದು ಯುವಕರು ಮಾದಕ ದ್ರವ್ಯ ಜಾಲಕ್ಕೆ ಸಿಲುಕಿಕೊಂಡಿದೆ, ಈ ಮಾದಕ ದ್ರವ್ಯ ವ್ಯಸನಗಳ ಜಾಲದಿಂದ ಯುವ ಸಮೂಹವನ್ನು ಹೊರ ತರಲು ಸಮಾಜ ಹಿರಿಯರು ಮುಂದಾಗಬೇಕು ಎಂದರು.
ಯುವಜನತೆಯಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗುವಂತೆ ಪ್ರೇರಣೆ ನೀಡುವ ಕೆಲಸ ಮಾಡಬೇಕಿದೆ ಎಂದರು.
ಹಿಂದೂ ಬಾಂಧವರು ನಮ್ಮ ಸಹೋದರರು, ಅವರನ್ನೂ ಹಬ್ಬದ ಸಂಭ್ರಮದಲ್ಲಿ ಭಾಗಿ ಮಾಡಿಕೊಳ್ಳಿ, ಆತ್ಮೀಯತೆಯಿಂದ ಅವರನ್ನು ಔತಣಕೂಟಕ್ಕೆ ಕರೆಯಿರಿ, ಕೆಲವರು ವಿನಾಕಾರಣ ಸೃಷ್ಟಿ ಮಾಡುತ್ತಿರುವ ಹಿಂದೂ ಮುಸ್ಲಿಂ ಬೇಧಭಾವವನ್ನು ಅಳಿಸಿ ಹಾಕಿ ಎಂದರು.
ಬಟ್ಟೆ – ರೊಟ್ಟಿಗಿಂತ ಶಿಕ್ಷಣ ಮುಖ್ಯ
ಹಳೆಯ ಬಟ್ಟೆ ಉಟ್ಟರೂ ಚಿಂತೆಯಿಲ್ಲ, ಬಟ್ಟೆ ಹಾಗೂ ರೊಟ್ಟಿಗಿಂತ ಶಿಕ್ಷಣಕ್ಕೆ ಆದ್ಯತೆ ನೀಡಿ, ಯಾರೊಬ್ಬರು ಶಿಕ್ಷಣದಿಂದ ವಂಚಿತರಾಗಬಾರದು, ಪ್ರತಿ ಮನೆಯಲ್ಲೂ ಶಿಕ್ಷಣವಂತರಿರಬೇಕು ಎಂದರು.
ನಮ್ಮ ಬದುಕು ಸರಳತೆ ಇರಬೇಕು, ವಿನಾಕಾರಣ ಐಷಾರಾಮಿ, ತೋರಿಕೆಗಾಗಿ ಅನೇಕರು ಬಡ್ಡಿ ಜಾಲದಲ್ಲಿ ಸಿಲುಕುತ್ತಿದ್ದಾರೆ, ಬಡ್ಡಿ ವ್ಯವಹಾರ ಒಂದು ಅಪರಾಧ, ಬಡ್ಡಿ ವ್ಯವಹಾರದಿಂದ ಯಾರೂ ಪ್ರಗತಿಯಾಗಲು ಸಾಧ್ಯವಿಲ್ಲ, ಬಡ್ಡಿ ವ್ಯವಹಾರದಲ್ಲಿ ತೊಡಗಬೇಡಿ, ಬಡ್ಡಿ ಜಾಲದಲ್ಲಿ ಸಿಲುಕಬೇಡಿ, ಅನೇಕರು ಮದುವೆಗಾಗಿ ಬಡ್ಡಿಯಿಂದ ಸಾಲ ಎತ್ತುತ್ತಾರೆ, ಆದರೆ ಇಸ್ಲಾಂ ಸರಳತೆಯ ಮದುವೆಗೆ ಆದೇಶಿಸಿದೆ, ಹೀಗಾಗಿ ಬಡ್ಡಿ ಜಾಲದಲ್ಲಿ ಸಿಲುಕಬೇಡಿ ಎಂದು ಕರೆ ನೀಡಿದರು.
ಈ ನೆಲದ ಅಣ್ಣ ಬಸವಣ್ಣನವರು ಅನೇಕ ವಚನಗಳನ್ನು ಬೋಧಿಸಿದ್ದಾರೆ, ವಚನಗಳಲ್ಲಿ ಮೌಲ್ಯವಿದೆ, ಶ್ರೇಷ್ಠ ತತ್ವಗಳಿವೆ, ಅವುಗಳನ್ನು ಓದುವ ಮನೋಭಾವ ಬೆಳೆಸಿಕೊಳ್ಳಿ ಎಂದರು.
ನಂತರ ದೇಶದ ಒಳಿತಿಗಾಗಿ, ರೈತರ ಶ್ರೇಯೋಭಿವೃದ್ದಿ, ದೇಶದ ಸೈನಿಕರ ಆಯುರಾರೋಗ್ಯವೃದ್ದಿ ಹಾಗೂ ಸಮಸ್ತ ಮನುಕುಲದ ಒಳಿತಿಗಾಗಿ ದುವಾ ಮಾಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಸಮಸ್ತ ಮುಸ್ಲಿಂ ಬಾಂಧವರಿಗೆ ರಮಜಾನ್ ಹಬ್ಬದ ಶುಭ
ಕೋರಿದರು.
ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್, ಪ್ರೊ.ವಾಜೀದ ಪೀರಾ, ಚಾಂದಸಾಬ ಗಡಗಲಗಾವ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಮಾಜಿ ಉಪಮೇಯರ್
ದಿನೇಶ ಹಳ್ಳಿ,
ಮುಖಂಡರಾದ ಎಂ.ಸಿ. ಮುಲ್ಲಾ, ರವೂಫ್ ಶೇಖ, ಪ್ರೊ.ವಾಜೀದ ಪೀರಾ, ಚಾಂದಸಾಬ ಗಡಗಲಾವ,
ಮೊದಲಾದವರು ಉಪಸ್ಥಿತರಿದ್ದರು.


