ಸಪ್ತಸಾಗರ ವಾರ್ತೆ, ವಿಜಯಪುರ, ಮಾ. 22:
ನಗರದ ಬಿ. ಎಲ್.ಡಿ.ಇ.ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಶಿಕ್ಷಣಾರ್ಥಿನಿ ಚಂದನಾ ಶೃಂಗೇರಿ ಅವರು ಭರತನಾಟ್ಯ ಮಾಡುವುದರೊಂದಿಗೆ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
“ವೀರಾಂಗನ ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಪ್ರಶಸ್ತಿ” ಪಡೆದಿದ್ದಕ್ಕಾಗಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಭಾರತಿ. ವಾಯ್.ಖಾಸನೀಸ ಮತ್ತು ಪ್ರೆಸಿಡೆನ್ಸಿ ಬಿ. ಇಡಿ ಕಾಲೇಜ್ ಪ್ರಾಚಾರ್ಯ ಡಾ.ಸುಮಾ. ಬೋಳರಡ್ಡಿ ಇವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಮುಖ್ಯ ಅತಿಥಿ ನ್ಯಾಯವಾದಿ ಡಾ.ರಂಜಿತಾ.ಕೆ.ಆರ್ ಅವರು ಮಾತನಾಡಿ, “ದಶಪುತ್ರ ಸಮ ಕನ್ಯಾ” ಅಂದರೆ ಹತ್ತು ಗಂಡು ಮಕ್ಕಳಿಗೆ ಒಂದು ಹೆಣ್ಣು ಮಗು ಸಮ ಎಂಬ ಭಗವದ್ಗೀತೆಯ ವಾಣಿಯಂತೆ ಮಹಿಳೆಯ ಸ್ಥಾನ ಬಹಳಷ್ಟು ಗೌರವಯುತವಾದದ್ದು. ಮಹಿಳೆಯು ಅಬಲೆಯಲ್ಲ. ಆಕೆ ಪುರಾಣ ಕಾಲದಿಂದಲೇ ಶಕ್ತಿ ಶಾಲಿಯಾಗಿದ್ದಾಳೆ. ಸ್ತ್ರೀಪುರುಷರಿಬ್ಬರಿಗೂ ಸಮಾನ ಸ್ಥಾನಮಾನಗಳು ಇದ್ದಾಗ ಮಾತ್ರ ಸಮ ಸಮಾಜ ಕಟ್ಟಲು ಸಾಧ್ಯ ಎಂದು ಹೇಳಿದರು.
ಪ್ರೆಸಿಡೆನ್ಸಿ ಬಿ. ಇಡಿ ಕಾಲೇಜ್ ಪ್ರಾಚಾರ್ಯ ಡಾ.ಸುಮಾ ಬೋಳರಡ್ಡಿ ಅವರು ಮಾತನಾಡಿ, ಹೆಣ್ಣು ಅಂದರೆ ಪ್ರೀತಿ, ವಾತ್ಸಲ್ಯ, ಅಕ್ಕರೆ, ತಾಯಿ, ಲಕ್ಷ್ಮಿ ಆಗಿದ್ದಾಳೆ ಎಂದು ಹೇಳಿದರು.
ಒಂದು ಮಗುವಿನ ಬೆಳವಣಿಗೆಯಲ್ಲಿ ತಾಯಿಯ ವಾತ್ಸಲ್ಯ ಬಹಳಷ್ಟು ಇರುತ್ತದೆ ಎಂದು ಹೇಳಿದರು.
ಪ್ರಾಚಾರ್ಯ ಡಾ.ಭಾರತಿ. ವಾಯ್.ಖಾಸನೀಸ್ ಅವರು ಮಾತನಾಡಿ,
ಜ್ಞಾನ, ಸಮಯ, ಬೆಂಬಲ ನೀಡಿ ಮಹಿಳಾ ಸಬಲೀಕರಣಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಹೇಳಿದರು. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಮಹಿಳೆ ಇದ್ದಾಳೆ. ಅಡುಗೆ ಮನೆಯಿಂದ ರಾಷ್ಟ್ರಪತಿ ಸ್ಥಾನದವರೆಗೂ ಮಹಿಳೆ ವಿಶೇಷ ಸಾಧನೆ ಮಾಡುತ್ತಿದ್ದಾಳೆ. ಆದ್ದರಿಂದ ಮಹಿಳಾ ಸಬಲೀಕರಣ ಎನ್ನುವುದು ಕೇವಲ ಮಹಿಳೆಯ ಒಂದು ವಿಷಯ ವಸ್ತುವಲ್ಲ. ಅದು ಸಮುದಾಯದ ವಿಷಯವಾಗಿದೆ ಎಂದು ಹೇಳಿದರು.
ಕೇವಲ ಶೇ.65.04 ರಷ್ಟು ಮಹಿಳೆಯರ ಸಾಕ್ಷರತಾ ಪ್ರಮಾಣವಿದ್ದು, ಶೇ.48ರಷ್ಟು ಉನ್ನತ ಶಿಕ್ಷಣದಲ್ಲಿ ಮಹಿಳೆಯರಿದ್ದಾರೆ. ಹೀಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣ ಇನ್ನೂ ಹೆಚ್ಚಾಗಬೇಕು ಎಂದು ಕರೆ ನೀಡಿದರು. ಬಿ. ಎಲ್.ಡಿ.ಇ.ಸಂಸ್ಥೆ, ಎಸ್.ಎಸ್. ಆವರಣದ ಆಡಳಿತಾಧಿಕಾರಿ ಪ್ರೊ. ಐ ಎಸ್. ಕಾಳಪ್ಪನವರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಣ್ಣು ಮಕ್ಕಳು ದೇವರು ಕೊಟ್ಟ ವರವಿದ್ದಂತೆ. ಅದೃಷ್ಟವಂತರಿಗೆ ಮಾತ್ರ ಹೆಣ್ಣು ಮಕ್ಕಳು ಹುಟ್ಟುತ್ತಾರೆ ಎಂದು ಹೇಳಿದರು. ಆರಂಭದಲ್ಲಿ ಮಹಿಳೆಯರಿಗೆ ಶಿಕ್ಷಣವಿರಲಿಲ್ಲ ನಿಜ. ಆದರೆ ಅವರು ಮೌಲ್ಯವಂತರಾಗಿರಲಿಲ್ಲ ಎಂದರ್ಥವಲ್ಲ. ಅವರು ಕಲಿಯದಿದ್ದರೂ ಜಾನಪದ ಸಾಹಿತ್ಯವನ್ನು ಅರಗಿಸಿ ಕೊಂಡವರಾಗಿದ್ದರು. ಭಾರತೀಯ ಸಂಸ್ಕೃತಿಯನ್ನು ಬೆಳಗುವವರಾಗಿದ್ದರು. ಇಂದಿನ ಆಧುನಿಕ ಯುಗದಲ್ಲಂತೂ ಮಹಿಳೆ ಗಗನದಾಚೆಗೂ ಸಾಧನೆ ಮಾಡುತ್ತಿದ್ದಾಳೆ ಎಂಬುವುದು ಹೆಮ್ಮೆಯ ಸಂಗತಿ. ಇದಕ್ಕೆ ಸಾಕ್ಷಿಯಾಗಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಆರ್.ಎಂ.ನಚಮೈ ಅಣುಸ್ಥಾವರದ ಮೊದಲ ಮಹಿಳಾ ಮುಖ್ಯಸ್ಥರಾಗಿ ನೇಮಕಗೊಂಡಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಸಂಶೋಧನ ವಿದ್ಯಾರ್ಥಿನಿ ಸುಜಾತ ಮತ್ತಿವಾಡ ನಿರೂಪಿಸಿದರು. ಲಕ್ಷ್ಮಿ ಡಗ್ಗಾ, ಐಶ್ವರ್ಯ ಜೋಶಿ ಹಾಗೂ ಸಂಗಡಿಗರು ಸಂಸ್ಥಾಪನ ಗೀತೆ ಪ್ರಸ್ತುತಪಡಿಸಿದರು. ಶಾಫಿಯಾ ರಮಲಿ ಸ್ವಾಗತಿಸಿದರು. ಶ್ರೇಯಾ ಡೆಂಗಿ ಪರಿಚಯಿಸಿದರು. ಡಾ. ಜೆ.ಎಸ್.ಪಟ್ಟಣಶೆಟ್ಟಿ ವಂದಿಸಿದರು.
ಸ್ತ್ರೀಪುರುಷರಿಬ್ಬರಿಗೂ ಸಮಾನ ಸ್ಥಾನಮಾನಗಳು ಇದ್ದಾಗ ಮಾತ್ರ ಸಮ ಸಮಾಜ ಕಟ್ಟಲು ಸಾಧ್ಯ-ಡಾ. ರಂಜಿತಾ


