ಸಪ್ತಸಾಗರ ವಾರ್ತೆ,ಬಾಗಲಕೋಟೆ, ಮಾ. 23: ಬಾಗಲಕೋಟೆ ಹಾಗೂ ದಾವಣಗೆರೆ ವಿಧಾನಸಭೆ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆ ಹಿರಿಯ ಶಾಸಕರ ಅಗಲಿಕೆಯಿಂದ ತೆರವಾಗಿ ಆಕಸ್ಮಿಕವಾಗಿ ಎದುರಾದ ಚುನಾವಣೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಥಾನಗಳೇ ಇದ್ದು, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಶ್ಚಿತ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಸೋಮವಾರ ಬಾಗಲಕೋಟೆ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರ ಉಮೇದುವಾರಿಕೆ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ, 2028 ರಲ್ಲಿ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈ ಉಪ ಚುನಾವಣೆಗಳು ದಿಕ್ಸೂಚಿಯಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದಿಕ್ಸೂಚಿ ಎಂದಿರುವುದು ರಾಜಕೀಯ ಹೇಳಿಕೆಯಷ್ಟೇ. ಶಾಸಕರ ಅನಿರೀಕ್ಷಿತ ನಿಧನದಿಂದ ಆಕಸ್ಮಿಕ ತೆರವಾದ ಎರಡು ಶಾಸಕ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಮುಂದಿನ ಚುನಾವಣಾ ದಿಕ್ಸುಚಿ ಎನ್ನಲಾಗದು ಎಂದರು.
ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ಸು ಹಾಗೂ ಸರ್ಕಾರದ ಸಾಧನೆ ಆಕಸ್ಮಿಕವಾಗಿ ಎದುರಾಗಿರುವ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತವಾಗಿದೆ ಎಂದರು.
ಬಾಗಲಕೋಟೆ ಕ್ಷೇತ್ರದಿಂದ ಶಾಸಕರಾಗಿದ್ದ ಎಚ್.ವೈ ಮೇಟಿ ಅವರ ನಿಧನದಿಂದಾಗಿ ಅವರ ಪುತ್ರ ಉಮೇಶ ಮೇಟಿ ಅವರಿಗೆ ಟಿಕೆಟ್ ನೀಡಲಾಗಿದೆ. ಉಮೇಶ ಗೆಲುವಿಗೆ ನಾವೆಲ್ಲ ಐಕ್ಯತೆಯಿಂದ ಪ್ರಯತ್ನ ಮಾಡಲಿದ್ದು, ಸರ್ಕಾರದ ಸಾಧನೆ ನಮ್ಮ ಅಭ್ಯರ್ಥಿ ಗೆಲುವಿಗೆ ರಹದಾರಿ ಆಗಲಿದೆ ಎಂದರು.
ಟಿಕೆಟ್ ಹಂಚಿಕೆ ಗೊಂದಲವಲ್ಲ, ಟಿಕೆಟ್ ಒಂದೇ ಇದ್ದು, ಹಲವು ಆಕಾಂಕ್ಷಿಗಳಿರುತ್ತಾರೆ. ಮೇಟಿ ಕುಟುಂಬದ ಒಬ್ಬರಿಗೆ ಕೊಡುವಂತೆ ಕಾರ್ಯಕರ್ತರು ಹಾಗೂ ಜನಾಭಿಪ್ರಾಯದಂತೆ ಪಕ್ಷ ಮೇಟಿ ಕುಟುಂಬದ ಸದಸ್ಯರಲ್ಲಿ ಒಬ್ಬರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಅಭ್ಯರ್ಥಿ ಉಮೇಶ ಅವರಿಗೆ ಅವರ ತಂದೆ ಎಚ್.ವೈ. ಮೇಟಿ ಅವರು ಶಾಸಕರಾಗಿ ಮಾಡಿರುವ ಉತ್ತಮ ಕೆಲಸಗಳು ಗೆಲುವಿಗೆ ನೆರವಾಗಲಿವೆ ಎಂದರು.
ಬಿಜೆಪಿಯಲ್ಲಿ ಅನಂತಕುಮಾರ ಹೆಗಡೆ ಅವರ ಕುಟುಂಬಕ್ಕೆ ಟಿಕೆಟ್ ತಪ್ಪಿಸಲಾಗಿತ್ತು, ನಮ್ಮಲ್ಲಿ ಹಾಗೇ ಆಗಿಲ್ಲವಲ್ಲ. ಬಾಗಲಕೋಟೆಯಲ್ಲಿ ಮೇಟಿ ಕುಟುಂಬಕ್ಕೆ ಟಿಕೆಟ್ ನೀಡಬೇಕೆಂಬುದೇ ಇತ್ತು. ಟಿಕೆಟ್ ನೀಡಿದೆವು ಎಂದರು.
ಪಂಕಾ ಮಸೀದಿ ಗಲಾಟೆ ಇಟ್ಟುಕೊಂಡು ಬಿಜೆಪಿ ಚುನಾವಣೆ ಕಾರಣಕ್ಕೆ ರಾಜಕಾರಣ ಮಾಡುತ್ತಿದ್ದು, ಇದೆಲ್ಲ ಕ್ಷಣಿಕ. ಎಚ್.ವೈ. ಮೇಟಿ ಬಂದ ಬಳಿಕ ಬಾಗಲಕೋಟೆಯಲ್ಲಿ ಸಾಮರಸ್ಯ ಮೂಡಿದ್ದು, ಬಿಜೆಪಿ ರಾಜಕೀಯ ಇಲ್ಲಿ ನಡೆಯಲ್ಲ, ಬದಲಾಗಿ ನಾವು ಗೆಲ್ಲುತ್ತೇವೆ ಎಂದರು.
ಶಿಗ್ಗಾಂವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸಿಎಂ ಆಗಿದ್ದವರ ಪುತ್ರನನ್ನೇ ಸೋಲಿಸಿ, ನಾವು ಗೆದ್ದಿದ್ದೇವೆ, ಹೀಗಾಗಿ ಈಗ ಎದುರಾಗಿರುವ ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ವಿಜಯ ಸಾಧಿಸುವುದು ಖಚಿತ ಎಂದರು.
ದಾವಣಗೆರೆ, ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತ: ಸಚಿವ ಶಿವಾನಂದ ಪಾಟೀಲ ವಿಶ್ವಾಸ


