ಅಗ್ನಿವೀರರ ನೇಮಕಾತಿ ರ‍್ಯಾಲಿ: ಸಿದ್ಧತೆಗಾಗಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚನೆ

ಸಪ್ತಸಾಗರ ವಾರ್ತೆ,ವಿಜಯಪುರ,ಏ.7: ಐತಿಹಾಸಿಕ ವಿಜಯಪುರದಲ್ಲಿ ಮಂಗಳೂರಿನ ಸೇನಾ ನೇಮಕಾತಿ ಕಚೇರಿ ವತಿಯಿಂದ ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನಾ ನೇಮಕಾತಿ ಬೃಹತ್ ರ‍್ಯಾಲಿ ನಗರದಲ್ಲಿ ಸೆಪ್ಟೆಂಬರ್ 10 ರಿಂದ 30ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಅಗ್ನಿಪಥ ನೇಮಕಾತಿ ರ‍್ಯಾಲಿಯ ಪೂರ್ವ ಸಿದ್ಧತೆ ಕುರಿತಂತೆ ಸೇನಾ ನೇಮಕಾತಿ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ವಿಜಯಪುರ ಜಿಲ್ಲೆಯು ಒಳಗೊಂಡಂತೆ ರಾಜ್ಯದ 11 ಜಿಲ್ಲೆಗಳ ಅಭ್ಯರ್ಥಿಗಳು ಈ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಈ ಅವಧಿಯಲ್ಲಿ ಪ್ರತಿದಿನ ಅಂದಾಜು 800 ಅಭ್ಯರ್ಥಿಗಳಿಗೆ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಅಗ್ನಿವೀರರ ಆಯ್ಕೆ ಪ್ರಕ್ರಿಯೆಯ ರ್ಯಾಲಿಯ ದೈಹಿಕ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳು ಸೆಪ್ಟೆಂಬರ್ 10 ರಿಂದ 30ರವರೆಗೆ ನಡೆಯಬಹುದಾಗಿದೆ. ನಗರದ ಡಾ. ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಈ ಬೃಹತ್ ನೇಮಕಾತಿ ರ‍್ಯಾಲಿ ನಡೆಯಲಿದೆ ಎಂದರು. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಅಗ್ನಿಪಥ್ ಆಯ್ಕೆ ಪ್ರಕ್ರಿಯೆಯಲ್ಲಿ ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನಾ ಪ್ರಕ್ರಿಯೆ ನಡೆಯಲಿವೆ ಎಂದರು.
ಜಿಲ್ಲಾಡಳಿತದಿಂದ ಸೇನಾ ನೇಮಕಾತಿ ಅಧಿಕಾರಿಗಳು ತಿಳಿಸಿದಂತೆ, ಈ ಅವಧಿಯಲ್ಲಿ ಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಪ್ರತಿ ದಿನ ಬೆಳಿಗ್ಗೆ 5 ಗಂಟೆಯಿಂದಲೇ ಆಯ್ಕೆ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತದೆ. ಅಂದಾಜು ಹತ್ತು ಸಾವಿರದಷ್ಟು ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸೇನಾ ನೇಮಕಾತಿ ವಿಭಾಗದಿಂದ ಅಧಿಕಾರಿಗಳು ಆಗಮಿಸಲಿದ್ದಾರೆ ಎಂದರು.

ರ‍್ಯಾಲಿ ನಡೆಯುವ ಸ್ಥಳ:
ನೇಮಕಾತಿ ರ‍್ಯಾಲಿಯನ್ನು ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್ ಮತ್ತು ಶೆಡ್‌ಗಳು ಸೇರಿದಂತೆ ಸಿಂಥೆಟಿಕ್ ಟ್ರ‍್ಯಾಕ್ ಮತ್ತಿತರೆ ಮೂಲಸೌಕರ್ಯಗಳ ಲಭ್ಯತೆಯು ನೇಮಕಾತಿ ರ‍್ಯಾಲಿಗೆ ಅನುಕೂಲ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ಬ್ಯಾಡ್ಮಿಂಟನ್ ಕೋರ್ಟ್ ಬಳಸಿಕೊಳ್ಳಲು ಸೇನಾಧಿಕಾರಿಗಳು ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಲನಿರೋಧಕ ಟೆಂಟ್:
ರ‍್ಯಾಲಿ ವೇಳೆ ಅಭ್ಯರ್ಥಿಗಳು ಕಾಯುವ ಅಥವಾ ಮೌಲ್ಯಮಾಪನಕ್ಕೊಳಪಡುವ ಸಾಧ್ಯತೆಯಿರುವುದರಿಂದ ರ‍್ಯಾಲಿ ಸ್ಥಳದಲ್ಲಿ ಜಲನಿರೋಧಕ ಟೆಂಟ್‌ಗಳನ್ನು ಹಾಕಲು ನಿರ್ಧರಿಸಲಾಗಿದ್ದು, ಟೆಂಟ್‌ನಲ್ಲಿ ಟೇಬಲ್ ಮತ್ತು ಕುರ್ಚಿ ವ್ಯವಸ್ಥೆ ಮಾಡಲಾಗುವುದು ಎಂದವರು ತಿಳಿಸಿದ್ದಾರೆ.

ಬ್ಯಾರಿಕೇಡ್:
ರ‍್ಯಾಲಿಗೆ ಪ್ರವೇಶ ನಿಯಂತ್ರಣ, ಜನಸಂದಣಿ ನಿರ್ವಹಣೆ ಮತ್ತು ಓಟದ ಪರೀಕ್ಷೆಯನ್ನು ಸರಾಗವಾಗಿ ನಡೆಸುವ ನಿಟ್ಟಿನಲ್ಲಿ ರ್ಯಾಲಿ ನಡೆಯುವ ಸ್ಥಳದ ಒಳ ಮತ್ತು ಹೊರಗೆ ಬ್ಯಾರಿಕೇಡ್ ಹಾಕಲು ಕ್ರಮವಹಿಸಿ,ನೇಮಕಾತಿ ಅಧಿಕಾರಿಗಳು ಹಾಗೂ ಭಾಗವಹಿಸುವ ಅಭ್ಯರ್ಥಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು.

ವೈದ್ಯಕೀಯ ಸೌಲಭ್ಯ:

ಪರೀಕ್ಷೆಗೆ ಒಳಪಡುವ ಅಭ್ಯರ್ಥಿಗಳ ಹಿತದೃಷ್ಟಿಯಿಂದ ವೈದ್ಯರು, ನರ್ಸಿಂಗ್ ಸಹಾಯಕರು ಮತ್ತು ಆಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸಲು ಸೂಚಿಸಿದರು.

ವಿದ್ಯುತ್ ಬೆಳಕು:

ಕ್ರೀಡಾಂಗಣದಲ್ಲಿ ನೇಮಕಾತಿ ಸುಸೂತ್ರವಾಗಿ ನಡೆಯಬೇಕೆಂಬ ದೂರದೃಷ್ಟಿಯಿಂದ ನಿರಂತರ ವಿದ್ಯುತ್ ಸೌಲಭ್ಯ ಒದಗಿಸಲು,

ಇಂಟರ್ನೆಟ್ ಸಂಪರ್ಕ:

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯ ಅಗತ್ಯವಿರುವ ವಿವಿಧ ವ್ಯವಸ್ಥೆಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ಮತ್ತು ಇಂಟರ್ನೆಟ್ ಸಂಪರ್ಕವನ್ನು ಸ್ಥಾಪಿಸಲು ಬಿಎಸ್ ಎನ್ ಎಲ್ ಅಧಿಕಾರಿಗಳಿಗೆ ಸೂಚಿಸಲಾಯಿತು.

ಸಿಸಿಟಿವಿ ಕ್ಯಾಮೆರಾ:
ಸ್ಥಳದಲ್ಲಿ ಭದ್ರತೆ, ರಕ್ಷಣೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಎಲ್ಲರಿಗೂ ಅಗತ್ಯವಾದ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಸಾರಿಗೆ ವ್ಯವಸ್ಥೆ, ವಸತಿ ವ್ಯವಸ್ಥೆ, ಸ್ವಚ್ಛತಾ ವ್ಯವಸ್ಥೆ, ತಾತ್ಕಾಲಿಕ ವಸತಿ ವ್ಯವಸ್ಥೆ, ಸೇನಾ ನೇಮಕಾತಿಗೆ ಅನುಗುಣವಾಗಿ ಜಿಲ್ಲಾ ಕ್ರೀಡಾಂಗಣ ಸಿದ್ಧಗೊಳಿಸುವ ಕಾರ್ಯವನ್ನು ಸ್ಥಳೀಯ ಅಧಿಕಾರಿಗಳು ಕೈಗೊಳ್ಳಬೇಕಾಗಿರುವುದರಿಂದ ನೇಮಕಾತಿ ಪ್ರಾಧಿಕಾರದ ಅಧಿಕಾರಿಗಳ ಅವಶ್ಯಕತೆ ಹಾಗೂ ಮಾರ್ಗದರ್ಶನದಂತೆ ವ್ಯವಸ್ಥೆ ಮಾಡಬೇಕು. ಯಾವುದೇ ಲೋಪವಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸೆಪ್ಟೆಂಬರ್ ನಲ್ಲಿ ಕ್ರೀಡಾಂಗಣದಲ್ಲಿ ನಡೆಯಬಹುದಾದ ಕ್ರೀಡಾಕೂಟಗಳನ್ನು ಮರು ನಿಗದಿಗೊಳಿಸಬೇಕು ಎಂದು ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಅಂದಾಜು15 ದಿನಗಳ ಕಾಲ ನಡೆಯುವ ನೇಮಕಾತಿ ರ‍್ಯಾಲಿಯಲ್ಲಿ ವಿವಿಧ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಲು ಯಾವುದೇ ಅನಾನುಕೂಲವಾಗದ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆ ಕೈಗೊಳ್ಳಲು ಸೂಚಿಸಲಾಯಿತು.
ವೈದ್ಯಕೀಯ ತಂಡವನ್ನು ಪಾಳಿಯಂತೆ ನೇಮಿಸಬೇಕು. ದಾಖಲೆಗಳ ಪರಿಶೀಲನೆಗೆ ಕಂದಾಯ, ಶಿಕ್ಷಣ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳನ್ನು ಆಯ್ಕೆ ಪ್ರಕ್ರಿಯೆ ನಡೆಯುವ ಅವಧಿಗೆ ನಿಯೋಜಿಸಬೇಕು. ವಸತಿ ವ್ಯವಸ್ಥೆ ಕಲ್ಪಿಸಲಾಗುವ ಸ್ಥಳ ಹಾಗೂ ಕ್ರೀಡಾಂಗಣದ ಹೊರಾಂಗಣದಲ್ಲಿ ಸ್ವಚ್ಚತೆ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಅಗ್ನಿಪಥ್ ನೇಮಕಾತಿ ವಿಭಾಗದ ಅಧಿಕಾರಿ ಕರ್ನಲ್ ಸೋಮು ಮಹಾರಾಜನ್ ಅವರು ಮಾತನಾಡಿ, ಹತ್ತು ಸಾವಿರ ಅಭ್ಯರ್ಥಿಗಳು ಅಗ್ನಿವೀರರ ನೇಮಕಾತಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ದಿನಕ್ಕೆ 800 ಅಭ್ಯರ್ಥಿಗಳ ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ದಾಖಲೆಗಳ ಪರಿಶೀಲನೆ ಸಹ ನಡೆಸಲಾಗುವುದು ಅಗತ್ಯ ಸೌಲಭ್ಯಗಳ ಕುರಿತಂತೆ ಮಾಹಿತಿ ನೀಡಿದರು.

ಪೋಲಿಸ್ ಬಂದೋಬಸ್ತ್:
ಪ್ರವೇಶ ನಿಯಂತ್ರಣ, ಜನಸಂದಣಿ ನಿರ್ವಹಣೆ ಮತ್ತು ರ್ಯಾಲಿ ಸುಗಮವಾಗಿ ನಡೆಸಲು ನೇಮಕಾತಿ ಸ್ಥಳದ ಒಳ ಮತ್ತು ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಸಭೆಯಲ್ಲಿ ಕರ್ನಲ್ ಬಿಕೆಕೆ ವಂಶಿ,ಆಹಾರ ಇಲಾಖೆಯ ಹಾಗೂ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರಾದ ವಿನಯಕುಮಾರ ಪಾಟೀಲ, ಕ್ರೀಡಾಧಿಕಾರಿ ರಾಜಶೇಖರ ದೈವಾಡಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ವೀರಯ್ಯ ಸಾಲಿಮಠ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share this