ಶ್ರದ್ಧೆ ಹಾಗೂ ಆತ್ಮವಿಶ್ವಾಸವೇ ಯಶಸ್ಸಿನ ಮೂಲಮಂತ್ರ: ಮಾತಾಜಿ ಕೈವಲ್ಯಮಯಿ

ವಿಜಯಪುರ: “ಮಾನವನ ಜೀವನದಲ್ಲಿ ಗುರಿ ತಲುಪಲು ಶ್ರದ್ಧೆ ಅತ್ಯಗತ್ಯ. ಯಾರಲ್ಲಿ ಶ್ರದ್ಧೆ ಇರುತ್ತದೆಯೋ ಅವರು ಜೀವನದ ಪ್ರತಿ ಹಂತದಲ್ಲೂ ವಿಜಯಶಾಲಿಗಳಾಗುತ್ತಾರೆ,” ಎಂದು ವಿಜಯಪುರದ ಕೃಪಾಮಯಿ ಶಾರದಾಶ್ರಮದ ಪರಮಪೂಜ್ಯ ಕೈವಲ್ಯಮಯಿ ಮಾತಾಜಿಯವರು ಅಭಿಮತ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆಯ ಕನ್ನೂರಿನ ಶಾಂತಿ ಕುಟೀರ ಆಶ್ರಮದಲ್ಲಿ ಶಾಂತಿ ಕುಟೀರ ಟ್ರಸ್ಟ್ ಹಾಗೂ ಭಾರತೀಯ ಸ್ವರಾಜ್ಯ ಸಂಸ್ಥೆ ಮತ್ತು ಸಂಡೂರಿನ ಶ್ರೀ ಶೈಲೇಶ್ವರ ವಿದ್ಯಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಒಂದು ತಿಂಗಳ ಉಚಿತ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡುತ್ತಾ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಮಾತಾಜಿಯವರು, “ವಿದ್ಯಾರ್ಥಿ ದೆಸೆಯಲ್ಲಿ ಆತ್ಮವಿಶ್ವಾಸ ಎನ್ನುವುದು ಬೆನ್ನೆಲುಬಿನಂತೆ. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು ಸವಾಲುಗಳನ್ನು ಎದುರಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ಕೇವಲ ಅಂಕ ಗಳಿಕೆಯಷ್ಟೇ ಜೀವನವಲ್ಲ; ಸಂಸ್ಕಾರವಂತ ವ್ಯಕ್ತಿತ್ವ ರೂಪಿಸಿಕೊಂಡಾಗ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯ,” ಎಂದರು. ಪ್ರಸ್ತುತ ಕಾಲಘಟ್ಟದಲ್ಲಿ ಸದ್ಗುರುಗಳ ಸನ್ನಿಧಾನದಲ್ಲಿ ನಡೆಯುತ್ತಿರುವ ಇಂತಹ ಶಿಬಿರಗಳು ಕೇವಲ ಪಾಠವನ್ನಷ್ಟೇ ಅಲ್ಲದೆ, ಬದುಕುವ ಕಲೆಯನ್ನು ಕಲಿಸುತ್ತಿವೆ ಎಂದು ಅವರು ಶ್ಲಾಘಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀಮತಿ ಭಾರತಿ ಮನವಳ್ಳಿ ಪಾಟೀಲ ಮಾತನಾಡಿ, “ಶಿಲ್ಪಿಯು ಕಲ್ಲಿನಲ್ಲಿ ಸುಂದರ ಮೂರ್ತಿಯನ್ನು ಕಂಡರೆ, ಶಿಕ್ಷಕರು ಮಕ್ಕಳಲ್ಲಿ ಭವ್ಯ ಭವಿಷ್ಯವನ್ನು ಕಾಣುತ್ತಾರೆ. ನೂರಾರು ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಾಹನ ಸೌಕರ್ಯ ಹಾಗೂ ನೈತಿಕ ಮೌಲ್ಯಗಳನ್ನು ಒದಗಿಸುತ್ತಿರುವ ಶಾಂತಿ ಕುಟೀರದ ಸೇವೆ ಅನನ್ಯ,” ಎಂದು ಬಣ್ಣಿಸಿದರು.

ರಾಮರಾಜ್ಯ ಕಲಾ ಮೇಳದ ಅಧ್ಯಕ್ಷರಾದ ಶ್ರೀ ಶ್ರೀಕೃಷ್ಣ ಸಂಪಗಾಂವಕರ ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀ ಸದ್ಗುರು ಸಮರ್ಥ ಗಣಪತರಾವ ಮಹಾರಾಜರ ಆಶಯದಂತೆ 2002ರಲ್ಲಿ ಸಂಡೂರಿನ ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ಸಂಸ್ಥಾಪಕರಾದ ದಿವಂಗತ ಶ್ರೀ ಎಸ್. ವಿ. ನಾನಾವಟೆ ಗುರುಗಳಿಂದ ಆರಂಭಗೊಂಡ ಈ ಶಿಬಿರವು ಇಂದಿಗೂ ಅವಿರತವಾಗಿ ಸಾಗುತ್ತಿದೆ.
ಈ ಶಿಬಿರದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳಿಗೆ ಗಣಿತ, ವಿಜ್ಞಾನ, ಇಂಗ್ಲಿಷ್ ಜೊತೆಗೆ ಅಬಾಕಸ್, 1ರಿಂದ 99 ರ ವರೆಗೆ ಮಗ್ಗಿ ಹಾಗೂ ಶುದ್ಧ ಬರವಣಿಗೆಗೆ ಆದ್ಯತೆ,
ಅಗಸ್ತ್ಯ ಫೌಂಡೇಶನ್ ವತಿಯಿಂದ ವಿಜ್ಞಾನ ಪ್ರಾತ್ಯಕ್ಷಿಕೆ ಹಾಗೂ ಆರೋಗ್ಯ ತಪಾಸಣೆ,
ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸದೃಢಗೊಳಿಸಲು ಹಾಗೂ ದೈಹಿಕವಾಗಿ ಸದೃಢಗೊಳಿಸಲು ಕ್ರೀಡೆಗಳನ್ನು ಆಡಿಸಲಾಗುತ್ತದೆ.ಸ್ವದೇಶಿ ವಸ್ತುಗಳ ಜಾಗೃತಿ ಹಾಗೂ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ. ಶಿಕ್ಷಣ ತಜ್ಞರಿಂದ ಪಾಲಕರ ಸಭೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಮಾರಂಭದಲ್ಲಿ ಭಾರತೀಯ ಸುರಾಜ್ಯ ಸಂಸ್ಥೆಯ ಗೌರವಾಧ್ಯಕ್ಷರು, ಶ್ರೀ.ಬಿ. ಬಿ. ಪೂಜಾರ ಮಾತನಾಡಿದರು. ಗುರು ಮನೆತನದ ಹಿರಿಯರಾದ ಶ್ರೀ ರಮೇಶ ಕನ್ನೂರ ಅಧ್ಯಕ್ಷೀಯ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಶ್ರೀ.ಅಜಿತ ಕನ್ನೂರ, ಶ್ರೀನಿವಾಸ್ ಕುಲಕರ್ಣಿ, ಶ್ರೀ.ಸತೀಶ್ ತಿಕೋಟಿ, ವಿ.ಡಿ. ಪಾಟೀಲ್ ಸೇರಿದಂತೆ ಆಶ್ರಮದ ನಿವಾಸಿಗಳು, ಶಿಕ್ಷಕ ವೃಂದ ಹಾಗೂ ನೂರಾರು ಶಿಬಿರಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.

Share this