ಗ್ರಾಮೀಣ ಭಾಗದಲ್ಲಿ ನೀರಾವರಿ ಜೊತೆಗೆ ಗುಣಮಟ್ಟದ ವಿದ್ಯುತ್ ಹಾಗೂ ಶಿಕ್ಷಣ ಒದಗಿಸಲು ಬದ್ಧ: ಎಂ. ಬಿ. ಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ, ಏ. 19:
ಗ್ರಾಮೀಣ ಭಾಗದಲ್ಲಿ ನೀರಾವರಿ ಜೊತೆಗೆ ಗುಣಮಟ್ಟದ ವಿದ್ಯುತ್ ಹಾಗೂ ಶಿಕ್ಷಣ ಒದಗಿಸಲು ಕಾರ್ಯೋನ್ಮುಖನಾಗಿದ್ದೇನೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ರವಿವಾರ ಬಬಲೇಶ್ವರ ತಾಲೂಕಿನ ಹೆಬ್ಬಾಳಟ್ಟಿಯಲ್ಲಿ ಚಂದ್ರಗಿರಿ ಸಿದ್ರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಜಾತ್ರೆಗೆ ನಮ್ಮ ತಂದೆಯವರ ಕಾಲದಿಂದಲೂ ಬರುತ್ತಿದ್ದೇವೆ. ದೇವರು, ಶ್ರೀಗಳು ಮತ್ತು ಗ್ರಾಮಸ್ಥರ ಆಶೀರ್ವಾದದಿಂದ ಜಲಸಂಪನ್ಮೂಲ‌ ಸಚಿವನಾಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಆಶಯದಂತೆ ನೀರಾವರಿ ಕೆಲಸ ಮಾಡಿದ್ದೇನೆ. ಬಾಕಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದರಿಂದ ಬೇಸಿಗೆಯಲ್ಲಿ ನೀರಿನ ಬವಣೆ ನೀಗಲಿದೆ. ನೀರಾವರಿಗೆ ಪೂರಕವಾಗಿ ಗುಣಮಟ್ಟದ ವಿದ್ಯುತ್ ಒದಗಿಸಲು ಹೆಬ್ಬಾಳಟ್ಟಿ ಬಳಿ 110 ಕೆ. ವಿ. ವಿದ್ಯುತ್ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ಇಲ್ಲಿನ ದೇವಸ್ಥಾನಕ್ಕೆ ಮೂಲಭೂತ ಸೌಲಭ್ಯ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಸಿದ್ದಲಿಂಗಯ್ಯ ರುದ್ರಯ್ಯ ಹಿರೇಮಠ ಸ್ವಾಮೀಜಿ, ಮುಖಂಡರಾದ ಅಶೋಕ ಕಾಖಂಡಕಿ, ಶ್ರೀಶೈಲ ತರಸೆ, ಸಿದರಾಯ ಪ್ರದಾನಿ, ಈಶ್ವರ ಬಂಗಾರಿ, ಚನ್ನಪ್ಪ ಕೊಪ್ಪದ, ರಫೀಕ ಸೋನಾರ, ಜಾಫರ ಇನಾಮದಾರ, ಜಗದೀಶ ಕಾಖಂಡಕಿ, ಸುಭಾಸ ಹಟ್ಟಿ, ಮಲ್ಲು ತುಂಗಳ ಸೇರಿದಂತೆ ಗ್ರಾಮದ ಹಿರಿಯರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.

Share this