ಹಳ್ಳ-ಕೊಳ್ಳ ಒತ್ತುವರಿ ತೆರವುಗೊಳಿಸಿ, ಸಹಕರಿಸಿ: ರೈತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಮನವಿ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 19:
ಬಬಲೇಶ್ವರ ಮತಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಬಹುತೇಕ ಗ್ರಾಮಗಳಲ್ಲಿ ಹಳ್ಳ-ಕೊಳ್ಳಗಳು ಒತ್ತುವರಿಯಾಗಿವೆ. ರೈತರು ಸ್ವಯಂ ಪ್ರೇರಣೆಯಿಂದ ಹಳ್ಳ ಒತ್ತುವರಿ ತೆರುವುಗೊಳಿಸಬೇಕು. ಅಲ್ಲಿ ಬೆಳೆದಿರುವ ಗಿಡ-ಗಂಟಿ ತೆಗೆದು ಸಹಕರಿಸಿದರೆ ಹಳ್ಳ ತುಂಬಿಸುವ ಮೂಲಕ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟದ ಹೊಳೆಯನ್ನೇ ಹರಿಸುವೆ ಎಂದು ಬೃಹತ್‌ ಮತ್ತು ಮಧ್ಯಮ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಬಬಲೇಶ್ವರ ತಾಲೂಕಿನ ನಿಡೋಣಿ- ಯಕ್ಕುಂಡಿ-ನಾಗರಾಳ- ಕುಮಠೆ-ಅರ್ಜುಣಗಿ ಹಂಗಣಿ, ಕಾತ್ರಾಳ, ಚಿಕ್ಕಿಲಕಿ, ನಂದ್ಯಾಳ ದನ್ನರಗಿ, ಟಕ್ಕಳಕಿ, ಬಿಜ್ಜರಗಿ, ಗೊಣಸಗಿ ಮತ್ತು ಕನಮಡಿ (ಗುಲಗಂಜಿ) ಹಳ್ಳಿಗಳಿಗೆ ಅಡ್ಡಲಾಗಿ ಸರಣಿ ಚೆಕ್ ಡ್ಯಾಂ‌ ರೀಚಾರ್ಜ್ ಶಾಪ್ಟ್ ಗಳನ್ನು ನಿರ್ಮಾಣ ಮಾಡುವ ಮೂಲಕ ಅಂತರ್ಜಲ ಅಭಿವೃದ್ಧಿಪಡಿಸುವ 988.42 ಲಕ್ಷ ಕಾಮಗಾರಿಗೆ ಭಾನುವಾರ ಅರ್ಜುಣಗಿಯಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಇದೊಂದು ಪ್ರಾಯೋಗಿಕ ಯೋಜನೆಯಾಗಿದೆ. ನಮ್ಮ ಮತಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುವ ಮೂಲಕ ನಂತರದ ದಿನಗಳಲ್ಲಿ ಇಡೀ ಜಿಲ್ಲೆಯಲ್ಲಿ ಸರಣಿ ಚೆಕ್ ಡ್ಯಾಂ ಯೋಜನೆಗೆ ಚಾಲನೆ ನೀಡಲಾಗುವದು. ಈ ಯೋಜನೆ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಈ ನೀರಾವರಿ ಯೋಜನೆಯಿಂದ ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಈಗಾಗಲೇ ನಾನು ನೀರಾವರಿ ಕ್ಷೇತ್ರದಲ್ಲಿ ಮಾಡಿದ ಕಾರ್ಯವನ್ನು ನ್ಯೂಯಾರ್ಕ್‌ ಟೈಮ್ಸ್‌ ನವರು ವರದಿ ಮಾಡಿದ್ದಾರೆ. ಹಳ್ಳ-ಕೊಳ್ಳ ತುಂಬಿಸುವ ಯೋಜನೆ ಯಶಸ್ಸಿಗೆ ಎಲ್ಲರೂ ಒತ್ತುವರಿ ತೆರುವುಗೊಳಿಸುವ ಮೂಲಕ ಸಹಕರಿಸಬೇಕು ಎಂದರು.
ನಮ್ಮ ಮತಕ್ಷೇತ್ರದಲ್ಲಿ 58 ಹಳ್ಳಿಗಳಿವೆ. 48 ಗ್ರಾಮಗಳ ಹಳ್ಳಗಳಿಗೆಬಾಂದಾರ ನಿರ್ಮಿಸುತ್ತಿದ್ದೇವೆ. ಹಾಗಾಗಿ ನೀವೆಲ್ಲ ಸೌಭಾಗ್ಯವಂತರು ಎಂದು ಬಣ್ಣಿಸಿದರು.
ಜಿಲ್ಲೆಯಲ್ಲಿ 15ನೇ ಡಿಸ್ಟ್ರೀಬ್ಯೂಶನ್‌ ಕೆಲಸ ನಡೆದಿದೆ. ಮುಂದಿನ ಮಳೆಗಾಲಕ್ಕೆ 6 ಪ್ಯಾಕೇಜ್‌ ಸಿದ್ಧವಾಗಬೇಕು. ಸಣ್ಣ ನೀರಾವರಿ ಇಲಾಖೆಯಿಂದ ಪ್ರಯತ್ನಿಸೋಣ. ಒಂದು ವೇಳೆ ಅದು ಸಾಧ್ಯವಾದಲ್ಲಿ 118 ಹಳ್ಳಗಳಿಗೆ 176 ಕೋಟಿ ರೂ. ವೆಚ್ಚದಲ್ಲಿ ಹಳ್ಳ ತುಂಬಿಸುವ ಕಾರ್ಯ ಮಾಡುವುದಾಗಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಕೆರೆ ತುಂಬಿದ ಮೇಲೆ ಅಂತರ್ಜಲ ಹೆಚ್ಚಳವಾದ ಮಾದರಿಯಲ್ಲೇ, ಇದರಿಂದ ಇನ್ನಷ್ಟೂ ಅಂತರ್ಜಲ ಹೆಚ್ಚಳವಾಗಲಿದೆ ಎಂದರು.
ನೀರಾವರಿಯಿಂದ ಈ ಭಾಗದಲ್ಲಿ ಜಮೀನುಗಳು ಇಂದು 20 ಲಕ್ಷ ರೂ. ಬೆಲೆ ಬಾಳುತ್ತೇವೆ. ಅದಕ್ಕೆ ಜಮೀನು ಮಾರಾಟ ಮಾಡಬಾರದು ಎಂದು ಸಚಿವ ಎಂ.ಬಿ. ಪಾಟೀಲ ರೈತರಿಗೆ ಕಿವಿಮಾತು ಹೇಳಿದರು.
ಕೆರೆ ಮತ್ತು ಹಳ್ಳ ತುಂಬುವುದರಿಂದ ಅಂತರ್ಜಲ ಭರಪೂರವಾಗಲಿದೆ. ದಯವಿಟ್ಟು, ಈ ಕನಸು ನನಸು ಮಾಡಲಿಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು. ತಂಟೆ-ತಕರಾರು ಬಂದಲ್ಲಿ ಗ್ರಾಮದ ಹಿರಿಯರು ಇತ್ಯರ್ಥಪಡಿಸಿಕೊಂಡು ಸಹಕಾರ ನೀಡುವ ಮೂಲಕ ನೀರಾವರಿ ವಿಷಯದಲ್ಲಿ ಮಾದರಿಯಾಗುವುದರಲ್ಲಿ ಸಂಶವೇ ಇಲ್ಲ ಎಂದರು.
ಕೆರೆ, ಹಳ್ಳ-ಕೊಳ್ಳ ತುಂಬುವುದರಿಂದ ಹಾಗೂ ಬಾಂದಾರ ನಿರ್ಮಾಣದಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂದ ಸಚಿವರು,
ಕೆರೆ ತುಂಬುವ ಯೋಜನೆಗೆ ಬಿಎಲ್‌ಡಿಇ ಸಂಸ್ಥೆಯ ಫ.ಗು. ಹಳಕಟ್ಟಿ ಎಂಜಿನೀಯರಿಂಗ್‌ ಕಾಲೇಜ್‌ ನಲ್ಲಿ ರೂಪು-ರೇಷೆ ಸಿದ್ಧಪಡಿಸಿ ಯೋಜನೆಗೆ 2008ರಲ್ಲಿ ಚಾಲನೆ ನೀಡಿದ್ದು ದೇಶದಲ್ಲಿ ಮಾದರಿ ಕಾರ್ಯ ಎಂದರು.
ಆರಂಭದಲ್ಲಿ ತಾಂತ್ರಿಕ ಕಾರಣಗಳಿಂದ ಯೋಜನೆಗೆ‌ ಕೈಗೂಡಲಿಲ್ಲ. ಬಳಿಕ ಇಡೀ ರಾಜ್ಯಾದ್ಯಂತ 6000 ಕೆರೆ ತುಂಬುವ ಮೂಲಕ ರೈತ ಸಂಕುಲಕ್ಕೆ ಅದ್ಭುತ ಕೊಡುಗೆ ನೀಡಿದ್ದನ್ನು ಸಚಿವ ಎಂ.ಬಿ. ಪಾಟೀಲ ಮೆಲಕು ಹಾಕಿದರು.
2013ರಲ್ಲಿ ನಾನು ನೀರಾವರಿ ಸಚಿವನಾಗಿದ್ದ ವೇಳೆ ಕೃಷ್ಣಾ ನ್ಯಾಯಾಧೀಕರಣದ ತೀರ್ಪು ಬಂದಿತ್ತು. ಹಣಮಾಪೂರ ಮತ್ತು ಬಳೂತಿ ಎರಡೇ ಸ್ಥಾವರಗಳಿದ್ದವು. ಒಂದು ಸಾವಿರ ಕಿಮೀ‌ ಮುಖ್ಯ ಕಾಲುವೆ ಹಾಗೂ 9 ಸ್ಥಾವರ ನಿರ್ಮಾಣ ಮಾಡಲಾಗಿದೆ. ನೀರಾವರಿ ಕ್ಷೇತ್ರ ಹೆಚ್ಚಳವಾಗಿದ್ದರಿಂದ ಇಲ್ಲಿನ ಜನರಿಗೆ ಅನುಕೂಲವಾಗಿದೆ.
ತಿಕೋಟ ಎತ್ತರದ ಪ್ರದೇಶವಾಗಿದ್ದರಿಂದ ನೀರಾವರಿಗೊಳಪಡಿಸುವುದು ಸವಾಲಿನದ್ದಾಗಿತ್ತು. ಆದಾಗ್ಯೂ ನಾನು ಧೃತಿಗೆಡದೇ, 3600 ಕೋಟಿ ರೂ. ವೆಚ್ಚದ ತುಬಚಿ-ಬಬಲೇಶ್ವರ ಯೋಜನೆ ಮೂಲಕ ನೀರಾವರಿ ಸೌಲಭ್ಯ ಒದಗಿಸುವ ಕಾರ್ಯ ನಿರ್ವಹಿಸಲಾಗಿದೆ ಎಂದರು.
ಈ ಭಾಗದಲ್ಲಿ ಕೆರೆ ತುಂಬಿಸುವುದರಿಂದ ಪ್ರಯೋಜನವಾಗಿದೆ. ಕೆನಾಲ್ ನೆಟ್ ವರ್ಕ ಮೇಲೆ 176 ಹಳ್ಳಗಳಿವೆ. ಮಳೆಗಾಲದಲ್ಲಿ ಹಳ್ಳಗಳಿಗೆ ನೀರು ಕೊಡುವ ಯೋಜನೆ ರೂಪಿಸಲಾಗಿತ್ತು. ಒಂದು ಸಾವಿರ ಮೀಟರ್ ಒಂದು ಬಾಂದಾರ‌ ನಿರ್ಮಿಸಿ ನೀರು ಹಿಂಗಿ ಬಾವಿ-‌ಬೋರವೆಲ್ ಗಳಿಗೆ ಅನುಕೂಲ ಕಲ್ಪಿಸಿದ್ದೇನೆ. ತನ್ಮೂಲಕ ಇಡೀ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ವಿಸುವ ಮಾದರಿ ಕೆಲಸ ಮಾಡಿದ್ದೇನೆ ಎಂದರು.
ಇಲ್ಲಿ ಹತ್ತು ಪ್ಯಾಕೇಜ್ ಅಂದಾಜು ಒಂದು ನೂರ ಕೋಟಿ ರೂ. ಈ ಅಂತರ್ಜಲ ಅಭಿವೃದ್ಧಿಪಡಿಸಲು ಇಲ್ಲಿಂದ‌ ಪ್ರಾಯೋಗಿಕಾವಗಿ ಆರಂಭಿಸಲಾಗಿದೆ. ನಮ್ಮ‌ ಮತಕ್ಷೇತ್ರದಲ್ಲಿ ಹತ್ತು ಪ್ಯಾಕೇಜ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.
ಮತಕ್ಷೇತ್ರದ 58 ಹಳ್ಳಗಳಿಗೆ 48 ಗ್ರಾಮಗಳಿಗೆ ಅನುಕೂಲ ಒದಗಲಿದೆ. ಬಳಿಕ ಇಡೀ ಜಿಲ್ಲೆಯ ಹಳ್ಳಗಳಿಗೆ ನೀರು ತುಂಬಿಸುವ ಕಾರ್ಯ ಮಾಡಲಾಗುವುದು ಎಂದರು.
ಬೋರವೆಲ್, ಬಾವಿಗಳಿಗೆ ನೀರು ಬರುವುದರಿಂದ ರೈತರಿಗೆ ಅನುಕೂಲವಾಗಲಿದೆ. ಈ ಕಾರ್ಯ ಗುಣಮಟ್ಟದಿಂದ ಕೂಡಿರಬೇಕು. ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರು ಇದ್ದರು.

Share this