ಏ. 21ರಂದು ಅಕ್ಕಮಹಾದೇವಿ ವಿವಿಯ 17 ನೇ ಘಟಿಕೋತ್ಸವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿ

ಸಪ್ತಸಾಗರ ವಾರ್ತೆ,ವಿಜಯಪುರ ಏ, 20: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 17ನೇ ಘಟಿಕೋತ್ಸವ ಏ. 21ರಂದು ಮಂಗಳವಾರ ಬೆಳಿಗ್ಗೆ 11.30ಕ್ಕೆ ವಿವಿಯ ಜ್ಞಾನಶಕ್ತಿ ಆವರಣದ ಕ್ರೀಡಾಂಗಣದಲ್ಲಿ ವಿಶೇಷವಾಗಿ ನಿರ್ಮಿಸಿರುವ ಸಭಾಂಗಣದಲ್ಲಿ ನಡೆಯಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪಾಲ್ಗೊಳ್ಳಲಿದ್ದಾರೆ ಎಂದು ಕುಲಪತಿ ಡಾ. ವಿಜಯಾ ಕೋರಿಶೆಟ್ಟಿ ಹೇಳಿದರು.‌
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಅತಿಥಿಗಳಾಗಿ ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಉಜ್ವಲಾ ಚಕ್ರದೇವ್ ಅವರು ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ, ಕುಲಪತಿ ಪ್ರೊ.ವಿಜಯಾ ಬಿ. ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ ಅವರು ಉಪಸ್ಥಿತರಿರುವರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಮೂವರು ಮಹನೀಯರಿಗೆ ಈ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು. ಜಾನಪದ ಕ್ಷೇತ್ರದ ಸಾಧನೆಗಾಗಿ ಧಾರವಾಡದ ಶ್ರೀಮತಿ ಪಾರ್ವತೆವ್ವ ಸಿದ್ದಪ್ಪ ಹೊಂಗಲ್, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಕಲಬುರಗಿಯ ಡಾ.ಸಂಗೀತಾ ಎನ್ ಕಟ್ಟಿಮನಿ ಮತ್ತು ಉದ್ಯಮ ಮತ್ತು ಸಾಮಾಜಿಕ ಸೇವಾ ಕ್ಷೇತ್ರದ ಸಾಧನೆಗಾಗಿ ಬಾಗಲಕೋಟಿ ಜಿಲ್ಲೆಯ ಶ್ರೀಮತಿ ಆಶಾದೇವಿ ಜಗದೀಶ ಗುಡಗುಂಟಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತದೆ. ಸನ್ಮಾನ್ಯ ರಾಜ್ಯಪಾಲರು ಮತ್ತು ನಮ್ಮ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ಶ್ರೀ ಥಾವರಚಂದ್ ಗೆಹ್ಲೋಟ್ ಅವರು ಈ ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುವರು ಎಂದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಿಂದ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು 70 ವಿದ್ಯಾರ್ಥಿನಿಯರಿಗೆ 58 ಚಿನ್ನದ ಪದಕ ಮತ್ತು 12 ನಗದು ಪಾರಿತೋಷಕ ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ ಎಂದರು.‌
ಈ ಘಟಿಕೋತ್ಸವದಲ್ಲಿ ಒಟ್ಟು 13,441 ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಪದವಿ ಪಡೆಯಲು ಅರ್ಹರಾಗಿರುತ್ತಾರೆ ಎಂದರು.‌
ಈ ಘಟಿಕೋತ್ಸವದಲ್ಲಿ ಒಟ್ಟು 86 ವಿದ್ಯಾರ್ಥಿನಿಯರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುವುದು. ಈ ಘಟಿಕೋತ್ಸವದಲ್ಲಿ ಒಟ್ಟು 1,116 ವಿದ್ಯಾರ್ಥಿನಿಯರಿಗೆ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ನೀಡಲಾಗುವುದು.
ಈ ಪೈಕಿ ಎಂ.ಎ 380,ಎಂ.ಕಾಂ 284,ಎಂಬಿಎ 53,ಎಂ ಎಸ್ ಸಿ 305, ಎಂಈಡಿ 5,ಎಂಪಿಇಡಿ 7,
ಎಂ ಎಸ್ ಡಬ್ಲ್ಯೂ 24,ಎಂಸಿಎ 28,ಎಂಎಲ್‌ಐಎಸ್ ಸಿ 09,ಎಂಎಫ್ಎಂ 21 ವಿದ್ಯಾರ್ಥಿನಿಯರು ಪದವಿ‌ಗೆ ಅರ್ಹರಾಗಿದ್ದಾರೆ.
ಈ ಘಟಿಕೋತ್ಸವದಲ್ಲಿ ಒಟ್ಟು 12,325 ವಿದ್ಯಾರ್ಥಿನಿಯರಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಗುವುದು.
ಇದರಲ್ಲಿ ಬಿಎ 5709 ಬಿ ಎಸ್ ಡಬ್ಲ್ಯೂ 35, ಬಿ ಎಡ್ 1994, ಬಿಪಿಎಡ್ 15,ಬಿಕಾಂ 3040,ಬಿಬಿಎ139,ಬಿಎಸ್ ಸಿ 1131,ಬಿಸಿಎ 216, ಮತ್ತು ಬಿಎಫ್ ಟಿ/ಬಿಎಪ್ ಎಡಿ 46 ವಿದ್ಯಾರ್ಥಿನಿಯರು ಸ್ನಾತಕ ಪದವಿ ಪಡೆಯಲು ಅರ್ಹರಾಗಿರುತ್ತಾರೆ ಎಂದರು.
ವಿಶ್ವ ವಿದ್ಯಾನಿಲಯದ 17ನೇ ಘಟಿಕೋತ್ಸವವನ್ನು ಯಶಸ್ವಿಯಾಗಿ ಸಂಘಟಿಸಲು ಈಗಾಗಲೇ ಹಲವಾರು ಸಮಿತಿಗಳನ್ನು ರಚಿಸಲಾಗಿದ್ದು,ಸಿದ್ಧತೆಗಳು ಭರದಿಂದ ಸಾಗಿವೆ ಎಂದರು.
ಈ ಘಟಿಕೋತ್ಸವವನ್ನು ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಕ್ಕ ಟಿವಿ ಯುಟ್ಯೂಬ್ ನ್ಯೂಸ್ ಮೂಲಕ ಲೈವ್ ಕವರೇಜ್ ಮಾಡಲಾಗುತ್ತಿದ್ದು, (https://www.youtube.com/live/ZQtDGBvY ak?si=KvS7sLtai 5rXV4) ಮೂಲಕ ವೀಕ್ಷಿಸಬಹುದಾಗಿದೆ.
ರಾಜ್ಯದಾದ್ಯಂತ ಇರುವ ವಿವಿಯ ಸಂಲಗ್ನ ಕಾಲೇಜುಗಳ ವಿದ್ಯಾರ್ಥಿನಿಯರು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಕ್ಕ ಟಿವಿ ಯುಟ್ಯೂಬ್ ನ್ಯೂಸ್ ಚಾನೆಲ್ ಮೂಲಕ ಪ್ರಸಾರವಾಗುವ ಲೈವ್ ಕವರೇಜ್ ವೀಕ್ಷಿಸುವ ಮೂಲಕ ಘಟಿಕೋತ್ಸವದಲ್ಲಿ ಆನ್‌ಲೈನ್ ಮೂಲಕ ಭಾಗವಹಿಸಲಿದ್ದಾರೆ. ಇದಕ್ಕಾಗಿ ಎಲ್ಲಾ ಕಾಲೇಜುಗಳಲ್ಲಿಯೇ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಆಹ್ವಾನಿತರು ಬೆಳಿಗ್ಗೆ 11:15 ಗಂಟೆಯೊಳಗಾಗಿ ತಮ್ಮ ಆಸನಗಳಲ್ಲಿ ಕುಳಿತಿರಬೇಕು ಮತ್ತು ಆಹ್ವಾನಿತರು ಘಟಿಕೋತ್ಸವದ ಮಧ್ಯದಲ್ಲಿ ಸಭಾಭವನದಿಂದ ಹೊರಕ್ಕೆ ಹೋಗಬಾರದು ಎಂದರು.‌
ಘಟಿಕೋತ್ಸವ ಮೆರವಣಿಗೆ ಸಭಾಂಗಣದಲ್ಲಿ ಪ್ರವೇಶಿಸುವಾಗಿನಿಂದ ಹಿಡಿದು ಕುಲಾಧಿಪತಿಗಳು ಪೀಠಸ್ಥರಾಗುವವರೆಗೂ ಸಭಾಸದರು ಎದ್ದು ನಿಂತಿರಬೇಕು. ಹಾಗೆಯೇ ಘಟಿಕೋತ್ಸವ ಮುಗಿದ ಬಳಿಕ, ಮೆರವಣಿಗೆ ಸಭಾಂಗಣವನ್ನು ಬಿಟ್ಟು ತೆರಳುವವರೆಗೆ, ಸಭಾಸದರು ತಮ್ಮ ಸ್ಥಳಗಳಲ್ಲಿಯೇ ಎದ್ದು ನಿಂತಿರಬೇಕು.
ಘಟಿಕೋತ್ಸವದ ಸಭಾಂಗಣದಲ್ಲಿ 12 ವರ್ಷದ ಒಳಗಿನ ಮಕ್ಕಳಿಗೆ ಪ್ರವೇಶವಿಲ್ಲ. ಸಭಾಂಗಣದಲ್ಲಿ ಕ್ಯಾಮೆರಾ, ಮೊಬೈಲ್, ವಾಟರ್ ಬಾಟಲ್, ಕೊಡೆ, ಕೈಚೀಲ ಮುಂತಾದ ಯಾವುದೇ ವಸ್ತುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಕುಡಚಿಗೆ 5 ಚಿನ್ನದ ಪದಕ
ವಿವಿಯ ವಿದ್ಯಾರ್ಥಿನಿ ಸಬಾ ಮಹ್ಮದ ರಫಿಕ್ ಕುಡಚಿ ಅವರು ಎಂಎ ಸಮಾಜ ಶಾಸ್ತ್ರ ವಿಷಯದಲ್ಲಿ 05 ಚಿನ್ನದ ಪದಕ, ಕಲಬುರಗಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯರ್ಥಿನಿ ರೇಖಾ ದೊಡವಾಡ ಅವರು ಎಂ.ಎ ಕನ್ನಡದಲ್ಲಿ 03 ಚಿನ್ನದ ಪದಕ ಹಾಗೂ ಎರಡು ನಗದು ಪಾರಿತೋಷಕ ಪಡೆದಿದ್ದಾರೆ.ವಿವಿಯ ಗೀತಾ ಸಿ.ಕಾಟಿ ಇವರು ಎಂಎ ಅರ್ಥಶಾಸ್ತ್ರದಲ್ಲಿ 03 ಚಿನ್ನದ ಪದಕ ಹಾಗೂ ವಿವಿಯ
ಶಹಿಸ್ತಾ ತಜೀನ್ ಮಳ್ಳಿ ಇವರು ಎಂ ಎಸ್ಸಿ ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಷಯದಡಿ 03 ಚಿನ್ನದ ಪದಕ ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು.
ಅತಿ ಹೆಚ್ಚು ಚಿನ್ನದ ಪದಕ ಹಾಗೂ ನಗದು ಪಾರಿತೋಷಕ ಪಡೆದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್.ಲಕ್ಕಣ್ಣವರ, ಆರ್ಥಿಕ ಅಧಿಕಾರಿ ರಾಮಣ್ಣ ಅಥಣಿ, ಘಟಿಕೋತ್ಸವ ಸಂಯೋಜನಾಧಿಕಾರಿ ಪ್ರೊ.ರಾಜಕುಮಾರ್ ಮಾಲಿ ಪಾಟೀಲ್, ಮಾಧ್ಯಮ ಸಮಿತಿ ಅಧ್ಯಕ್ಷ ಪ್ರೊ.ಓಂಕಾರ ಕಾಕಡೆ ಹಾಗೂ ಸಂಯೋಜಕಿ ಡಾ.ತಹಮೀನಾ ಕೋಲಾರ, ಘಟಿಕೋತ್ಸವ ಲೈವ್ ಕವರೇಜ್ ಸಂಯೋಜಕ ಸಂದೀಪ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Share this