ಶಂಕರಾಚಾರ್ಯರು ಜ್ಞಾನ, ಕರ್ಮ, ಭಕ್ತಿಯ ಸಂಗಮ-ಸಂತೋಷ ಬಂಡೆ

ಸಪ್ತಸಾಗರ ವಾರ್ತೆ, ವಿಜಯಪುರ, ಏ. 21:
ಶಂಕರರ ಜೀವನ-ಸಾಧನೆ ನಿಜಕ್ಕೂ ಅದ್ವಿತೀಯ. ಅವರು ಜ್ಞಾನ, ಕರ್ಮ, ಭಕ್ತಿಯ ಸುಂದರ ಸಂಗಮ. 21 ನೇ ಶತಮಾನದ ಅಶಾಂತ ಜಗತ್ತಿಗೆ, ಅವರ ಶಾಂತಿಯುತ ಮತ್ತು ಸಮಗ್ರ ಜೀವನ ವಿಧಾನವೇ ನಿಜವಾದ ದಾರಿದೀಪ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಮಂಗಳವಾರ ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಶಂಕರಾಚಾರ್ಯರ ಜಯಂತಿ ಆಚರಣೆ ಉದ್ಧೇಶಿಸಿ ಅವರು ಮಾತನಾಡಿದರು.
ಭೌತಿಕ ವಸ್ತುಗಿಂತ ಆಧ್ಯಾತ್ಮಿಕ ಸಾಧನೆಗೆ ಆದ್ಯತೆ ನೀಡಬೇಕು. ಭಿನ್ನಾಭಿಪ್ರಾಯ ಮರೆತು, ಸಾಮರಸ್ಯದಿಂದ ಬದುಕುವ ಮಾರ್ಗವನ್ನು ಇಡೀ ಜಗತ್ತಿಗೆ ಆದಿ ಶಂಕರರು ತೋರಿದ್ದಾರೆ. ಜ್ಞಾನ, ಕಾವ್ಯ ರಚನೆ, ಸಂಘಟನಾ ಚತುರತೆಯಿಂದ ಭಾರತೀಯ ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ಅವರ ತತ್ವಾದರ್ಶಗಳು ನಮ್ಮ ಬದುಕಿಗೆ ಸ್ಫೂರ್ತಿ ಎಂದು ಹೇಳಿದರು.
ಮುಖ್ಯ ಶಿಕ್ಷಕ ಕೆ.ಐ. ಮಕಾನದಾರ ಮಾತನಾಡಿ, ಆದಿ ಶಂಕರಾಚಾರ್ಯರು 8ನೇ ಶತಮಾನದ ಭಾರತೀಯ ದಾರ್ಶನಿಕ, ಅದ್ವೈತ ವೇದಾಂತದ ಪ್ರತಿಪಾದಕ ಮತ್ತು ಸನಾತನ ಧರ್ಮದ ಪುನರುತ್ಥಾನಕಾರ. ಅವರು ಪ್ರಮುಖ ಭಾಷ್ಯಗಳನ್ನು ರಚಿಸಿ, ಸನಾತನ ಧರ್ಮದ ರಕ್ಷಣೆಗೆ ಭದ್ರ ಬುನಾದಿ ಹಾಕಿದರು ಎಂದು ಹೇಳಿದರು.
ಶಿಕ್ಷಕರಾದ ನಿಂಗಪ್ಪ ನಾವದಗಿ, ಶಾಂತೇಶ ಹಳಗುಣಕಿ ಉಪಸ್ಥಿತರಿದ್ದರು.

Share this