ಸಪ್ತಸಾಗರ ವಾರ್ತೆ,ವಿಜಯಪುರ, ಏ. 24:
ಪುಸ್ತಕವು ಹಸನಾದ ಬದುಕನ್ನು ಸೃಷ್ಟಿಸುವ ಶಕ್ತಿಶಾಲಿ ದ್ರವ್ಯ. ಆ ದ್ರವ್ಯ ಎಲ್ಲರಿಗೂ ತಲುಪಿದರೆ ಅರಿವಿನ ಕೀಲಿಕೈ ಸಿಕ್ಕಂತೆಯೇ ಸರಿ. ಪುಸ್ತಕ ಕೇವಲ ನಿರ್ಜೀವ ವಸ್ತು ಅಲ್ಲ, ಬದಲಾಗಿ ವ್ಯಕ್ತಿಯ ವ್ಯಕ್ತಿತ್ವವನ್ನು ಶ್ರೇಷ್ಠ ಮಟ್ಟಕ್ಕೆ ಒಯ್ಯುವ ಜೀವ ಸೆಲೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಗುರುವಾರ ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ವಿಶ್ವ ಪುಸ್ತಕ ದಿನದ ನಿಮಿತ್ತ ಹಮ್ಮಿಕೊಂಡ ‘ಪುಸ್ತಕ ವ್ಯಕ್ತಿತ್ವ ನಿರ್ಮಾಪಕ’ ಕುರಿತು ಅವರು ಮಾತನಾಡಿದರು.
ಪುಸ್ತಕ ಜ್ಞಾನದ ಕಣಜ. ಪುಸ್ತಕ ಓದಿನಿಂದ ಜ್ಞಾನ ವೃದ್ಧಿ, ಭಾಷಾ ಕೌಶಲ್ಯ, ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ, ಕಲ್ಪನಾಶಕ್ತಿ ಬೆಳೆದು, ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡುತ್ತದೆ.
ಮಕ್ಕಳ ಬದುಕಿನಲ್ಲಿ ಧೈರ್ಯ, ಸಮಗ್ರತೆ, ದಯೆಯ ಗುಣ ಬೆಳೆಸುವಲ್ಲಿ ಪುಸ್ತಕದ ಪಾತ್ರ ಅಪಾರ. ಇಂದಿನ ಪೀಳಿಗೆ ಪುಸ್ತಕ ಓದಿಗೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಸ್ತಕ ನಮಗೆ ಅಮೂಲ್ಯ ನಿಧಿ, ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕ. ಪ್ರಸ್ತುತ ಪುಸ್ತಕವು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಪುಸ್ತಕದ ಜಾಗವನ್ನು ಕಂಪ್ಯೂಟರ್, ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್‌ಗಳು ಆಕ್ರಮಿಸುತ್ತಿವೆ. ಆದರೆ ಜ್ಞಾನದ ಜತೆಗೆ ಜೀವನ ರೂಪಿಸುವ ಶಕ್ತಿ ಪುಸ್ತಕಕ್ಕಿದೆ ಎಂಬುದನ್ನು ಇಂದಿನ ವಿದ್ಯಾರ್ಥಿಗಳು ಮನಗಾಣಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ವಿವಿಧ ಪುಸ್ತಕಗಳ ಕುರಿತು ಮಾಹಿತಿ ನೀಡಲಾಯಿತು. ಶಿಕ್ಷಕರಾದ ಸಂಗೀತಾ ಅಂಕಲಗಿ, ರೇಣುಕಾ ಭಜಂತ್ರಿ, ವೀರೇಶ ಹುಣಶ್ಯಾಳ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.
ಪುಸ್ತಕ ವ್ಯಕ್ತಿತ್ವವನ್ನು ಶ್ರೇಷ್ಠ ಮಟ್ಟಕ್ಕೆ ಒಯ್ಯುವ ಜೀವ ಸೆಲೆ- ಸಂತೋಷ ಬಂಡೆ


