ಸಪ್ತಸಾಗರ ವಾರ್ತೆ,ವಿಜಯಪುರ, ಏ. 25:
ಭಾರತೀಯ ಚಿತ್ರರಂಗದಲ್ಲಿ ಡಾ.ರಾಜ್ ಅವರ ಸಾಧನೆ ನಿಜಕ್ಕೂ ಅನನ್ಯ. ಅವರು ಕನ್ನಡ ಚಿತ್ರರಂಗದ ಭದ್ರ ಬುನಾದಿಯಾಗಿದ್ದು, ಅವರು ಕೇವಲ ನಟನಾಗಿರದೆ, ಕನ್ನಡ ನಾಡು-ನುಡಿಯ ಪ್ರತೀಕವಾಗಿದ್ದಾರೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶುಕ್ರವಾರ ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಡಾ.ರಾಜಕುಮಾರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಡಾ.ರಾಜಕುಮಾರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಡಾ. ರಾಜಕುಮಾರ ಅವರ ವ್ಯಕ್ತಿತ್ವವೇ ಒಂದು ವಿಶ್ವ ವಿದ್ಯಾಲಯವಿದ್ದಂತೆ. ಸಮಾಜ ಬದಲಾವಣೆಗೆ ಪ್ರೇರೇಪಿಸುವಂತಹ ಧೀಮಂತ ವ್ಯಕ್ತಿತ್ವ ಅವರದಾಗಿತ್ತು.
ಜೀವಿತದುದ್ದಕ್ಕೂ ಅಭಿಮಾನಿಗಳನ್ನು ದೇವರೆಂದೇ ನಂಬಿದ ಹಾಗೂ ಸತ್ಯ, ನಿಷ್ಠೆ, ಸಾಮಾಜಿಕ ಬದ್ಧತೆ ಮೇಳೈಸಿಕೊಂಡ ಡಾ.ರಾಜ್ ಅವರ ಜೀವನಾದರ್ಶ ಎಲ್ಲರಿಗೂ ಪ್ರೇರಣೆ ಎಂದು ಹೇಳಿದರು.
ಡಾ. ರಾಜ್ ಅವರ ಜೀವನವು ಕಾಯಕವೇ ಕೈಲಾಸ
ಎಂಬ ತತ್ವಕ್ಕೆ ಬದ್ಧವಾಗಿತ್ತು. ಅವರ ಚಲನಚಿತ್ರಗಳು ಸಮಾಜಕ್ಕೆ ನೈತಿಕತೆ, ಮೌಲ್ಯ ಮತ್ತು ಒಳ್ಳೆಯದನ್ನು ಬೋಧಿಸುವಂತಿದ್ದವು. ಅವರು ಅನುಸರಿಸಿದ ಮೌಲ್ಯಗಳು,
ಬದುಕಿದ ರೀತಿ ನಮಗೆ ಎಂದೆಂದಿಗೂ ಸ್ಫೂರ್ತಿಯ ಸೆಲೆಯಾಗಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ ಮಾತನಾಡಿ, ಸರಳ-ಸಜ್ಜನಿಕೆ ಮತ್ತು ಪ್ರಾಮಾಣಿಕತೆಯ ಸಾಕಾರ ಮೂರ್ತಿಯಾಗಿದ್ದ ಡಾ.ರಾಜ್ ಅವರ ವ್ಯಕ್ತಿತ್ವ ಅನುಪಮವಾದದ್ದು. ಶಿಸ್ತಿನ ಜೀವನಕ್ಕೆ ಹೆಸರಾಗಿದ್ದ ಅವರ ಮೇರು ವ್ಯಕ್ತಿತ್ವ- ವಿನಯಶೀಲತೆಯ ಗುಣಗಳನ್ನು ಪ್ರತಿಯೊಬ್ಬರೂ ಮೈಗೂಢಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕರಾದ ಸಂಗೀತಾ ಅಂಕಲಗಿ, ರೇಣುಕಾ ಭಜಂತ್ರಿ, ವೀರೇಶ ಹುಣಶ್ಯಾಳ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.
ಡಾ. ರಾಜ್ ಅವರ ವ್ಯಕ್ತಿತ್ವ ವಿಶ್ವವಿದ್ಯಾಲಯವಿದ್ದಂತೆ-ಸಂತೋಷ ಬಂಡೆ


