ಸಪ್ತಸಾಗರ ವಾರ್ತೆ,ಸಿಂದಗಿ, ಮೇ. 2: ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮನೋಜ್ಞ ಕಲಾಕೃತಿಗಳ ಮೂಲಕ ಗುರುತಿಸಿಕೊಂಡಿರುವ ಕಲಾವಿದೆ ಶಶಿಕಲಾ ಹೂಗಾರ ಅವರು 2025-26ನೇ ಸಾಲಿನ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ಕಲಾ ಸೇವೆಯೇ ನನ್ನ ಉಸಿರು, ಪ್ರಶಸ್ತಿ ದೊರಕಿದ್ದು ಸಂತೋಷ ತರಿಸಿದೆ, ಇನ್ನಷ್ಟು ಕಲಾ ಸೇವೆ ಮಾಡುವ ಪ್ರೋತ್ಸಾಹ ದೊರಕಿದೆ’ ಎಂದು ಶಶಿಕಲಾ ಹೂಗಾರ ಹರ್ಷ ವ್ಯಕ್ತಪಡಿಸಿದರು.
ಕಲಾಕೃತಿಗಳ ಜೊತೆಗೆ ಸಂಶೋಧನಾ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಅವರು ವಿಜಯಪುರದ ಬಹುಮುಖ ಪ್ರತಿಭೆಯಾಗಿದ್ದಾರೆ.
ಅವಿಭಜಿತ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ 1966ರಲ್ಲಿ ಜನಿಸಿದ ಶಶಿಕಲಾ, ತಮ್ಮಕಲಾ ಜೀವನಕ್ಕಾಗಿ ವಿಜಯಪುರವನ್ನು ಕರ್ಮಭೂಮಿಯಾಗಿ ಆರಿಸಿಕೊಂಡಿದ್ದಾರೆ. ವಿಜಯ ಮಹಾಂತೇಶ ಕಲಾ ಮಂದಿರದಲ್ಲಿ ಬಿ.ಎಫ್.ಎ ಮತ್ತು ಕರ್ನಾಟಕ ವಿಶ್ವವಿದ್ಯಾಲಯ ದಿಂದ ಎಂ.ಎಫ್.ಎ ಪದವಿ ಪಡೆದಿದ್ದಾರೆ.
‘ಕರ್ನಾಟಕ ತೊಗಲು ಗೊಂಬೆ ಚಿತ್ರಕಲೆ ಒಂದು ಅಧ್ಯಯನ*ಮಹಾಪ್ರಬಂಧಕ್ಕಾಗಿ ಕಲಬುರ್ಗಿ ಶರಣಬಸವೇಶ್ವರ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿದ್ದಾರೆ.
ಪ್ರಸ್ತುತ ಸೈನಿಕ ಶಾಲೆಯಲ್ಲಿ ಕಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು ನವದೆಹಲಿ, ಹೈದರಾಬಾದ್, ಪುಣೆ, ಚೆನ್ನೈ, ಔರಂಗಾಬಾದ್, ಮುಂಬಯಿ ಸೇರಿದಂತೆ ಹಲವು ನಗರಗಳಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳನ್ನು ನಡೆಸಿದ್ದಾರೆ. 2019ರಲ್ಲಿ ಮುಂಬೈನಲ್ಲಿ ನಡೆದ ರಾಷ್ಟ್ರೀಯ ಕಲಾ ಮೇಳ ಹಾಗೂ 2020ರ ಅಂತರರಾಷ್ಟ್ರೀಯ ಮಹಿಳಾ ಚಿತ್ರಕಲಾ ಪ್ರದರ್ಶನದಲ್ಲೂ ಭಾಗವಹಿಸಿ-ದ್ದಾರೆ.
79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಆಯ್ಕೆ ಸಮಿತಿಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿರುವ ಅವರು “ಬದುಕಿನ ಬಂಡಿ”, “ಚಿತ್ರಕಲೆಯಲ್ಲಿ ಕಲಾವಿದನ ಪಾತ್ರ” ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.
ಶಶಿಕಲಾ ಹೂಗಾರಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಗೌರವ ಪ್ರಶಸ್ತಿ


