ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 2 :
ವಿಜಯಪುರದಲ್ಲಿ ಮೇ. 8ರಂದು ದರಬಾರ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ರೈತ ಜನಜಾಗೃತಿ ಸಮಾವೇಶ ಸಂಘಟಿಸಲಾಗಿದ್ದು, ಆಲಮಟ್ಟಿಯ ಲಾಲ್ ಬಹೂದ್ದೂರ ಶಾಸ್ತ್ರಿ ಆಣೆಕಟ್ಟನ್ನು 519.60 ಮೀಟರದಿಂದ 524.256 ಮೀಟರ್ ಕ್ಕೆ ಎತ್ತರಿಸಿ ಅದಕ್ಕೆ ಬೇಕಾಗುವ ಸಂಪೂರ್ಣ ಭೂ ಪರಿಹಾರ, ಪುನರ್ ವಸತಿ, ಕಲ್ಪಿಸಿ 5 ಜಿಲ್ಲೆಗಳಿಗೆ ಸಮಗ್ರ ನೀರಾವರಿ ಮಾಡುವುದು ಹಾಗೂ ಮುಳವಾಡ ಸೇರಿದಂತೆ ವಿವಿಧ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ಸೇರಿದಂತೆ ಅನೇಕ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ – ಹಸಿರು ಸೇನೆ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಹೇಳಿದರು.
ಶನಿವಾರ ಈ ಕುರಿತು ವಿವರಣೆ ನೀಡಿದ ಅವರು, ಈ ನಾಡಿನಲ್ಲಿ ರೈತರಿಗೆ ಎಲ್ಲಾ ಕ್ಷೇತ್ರದಲ್ಲಿ ಎಲ್ಲಾ ಪ್ರಕಾರದ ಅನ್ಯಾಯಗಳಾಗುತ್ತಾ ಬಂದಿವೆ. ಅದನ್ನು ತಡೆಯಬೇಕಾದರೆ ರೈತರೆಲ್ಲರೂ ಜಾತ್ಯಾತೀತವಾಗಿ, ಪಕ್ಷಾತೀತವಾಗಿ, ಧರ್ಮಾತೀತವಾಗಿ ಗುರ್ಲಾಪುರದಲ್ಲಿ ನಡೆದ ಹೋರಾಟದ ಮೂಲಕ ಒಗ್ಗಟ್ಟಿನ ಸಂದೇಶ ಸಾರಿರುವ ರೈತರೆಲ್ಲರೂ ಸಮಯ ಸಂದರ್ಭ ಬಂದಾಗಲೆಲ್ಲ ಒಂದಾಗಬೇಕು, ರೈತರು ಎದುರಿಸುತ್ತಿರುವ ಜ್ಷಲಂತ ಸಮಸ್ಯೆಗಳನ್ನು ಈ ಸಮಾವೇಶದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತಂದು ರೈತರ ಶಕ್ತಿ ಎನ್ನೆಂದು ತೋರಿಸಲು ರೈತರೆಲ್ಲರೂ ಒಂದಾಗಿ ಈ ತರಹದ ಸಮಾವೇಶದ ಮೂಲಕ ಒಗ್ಗಟನ್ನು ತೋರಿಸಬೇಕಾಗಿದೆ ಎಂದರು.
ಮುಗಳಖೋಡ – ಜಿಡಗಾದ ಶ್ರೀ ಶಿವಯೋಗಿ ಡಾ. ಮುರಘರಾಜೇಂದ್ರ ಮಹಾಸ್ವಾಮಿಗಳು ಪಾವನ ಸಾನಿಧ್ಯವನ್ನು ವಹಿಸಿಕೊಳ್ಳಲಿದ್ದು, ಸಾನ್ನಿಧ್ಯವನ್ನು ಶಿರಶ್ಯಾಡದ ಅಭಿನವ ಮುರಘೇಂದ್ರ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದು, ಸಂಘಟನೆಯ ರಾಜ್ಯಾಧ್ಯಕ್ಷ ಚುನಪ್ಪಾ ಪೂಜೇರಿ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಅವರ ನೇತೃತ್ವದಲ್ಲಿ ನಾಡಿನ ಸಾವಿರಾರು ರೈತ ಮುಖಂಡರು ಹಾಗೂ ರೈತರೊಡಗೂಡಿ ಈ ಕಾರ್ಯಕ್ರಮ ಜರುಗಲಿದೆ. ಜಿಲ್ಲೆಯ ಎಲ್ಲ ಅಧಿಕಾರಿಗಳು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಸುಮಾರು 15 ಸಾವಿರ ರೈತರೆಲ್ಲರೂ ಸೇರಿಕೊಂಡು 4 ನೇ ಬೃಹತ್ ರೈತ ಜನ ಜಾಗೃತಿ ಸಮಾವೇಶವನ್ನು ನಗರದ ದರಬಾರ ಗ್ರೌಂಡನಲ್ಲಿ ಆಯೋಜನೆ ಮಾಡಿದ್ದು, ಇಲ್ಲಿ ಹಲವಾರು ಕೃಷಿ ತಜ್ಞರು, ವಿಜ್ಞಾನಿಗಳು, ರೈತ ಮುಖಂಡರು ಕೃಷಿ ಕುರಿತು ಚಿಂತನೆ, ಅಭಿಪ್ರಾಯ ಮಂಡನೆ ಮಾಡುತ್ತಿದ್ದು, ಜೊತೆಗೆ ಕೃಷಿಯಲ್ಲಿ ಹಾಗೂ ವಿವಿಧ ಕ್ಷೇತ್ರದಲ್ಲಿ ವಿನೂತನವಾಗಿ ಸಾಧನೆ ಮಾಡಿದ ಸಾಧಕರಿಗೆ ವಿಶೇಷವಾಗಿ ಸನ್ಮಾನಿಸಲಾಗುವುದು ಎಂದರು.
ಆಲಮಟ್ಟಿಯ ನೀರಾವರಿ ಯೋಜನೆಗೆ ಮುಳಗಡೆಗೆ ಗುರುತಿಸಿರುವ ಜಮೀನಿಗಿಂತ ಹೆಚ್ಚು ಭೂಮಿಯನ್ನು ಕಳೆದುಕೊಂಡ ರೈತರಿಗೆ ಇಲ್ಲಿಯವರೆಗೆ ಪರಿಹಾರ ನೀಡಿಲ್ಲ, ಕೂಡಲೇ ಮಂಜೂರ ಮಾಡುವುದು, ಜಿಲ್ಲೆಯಲ್ಲಿ ಅತೀಹೆಚ್ಚು ಬೆಳೆಯುವ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಬೆಂಬಲ ಬೆಲೆಯೊಂದಿಗೆ ಖರೀಧಿ, ಮೌಲ್ಯವರ್ಧನೆ ಹಾಗೂ ಯೋಗ್ಯ ಮಾರುಕಟ್ಟೆ ಕಲ್ಪಿಸಬೇಕು. ಅದಕ್ಕೆ ಅವಶ್ಯಕ ಯೋಜನೆ ರೂಪಿಸುವುದು, ವಿದ್ಯುತ್ ಅಕ್ರಮ ಸಕ್ರಮ ಯೋಜನೆ ಮುಂದುವರೆಸಬೇಕು. ವಿದ್ಯುತ್ ಇಲಾಖೆಯನ್ನು ಖಾಸಗಿ ಮಾಡುತ್ತಿರುವುದನ್ನ ಕೈಬಿಡಬೇಕು, ರೈತರಿಗೆ ಉಚಿತವಾಗಿ (ಕಡಿಮೆ ಬೆಲೆ) ಟಿ.ಸಿ ದೊರಕಿಸುವುದು, ರೈತರಿಗೆ ಹಗಲು 12 ಘಂಟೆ ತ್ರೀಫೆಸ್ ಹಾಗೂ ರಾತ್ರಿ ಸಿಂಗಲ್ ಫೆಸ್ ಉಚಿತ ವಿದ್ಯುತ್ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸರ್ಕಾರದ ಮುಂದೆ ಇರಿಸಿ ಸಮಾವೇಶದಲ್ಲಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಸಗರ ತಿಳಿಸಿದರು.
ಸಂಘದ ರಾಜ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ, ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ, ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮೇ 8ರಂದು ಬೃಹತ್ ರೈತ ಜನಜಾಗೃತಿ ಸಮಾವೇಶ


