ರಾಜ್ಯದಲ್ಲಿ ಹೋರಾಟಕ್ಕೆ ಇನ್ನೊಂದು ಹೆಸರು ಯಡಿಯೂರಪ್ಪ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 6:
ರಾಜ್ಯದಲ್ಲಿ ಹೋರಾಟಕ್ಕೆ ಇನ್ನೊಂದು ಹೆಸರು ಯಡಿಯೂರಪ್ಪ ಎಂದು ಜಮಖಂಡಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರು ಮಾತನಾಡಿದರು.
ಇಲ್ಲಿನ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿದಂಥ ಹುಟ್ಟು ಹೋರಾಟಗಾರ ಬಿ.ಎಸ್.ಯಡಿಯೂರಪ್ಪನವರ 50 ವರ್ಷದ ತಪಸ್ಸು ಹಾಗೂ ಪರಿಶ್ರಮಕ್ಕಾಗಿ ಚಿತ್ರದುರ್ಗದಲ್ಲಿ ಮೇ 9ರಂದು ನಡೆಯುವ ಅಭಿನಂದನಾ ಸಮಾರಂಭ ಶ್ಲಾಘನೀಯ. ಅವರು ನಮ್ಮಂಥ ನೂರಾರು ಕಾರ್ಯಕರ್ತರನ್ನು ಬೆಳೆಸಿದ್ದು. ಬಿಜೆಪಿ ಒಂದು ರಾಜಕೀಯ ಶಕ್ತಿಯಾಗಿ ಬೆಳೆಯಲು ಅವರು ಕಾರಣೀಭೂತರೆಂದು ಅವರು ಬಣ್ಣಿಸಿದರು.
ಅಖಂಡ ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಜನಸಂಘದ ಕಾಲದಿಂದಲೂ ಅಸ್ತಿತ್ವವಿಟ್ಟುಕೊಂಡು ಹೋರಾಟ ಮಾಡುತ್ತಿದ್ದ ಹಿರಿಯರ ತಂಡ ಒಂದಿತ್ತು. ಅದರಲ್ಲಿ ಸಂಸ್ಥಾಪಕ ಸದಸ್ಯರಾದ ಡಾ. ಮಹೀಂದ್ರಕರ, ಜ್ಯೋತಿ ಪ್ರಕಾಶ ಸಾಳುಂಕೆ, ಗಣಪತರಾವ ಕಾಂಬಳೆ, ಮಾಲಗಾರ ಮಾಸ್ತರ, ಗಣಪತರಾವ ಕಾಂಬಳೆ, ಗುಳೇದಗುಡ್ಡದ ರಾಠಿ ಮುಂತಾದ ಹಿರಿಯರ ತಂಡ ಒಂದಿತ್ತು. ಯಡಿಯೂರಪ್ಪನವರ ನೇತೃತ್ವದಲ್ಲಿ ಅಖಂಡ ಜಿಲ್ಲೆಯಲ್ಲಿ ಬಸನಗೌಡ ಪಾಟೀಲ, ಪಿ.ಹೆಚ್.ಪೂಜಾರ, ಭಾಂಡಗೆ, ಸಿದ್ಧಲಿಂಗ ಹಂಜಗಿ, ಸಿಂದಗಿಯ ಎಮ್.ಎಸ್.ಮಠ, ಬೀಳಗಿಯ ಡಾ. ದೇಶಪಾಂಡೆ, ಮುಧೋಳದ ಟಂಕಸಾಲಿ ಬಂಧುಗಳು ಮುಂತಾದ ನೂರಾರು ನಾಯಕರು ಪಕ್ಷಕ್ಕಾಗಿ ತಮ್ಮ ಸಮಯ ಮೀಸಲಿಟ್ಟಿದ್ದರು ಎಂಬುದನ್ನು ಸ್ಮರಿಸಬೇಕಾಗುತ್ತದೆ ಎಂದರು.
ಅಖಂಡ ವಿಜಯಪುರ ಜಿಲ್ಲೆಗೂ ಯಡಿಯೂರಪ್ಪನವರಿಗೂ ಒಂದು ಅವಿನಾಭಾವ ಸಂಬಂಧವಿದೆ. ರೈತರ ಕಷ್ಟಗಳನ್ನು ಅರ್ಥಮಾಡಿಕೊಂಡು ಹಳ್ಳಿ ಹಳ್ಳಿಗೆ ಪ್ರವಾಸ ಮಾಡಿ ರೈತರನ್ನು ಬಡಿದೆಬ್ಬಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ರೈತರ ಸಾಲ ಮನ್ನಾಕ್ಕಾಗಿ ಆಗ್ರಹಿಸಿ ಬಾಗೇವಾಡಿ, ಬನವಾಸಿ ಹಾಗೂ ಬೀದರಗಳಿಂದ 3 ಬಾರಿ ರೈತ ಸಾಲ ಮನ್ನಾಕ್ಕಾಗಿ ಅವರು ಮಾಡಿದ ರೈತಯಾತ್ರೆ ಮರೆಯಲಿಕ್ಕಾಗದು.
ಪ್ರತಿಯೊಬ್ಬರಿಗೆ ರಾಜಕೀಯದಲ್ಲಿ ಒಬ್ಬ King Maker (ಗುರು) ಎಂದು ಇರುತ್ತಾರೆ. ಆದರೆ ನನಗೆ ಇಬ್ಬರು King Maker ಗಳು. ಒಬ್ಬರು ಯಡಿಯೂರಪ್ಪ ಇನ್ನೊಬ್ಬರು ಅನಂತಕುಮಾರ್. 1987 ರಲ್ಲಿ ಹೆಗಡೆರವರ ಮಂಡಲ ಪಂಚಾಯತ ಮತ್ತು ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ನಾನು ಜಮಖಂಡಿ ತಾಲೂಕಿನ ಬಿದರ ಕೇತ್ರದಿಂದ ಸ್ಪರ್ಧಿಸಿ ಕೇವಲ 164 ಮತಗಳ ಅಂತರದಿಂದ ಸೋತಾಗ ಶಾಸಕರಾಗಿದ್ದ ಯಡಿಯೂರಪ್ಪನವರು ನನ್ನನ್ನು ಭೇಟಿಯಾಗಿ ಹುರಿದುಂಬಿಸಲು ವಿಜಯಪುರ ಮೂಲಕ ಜಮಖಂಡಿಗೆ ಬಂದು ನನ್ನನ್ನು ಸಂಪರ್ಕಿಸಿ ಮಂಡಲ ಪಂಚಾಯತಕ್ಕೆ ಸಂಬಂಧಿಸಿದ ನ್ಯಾಯಾಲಯದಲ್ಲಿ ತಡೆಯಾಜ್ಞೆಯಾಗಿದ್ದ ಆದೇಶವನ್ನು ರದ್ದುಪಡಿಸಿ ನನ್ನನ್ನು ತೊದಲಬಾಗಿ ಮಂಡಲ ಪ್ರಧಾನ ಮಾಡಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ. ಹಂತ ಹಂತವಾಗಿ ನನ್ನನ್ನು ಬೆಳೆಸಿ ಶಾಸಕರನ್ನಾಗಿ ಮಾಡಿದ್ದು ಅವರೇ ಎಂದು ಅಭಿಮಾನದಿಂದ ಹೇಳುತ್ತೇನೆ ಎಂದರು.
ಸಂಘಟನೆಗಾಗಿ ಅವರು ನಮ್ಮ ಅಖಂಡ ಜಿಲ್ಲೆಯಲ್ಲಿ ಶಿವಮೊಗ್ಗಕ್ಕಿಂತ ಹೆಚ್ಚು ಪ್ರವಾಸ ಮಾಡಿ 2008ರ ವಿಧಾನಸಭೆ ಚುನಾವಣೆಯಲ್ಲಿ 15 ರಲ್ಲಿ 12 ಸ್ಥಾನದಲ್ಲಿ ನಾವೇ ಗೆದ್ದಿರುವುದು. ಅದಕ್ಕೆ ಕಾರಣೀಕರ್ತರು ಯಡಿಯೂರಪ್ಪ ಮತ್ತು ಅನಂತಕುಮಾರ. ಯಡಿಯೂರಪ್ಪನವರು ರೈತರ ಬಗ್ಗೆ ವಿಶೇಷ ಬಜೆಟ್ ಮಂಡಿಸಿ ಒಂದು ದಾಖಲೆ ನಿರ್ಮಿಸಿದರು. ಕಡು ಬಡವರು, ಹೆಣ್ಣುಮಕ್ಕಳು ಹಾಗೂ ಸಮಾಜದ ಕಟ್ಟಕಡೆಯ ಬಡವರಿಗೆ ಅನೇಕ ಯೋಜನೆಗಳನ್ನು ತಂದವರು.
ಅವರ ಕಠಿಣ ಪರಿಶ್ರಮ, ನಿರಂತರ ಪ್ರವಾಸ, ಅನ್ಯಾಯದ ವಿರುದ್ಧ ಸದನದ ಒಳಗೆ ಹೊರಗೆ ಮಾಡಿದ ಹೋರಾಟ ನಮ್ಮೆಲ್ಲರಿಗೆ ಒಂದು ಆದರ್ಶ.
ಇಂಥ ಅದ್ಭುತ ಹಾಗೂ ನೇರ ನುಡಿಯ ನಾಯಕನಿಗೆ ಅಖಂಡ ಜಿಲ್ಲೆಯ ಪರವಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿಯ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ , ಮಲ್ಲು ಕಲಾದಗಿ, ವಿಜಯ ಜೋಶಿ ಉಪಸ್ಥಿತರಿದ್ದರು.

Share this