ಸಪ್ತಸಾಗರ ವಾರ್ತೆ,ವಿಜಯಪುರ, ಮೇ 8 :
ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಳದಿನ್ನಿ ಗ್ರಾಮದ ಸಮೀಪ ಬಸಿಗಾಲುವೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮಸ್ಟರ್ ರೂಲ್ ಹಾಗೂ ಫೋಟೊ ಆಧಾರಿತ ಹಾಜರಾತಿ ಪರಿಶೀಲಿಸಿದರು.
ಕೂಲಿಕಾರರೊಂದಿಗೆ ಸಂವಾದ ನಡೆಸಿದ ಅವರು, ಈ ಯೋಜನೆಯಡಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಹೂಳೆತ್ತುವ ಕಾಯಕದಲ್ಲಿ ಮಗ್ನರಾಗಿದ್ದ ಕೂಲಿಕಾರರು ತಮ್ಮ ಕೆಲಸದ ನಡುವೆಯೇ ಕೇಕ್ ಕತ್ತರಿಸಿ ಕಾರ್ಮಿಕ ದಿನವನ್ನು ಸಂಭ್ರಮದಿಂದ ಆಚರಿಸಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಬಗ್ಗೆ ಪಿಡಿಒ ಹಾಗೂ ತಾಂತ್ರಿಕ ಇಂಜಿನಿಯರ್ ಗಳಿಂದ ಮಾಹಿತಿ ಪಡೆದ ಅವರು, ಬದು ನಿರ್ಮಾಣ, ಕೃಷಿ ಹೊಂಡಗಳಂಥ ವೈಯಕ್ತಿಕ ಕಾಮಗಾರಿಗಳ ಜತೆಗೆ ಸಾಮೂಹಿಕ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ತಿಳಿಸಿದರು.
ಬಳಿಕ ಮಾತನಾಡಿದ ಅವರು, ಕೂಲಿಕಾರರ ಹಾಜರಾತಿಯನ್ನು ಎನ್.ಎಂ.ಎಂ.ಎಸ್ ಆ್ಯಪ್ ಮುಖಾಂತರವೇ ಎರಡು ಬಾರಿ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ಕೆಲಸಕ್ಕೆ ಬೇಗನೆ ಬರಬೇಕು. ನಿಮಗೆ ನೀಡಿರುವ ಅಳತೆ ಪ್ರಕಾರ ಕೆಲಸ ಮಾಡಬೇಕು ಎಂದು ಕೂಲಿಕಾರರಿಗೆ ಸೂಚಿಸಿದರು.
ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾಕಷ್ಟು ಕೂಲಿಕಾರರು ಕೆಲಸಕ್ಕೆ ಬರುವವರಿಗೆ ಎನ್‍ಎಂಆರ್ ತೆಗೆದು ಉದ್ಯೋಗ ನೀಡುವಂತೆ ಪಿಡಿಒ ಅವರಿಗೆ ಸೂಚಿಸಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರಂತರವಾಗಿ ಕೆಲಸ ಒದಗಿಸಲಾಗುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೂಲಿ ಕಾರ್ಮಿಕರಿಗೆ ತಿಳಿಸಿದರು.
ಈ ವೇಳೆ ಜಿಲ್ಲಾ ಪಂಚಾಯತಿ ಯೋಜನಾಧಿಕಾರಿ ಅರುಣಕುಮಾರ್ ದಳವಾಯಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ, ಪಿಡಿಒ ಜಿ.ಬಿ.ಕಲ್ಯಾಣಿ, ಕಾರ್ಯದರ್ಶಿ ರಮೇಶ ಉಪ್ಪನಸಿ, ತಾಲೂಕು ಐಇಸಿ ಸಂಯೋಜಕ ದಸ್ತಗೀರ ಗುಡಿಹಾಳ, ತಾಂತ್ರಿಕ ಸಹಾಯಕರಾದ ದಿಗಂಬರೇಶ ಪಾಟೀಲ, ಮಲಕಪ್ಪ ಕೊಳಮಲಿ, ಬಿಎಫ್ ಟಿ ವಿಠ್ಠಲ ಹರಳಯ್ಯ, ಬಿಲ್ ಕಲೆಕ್ಟರ್ ತಿಮ್ಮಣ್ಣ ವಡ್ಡರ್, ಡಿಇಒ ಜೈನಾಬಿ ಲಷ್ಕರಿ ಹಾಗೂ ಕೂಲಿಕಾರರು ಹಾಜರಿದ್ದರು.
ನರೇಗಾ ಕಾಮಗಾರಿ ಸ್ಥಳಕ್ಕೆ ಪ್ರಕಾಶ ವಡ್ಡರ ಭೇಟಿ


