ಜೀವನದ ಕಷ್ಟಗಳಿಗೆ ಬೆನ್ನೆಲುಬಾದ ತಾಯಿ ಅಕ್ಷಯ ಪಾತ್ರೆ ಇದ್ದಂತೆ-ಸಂತೋಷ ಬಂಡೆ

ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 10:
ತಾಯಿ ಮಕ್ಕಳಿಗೆ ಒಂದು ನೈತಿಕ ಶಕ್ತಿ. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ದಾರಿ ತಪ್ಪದಂತೆ, ಸಂಸ್ಕೃತಿ ಮತ್ತು ಆಧುನಿಕತೆಯ ನಡುವೆ ಸಮತೋಲನ ಕಾಪಾಡಲು ತಾಯಿ ಪಾತ್ರ ಅನನ್ಯವಾಗಿದ್ದು, ಅವಳು ಜೀವನದ ಕಷ್ಟಗಳಲ್ಲಿ ಬೆನ್ನೆಲುಬಾಗಿ ನಿಲ್ಲುವ ಅಕ್ಷಯ ಪಾತ್ರೆ ಇದ್ದಂತೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ರವಿವಾರ ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವ ತಾಯಂದಿರ ದಿನದ ಕಾರ್ಯಕ್ರಮದಲ್ಲಿ ‘ಆಧುನಿಕ ಜಗತ್ತಿನಲ್ಲಿ ತಾಯಿಯ ಪಾತ್ರ’ ಕುರಿತು ಅವರು ಮಾತನಾಡಿದರು.
ತಾಯಿ ಎಂಬ ಪದದಲ್ಲಿ ಇಡೀ ವಿಶ್ವವೇ ಅಡಗಿದೆ. ತಾಯಿ, ಜಗತ್ತಿನಲ್ಲಿ ದೇವರ ಮತ್ತೊಂದು ರೂಪ, ನಮ್ಮ ದುಃಖ ತಗೊಂಡು ಪ್ರೀತಿ ಹಂಚುವವಳೇ ತಾಯಿ. ಸಮಾಜ ಮತ್ತು ಕುಟುಂಬದಲ್ಲಿ ತಾಯಿ ಬಹಳ ಮುಖ್ಯ. ಮಗುವಿನ ಸಮತೋಲಿತ ವ್ಯಕ್ತಿತ್ವ ನಿರ್ಮಾಣದಲ್ಲಿ ತಾಯಿ ಪಾತ್ರ ಬಹಳ ಮುಖ್ಯ ಎಂದರು.
ಇಂಡಿ ಎಸ್ ಬಿ ಐ ಬ್ಯಾಂಕ್ ಫೀಲ್ಡ್ ಆಫೀಸರ್ ಪ್ರಕಾಶ ಗುಜ್ಜಲವರ ಮಾತನಾಡಿ, ತಾಯಿಯು ಪ್ರೀತಿ, ತ್ಯಾಗ, ಕಾಳಜಿ ಮತ್ತು ಮಾರ್ಗದರ್ಶನದ ಸಾಕಾರಮೂರ್ತಿ. ಅವಳು ಮಗುವಿನ ಮೊದಲ ಗುರು, ಸ್ನೇಹಿತೆ, ದೇವತೆಯಾಗಿ ಜೀವನಪೂರ್ತಿ ಬೆನ್ನೆಲುಬಾಗಿದ್ದಾಳೆ. ತಾಯಿಯು ಮಗುವಿನ ಭಾವನಾತ್ಮಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕುತ್ತಾಳೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿ ಮಾತನಾಡಿ,’ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎನ್ನುವ ಮಾತಿದೆ. ಅಂದರೆ ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು ಎಂದು. ತಾಯಿಯ ತ್ಯಾಗ, ಆಕೆಯ ಪರಿಶುದ್ಧ, ನಿಶ್ಕಲ್ಮಶ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯ. ತಾಯಿ ಮಗುವಿನ ವ್ಯಕ್ತಿತ್ವ ರೂಪಿಸುವ ಅಡಿಪಾಯ ಎಂದು ಹೇಳಿದರು.
ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕ್ಷಕರಾದ ರೇಣುಕಾ ಭಜಂತ್ರಿ,ವೀರೇಶ ಹುಣಶ್ಯಾಳ ಹಾಗೂ ಪಾಲಕರು, ಮಕ್ಕಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳು ತಾಯಿಯ ಮಹತ್ವ ಕುರಿತು ಬಿತ್ತಿ ಚಿತ್ರ ಪ್ರದರ್ಶಿಸಿದರು.

Share this