ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 14:
ನಗರದ ಜ್ಯುವೆಲರಿ ಶಾಪ್ ನಲ್ಲಿ ಗ್ಯಾಸ್ ಸಿಲೆಂಡರ್ ಬ್ಲಾಸ್ಟ್ ಆಗಿ ಇಬ್ಬರು ಗಾಯಗೊಂಡಿರುವ ಘಟನೆ
ಸರಾಫ ಬಜಾರ್ ನಲ್ಲಿ ನಡೆದಿದೆ.
ಬಂಗಾಲಿ ಮೂಲದ ಇಬ್ಬರು ಅಕ್ಕಸಾಲಿಗರಾದ ಬೀಜು (38), ನಾನಾ ಹಕ್ಕಿಂ (40) ಗಾಯಗೊಂಡಿದ್ದಾರೆ.
ಬೆಳಿಗ್ಗೆ ಚಿನ್ನದ ಕುಲುಮೆ ಕೆಲಸ ಮಾಡುವಾಗ ಬ್ಲಾಸ್ಟ್ ಆಗಿದೆ. ಈ ವೇಳೆ
ಇಬ್ಬರು ಅಕ್ಕಸಾಲಿಗರಿಗೆ ಸುಟ್ಟ ಗಾಯಗಳಾಗಿವೆ. ಆಟೋ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಗ್ಯಾಸ್ ಸೋರಿಕೆ ಸಿಲಿಂಡರ್ ಸ್ಫೋಟಕ್ಕೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.
ಕೆಲಸ ಆರಂಭಿಸುತ್ತಿದ್ದಂತೆ ಚಿನ್ನದ ಅಂಗಡಿಯಲ್ಲಿ ಗ್ಯಾಸ್ ಸ್ಪೋಟ ನಡೆದಿದ್ದು,
ಸ್ಪೋಟದ ತೀವ್ರತೆಗೆ ಚಿನ್ನದಂಗಡಿ ಶೆಟರ್ ಬಾಗಿಲು ಒಡೆದು ನುಚ್ಚು ನೂರಾಗಿದೆ.
ಸದ್ಯಕ್ಕೆ ಯಾವುದೇ ಪ್ರಾಣಹಾನಿ ಇಲ್ಲ.
ಸ್ಪೋಟ ಸದ್ದು ಕೇಳುತ್ತಿದ್ದಂತೆಯೇ ಅಕ್ಕ ಪಕ್ಕದ ಅಂಗಡಿಕಾರರು ಬೆಚ್ಚಿಬಿದ್ದರು. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಜನ ಜಾತ್ರೆ ಸೇರಿತು.
ಸುದ್ದಿ ತಿಳಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.
ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಗಾಂಧಿ ಚೌಕ ಸಿಪಿಐ ಪ್ರದೀಪ್ ತಳಕೇರಿ ಮತ್ತಿತರರು ಇದ್ದರು.
ಸಿಲಿಂಡರ್ ಸ್ಪೋಟ: ಇಬ್ಬರಿಗೆ ಗಾಯ


