ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ: ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.‌ ಆನಂದ‌ ಸೂಚನೆ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ 14:
ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಸಮಸ್ಯೆ ಉಲ್ಬಣಿಸಿದರೆ ಆಯಾ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಯನ್ನು ತಕ್ಷಣ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ‌ ಕೆ. ಅವರು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ‌ ಕಚೇರಿ ಸಭಾಂಗಣದಲ್ಲಿ‌ ಗುರುವಾರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ಸೂಚನೆ ನೀಡಿದರು.
ಸಾಲಿಡ್ ವೇಸ್ಟ್ ಮ್ಯಾನೇಜ್ ಮೆಂಟ್ ಏಪ್ರಿಲ್ ಒಂದರಿಂದ ಜಾರಿಗೆ ಬಂದಿದೆ.‌ ಇದರಡಿ ನಾಲ್ಕು ರೀತಿಯ ವಿಂಗಡಣೆ ಮಾಡಿ ವಿಲೇವಾರಿ ಮಾಡಬೇಕಾಗುತ್ತದೆ. ಬಲ್ಕ್ ಜನರೇಟ್ ಲೋಕಲ್ ಬಾಡಿ ಗುರುತಿಸಿ ಅವುಗಳನ್ನು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.‌ ವಾರ್ಡ್ ವಾರು ಒಳಗೊಳ್ಳುವಂತೆ ಜಿರೋ ವಾರ್ಡ್ ಕಸ ಮುಕ್ತಗೊಳಿಸುವ ಯೋಜನೆಯಾಗಿದೆ ಎಂದರು.
ನೂರು ಜನರು ಭಾಗವಹಿಸುವ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿ‌ ಇದ್ದು, ಡಿಸಿ, ಸಿಇಒ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಎನ್ ಜಿಒ ಸೇರಿದಂತೆ ಸಮಿತಿ‌‌ ಇರುತ್ತದೆ ಎಂದರು.‌

ಕಸ ಕಂಡರೆ ಫೋಟೋ‌ ಕಳಿಸಿ

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಆರಂಭಗೊಂಡ ಕಸ ಕಂಡರೆ ಫೋಟೋ ಕಳಿಸಿ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಇನ್ನೂ ವ್ಯಾಪಕವಾಗಿ ಈ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಿ, ಸ್ವಚ್ಛ ನಗರವನ್ನಾಗಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇಪ್ಪತ್ನಾಲ್ಕು ಗಂಟೆಯೊಳಗೆ ಕಸ ಕ್ಲೀಯರ್ ಮಾಡಬೇಕು. ಕೆಲ ಕಡೆ ಆಗಿದೆ.‌ ಕೆಲವು ಕಡೆ ಆಗುತ್ತಿಲ್ಲ.‌ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಮೇಲ್ವಿಚಾರಣೆ ಮಾಡಬೇಕು. ದೂರು ಬಂದ‌ ತಕ್ಷಣ ನಿಮ್ಮ ಕೆಳಹಂತದ ಅಧಿಕಾರಿಗಳನ್ನು ನೇಮಿಸಿ, ಬ್ಲಾಕ್ ಸ್ಫಾಟ್ ಇದ್ದಲ್ಲಿ ಒಂದೆ ಕಡೆ ಕಸ ಹಾಕುವುದನ್ನು ನಿಗಾವಹಿಸಿ ಅಲ್ಲಿ ಮುಂಜಾಗ್ರತಾ ಕ್ರ‌ಮ ವಹಿಸಬೇಕು ಎಂದರು.
ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಂತೆ, ಜಾತ್ರೆಗಳಲ್ಲಿ ಸಂಗ್ರಹವಾಗುವ ಕಸವನ್ನು ತುರ್ತಾಗಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಈಗ ವಿವಿಧ ತಜ್ಞರ ಸಮಿತಿ ರಚನೆಯಾಗಿದ್ದು, ಜಿಲ್ಲೆಯಲ್ಲಿ ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಿಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ
ಈ ಕುರಿತು ಸಾರ್ವಜನಿಕರಿಗೆ ಸಾಕಷ್ಟು ಜಾಗೃತಿ ಮೂಡಿಸಬೇಕು. ಆದಾಗ್ಯೂ ತಪ್ಪಿದರೆ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಬೇಕು ಎಂದು ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಯಾವುದೇ ದೂರುಗಳು ಬಾರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಕುಡಿಯುವ ನೀರು ಹಾಗೂ ವೈಜ್ಞಾನಿಕ ಕಸ ವಿಲೇವಾರಿಗೆ ಪ್ರಾಥಮಿಕ ಆದ್ಯತೆ ನೀಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಸ ವಿಲೇವಾರಿ ನಿರ್ಲಕ್ಷ್ಯವಹಿಸದೇ ನಿಗಾವಹಿಸಬೇಕು ಎಂದು‌ ಜಿಲ್ಲಾಧಿಕಾರಿ ತಿಳಿಸಿದರು.‌
ಎಂಆರ್ ಎಫ್ ಘಟಕ ಯೋಜನೆ ಈಗಿನಿಂದಲೇ ಮಾಡಿಕೊಳ್ಳಬೇಕು.‌ ಅದಕ್ಕೆಂದೇ ಈಗಿನಿಂದ ಕ್ರಿಯಾ ಯೋಜನೆ‌ ರೂಪಿಸಿಕೊಳ್ಳಬೇಕು ಎಂದರು. ಎಸ್ ಟಿಪಿ ಜಾಗೆಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸಿಕೊಂಡು ಕಾರ್ಯ ಪ್ರವೃತ್ತರಾಗಲು ಸೂಚಿಸಿದರು.‌
ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ‌ ಅಮೃತ ಮಿತ್ರ ಹಾಗೂ ಅಮೃತ 2.0 ಉದ್ಯಾನವನ, ಜಲಮೂಲಗಳ ಪುನಶ್ಚೇತನ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿ ಸೂಚಿಸಿದರು.
ಬೀದಿ ನಾಯಿಗಳ ಹಾವಳಿ
ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ‌ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಲಸಿಕೆ ಹಾಕಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.‌
ಸರ್ವೋಚ್ಚ ನ್ಯಾಯಾಲಯ ಆದೇಶಿಸಿದಂತೆ ಸಾರ್ವಜನಿಕ ಸ್ಥಳ, ಸರ್ಕಾರಿ ಕಚೇರಿ, ಆಸ್ಪತ್ರೆ, ಶಾಲಾ-ಕಾಲೇಜು, ಬಸ್ ನಿಲ್ದಾಣ ಹಾಗೂ ಇನ್ನಿತರ ಜನನಿಬಿಡ ಪ್ರದೇಶಗಳಲ್ಲಿರುವ ಬೀದಿ ನಾಯಿಗಳನ್ನು ಗುರುತಿಸಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಬೇಕು. ತಾತ್ಕಾಲಿಕ ಪರಿಹಾರವಾಗಿ ಆಶ್ರಯ ತಾಣಕ್ಕೆ ಕಳುಹಿಸಬೇಕು. ಜಿಲ್ಲೆಯ ನಗರ, ಗ್ರಾಮ ಪಂಚಾಯತಿಗಳಲ್ಲಿ ಯೋಜನೆ ರೂಪಿಸಿ, ಬೀದಿ ನಾಯಿಗಳ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಬೀದಿ ನಾಯಿಗಳಿಗೆ ಲಸಿಕೆ ಹಾಕಿಸಬೇಕು. ಎಬಿಸಿ ಎಲ್ಲಾ ಕಡೆ ಪೂರ್ಣಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.‌
ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಆದ್ಯತೆಯ ಮೇರೆಗೆ ಕೆಲಸ ಮಾಡಬೇಕು. ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಎಲ್ಲೂ ಕೂಡ ಘಟನೆ ನಡೆಯಬಾರದು ಎಂದರು.‌
ಬುರಣಾಪೂರ ಡಾಗ್ ಶೆಲ್ಟರ್ ಬೇಗ ಆರಂಭಿಸಲು‌ ಕ್ರಮವಹಿಸಬೇಕು.‌ ಜೊತೆಗೆ ಪ್ರತಿ ಸ್ಥಳೀಯ ಸಂಸ್ಥೆಗಳಲ್ಲೂ‌ ಡಾಗ್ ಶೆಲ್ಟರ್ ಕಡ್ಡಾಯವಾಗಿ ಮಾಡಬೇಕು. ಲಸಿಕೆ ಸಾಕಷ್ಟು ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.‌
ಈಗಾಗಲೇ ಪಶು ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಿದ್ದು ಮಹಾನಗರ ಪಾಲಿಕೆ, ಮುಖ್ಯಾಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಪಶು ಆಸ್ಪತ್ರೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮ ವಹಿಸಬೇಕು.
ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ಇದನ್ನು ಎಲ್ಲ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಪಾಲಿಸಿ, ಮುಂದಿನ ಸಭೆಯಲ್ಲಿ ಎಲ್ಲ ವಿವರಗಳ ಪೂರ್ಣ ಮಾಹಿತಿ ಒದಗಿಸಬೇಕು ಎಂದು ಅವರು ಹೇಳಿದರು.
ಪಿಎಂ ಸ್ವನಿಧಿ ಯೋಜನೆಯಡಿ ಪ್ರಗತಿ ಸಾಧಿಸಬೇಕು. ಯಾವುದೇ ಪ್ರಸ್ತಾವನೆಗಳನ್ನು ಬಾಕಿ ಉಳಿಸಿಕೊಳ್ಳಬಾರದು. ಬ್ಯಾಂಕ್‌ ಕೂಡಾ ಅಂತಹ ಪ್ರಸ್ತಾವನೆ ಬಾಕಿ ಉಳಿಸಿಕೊಳ್ಳಬಾರದು ಜಿಲ್ಲಾಧಿಕಾರಿಗಳು ಹೇಳಿದರು. ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲ ಒದಗಿಸುವ ಈ ಯೋಜನೆಗೆ ಅರ್ಹರು ಪಡೆದುಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಲು ಇದು ಮಹತ್ವದ ಯೋಜನೆಯಾಗಿದೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಗತಿ ಸಾಧಿಸಬೇಕು. ಅರ್ಹರ ಅರ್ಜಿಗಳನ್ನು ವಿಳಂಬ ಮಾಡದೇ ಅರ್ಜಿ ತಿರಸ್ಕರಿಸದೇ ಅವರಿಗೆ ಅನುಕೂಲ ಮಾಡಿಕೊಡಬೇಕು. ಅರ್ಜಿ ಸಲ್ಲಿಸಿದವರಿಗೆ ವಿನಾಕಾರಣ ತೊಂದರೆಯಾಗದಂತೆ ಮಾನವೀಯ ದೃಷ್ಟಿಯಿಂದ ಕಾರ್ಯ ನಿರ್ವಹಿಸಿ ಎಂದ ಅವರು, ಜನರನ್ನು ಅಲೆದಾಡಿಸಬಾರದು. ಅವರು ವ್ಯಾಪಾರವನ್ನೇ ಅವಲಂಬಿಸಿರುತ್ತಾರೆ. ಅವರನ್ನು ಅಲೆದಾಡಿಸದೇ ಅನುಕೂಲ ಮಾಡಿಕೊಡಬೇಕು ಎಂದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಅರ್ಜಿ ಬಾಕಿ ಉಳಿಸಿಕೊಂಡ ಬ್ಯಾಂಕಿನವರೊಂದಿಗೆ ಸಭೆ ನಡೆಸಿ ಮನವರಿಕೆ ಮಾಡಿಕೊಡಬೇಕು ಎಂದರು. ಇನ್ಸೂರೆನ್ಸ್ ಯೋಜನೆಗೊಳಪಡಿಸಬೇಕು. ಪಿಎಂ ಸ್ವನಿಧಿ ಫಲಾನುಭವಿಗಳನ್ನು ಈ ಇನ್ಸೂರೆನ್ಸ್‌ ಯೋಜನೆಗೆ ಒಳಪಡಿಸಬೇಕು ಎಂದರು. ಪಿಎಂ ಶ್ರಮಯೋಗಿ ಫಾಲೋಅಪ್ ಮಾಡಿ. ಕ್ರೆಡಿಟ್ ಕಾರ್ಡ್ ಐವತ್ತು ಸಾವಿರ ತೆಗೆದುಕೊಂಡು ನಿಗದಿತ ಅವಧಿಯಲ್ಲಿ ಪಾವತಿಸಿದವರಿಗೆ ಕ್ರೆಡಿಟ್ ಕಾರ್ಡ್ ನೀಡಬೇಕು ಎಂದರು.
ಪಿಎಂ ಸ್ವನಿಧಿ ಯೋಜನೆಗೆ ಕೊಟ್ಟಿರುವ ಟಾರ್ಗೆಟ್ ಮುಟ್ಟಬೇಕು. ಜಾಸ್ತಿ ಜನರು ಅರ್ಹ ಫಲಾನುಭವಿಗಳನ್ನು ಗುರುತಿಸಿ ಮಾಹಿತಿ ನೀಡಬೇಕು. ಸಬ್ಸಿಡಿ ಎಲ್ಲ ಯೋಜನೆಗಳ ಬಾಕಿ ಅರ್ಜಿ ಉಳಿಕೆಗೆ ನಿರಂತರ ಸಭೆ ನಡೆಸಿ ಸರ್ಕಾರದ ಯೋಜನೆಗಳು ಅರ್ಹರನ್ನು ತಲುಪಿಸುವ ನಿಟ್ಟಿನಲ್ಲಿ ಬಾಕಿ ಅರ್ಜಿ ವಿಲೇವಾರಿಗೆ ಕ್ರಮವಹಿಸಿ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಅವರಿಗೆ ಸೂಚಿಸಲಾಯಿತು.
ಸಾರ್ವಜನಿಕ ಶೌಚಾಲಯಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣ‌ ಮಾಡಿ, ಸಮುದಾಯ ಶೌಚಾಲಯಗಳ ನಿರ್ಮಾಣ ಯಾವುದೇ ಬಾಕಿ ಉಳಿಸಿಕೊಳ್ಳಬಾರದು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದರು.
ಇದೇ ವೇಳೆ ಎ ಖಾತಾ ಹಾಗೂ ಬಿ ಖಾತಾ ಎಷ್ಟು ಆಸ್ತಿಗಳಿಗೆ ಆಗಿದೆ ಎಂಬುದರ ಕುರಿತು ಅಧಿಕಾರಿಗಳು ಸಭೆಗೆ ಮಾಹಿತಿ ಸಲ್ಲಿಸಿದರು. ಜಿಲ್ಲೆಯ ನಗರಸಭೆ, ಪಟ್ಟಣ ಪಂಚಾಯಿತಿಗಳು, ನಾನಾ ಕರ ವಸೂಲಿಯಲ್ಲಿ ಪ್ರಗತಿ ಸಾಧಿಸಲು ಜಿಲ್ಲಾಧಿಕಾರಿ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಅಧಿಕಾರಿಗಳು ಆಗಾಗ ಅನಿರಿಕ್ಷೀತ ಭೇಟಿ ನೀಡಿ, ಅಲ್ಲಿರುವ ಆಹಾರ ಗುಣಮಟ್ಟ, ಶುಚಿರುಚಿ ಹಾಗೂ ಅಲ್ಲಿನ ಸ್ವಚ್ಛತೆ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ‌ ಮುಖ್ಯ ಕಾರ್ಯನಿರ್ಹಕಾಧಿಕಾರಿ ರಿಷಿ ಆನಂದ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬದ್ರುದ್ದಿನ್ ಸೌದಾಗರ್, ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೀರಯ್ಯ ಸಾಲಿಮಠ, ಜಲಮಂಡಳಿ ಕಾರ್ಯನಿರ್ವಾಹಕ ಅಭಿಯಂತರರಾದ ಗೋವಿಂದ, ಪರಿಸರ ಅಧಿಕಾರಿ ವಿವೇಕ ಸೇರಿದಂತೆ ಜಿಲ್ಲೆಯ‌ ನಗರ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳು ಪಾಲ್ಗೊಂಡಿದ್ದರು.

Share this