ಮೋರಟಗಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ:ಮನೆ ಮೇಲ್ಚಾವಣಿ ಕುಸಿದು ನಾಲ್ವರು ಜೀವಂತ ಸಮಾಧಿ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 15:
ಭಾರೀ ಗಾಳಿ ಸಹಿತ‌ ಮಳೆಗೆ ಮನೆಯ ಮೇಲ್ಚಾವಣೆ ಕುಸಿದು ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿಯಾಗಿರುವ ದುರಂತ ಜಿಲ್ಲೆಯ ಆಲಮೇಲ ತಾಲೂಕಿನ ಮೋರಟಗಿಯಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಈ ದುರಂತದಲ್ಲಿ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ಮೋರಟಗಿ ಗ್ರಾಮದ ಗುರುನಾಥ ಬಡಿಗೇರ (35), ಜ್ಯೋತಿ ಬಡಿಗೇರ (28), ಕಾಳಮ್ಮ ಬಡಿಗೇರ (13), ಕೀರ್ತಿ ಬಡಿಗೇರ (9) ಮೃತಪಟ್ಟ ನತದೃಷ್ಟರು.
ತಮ್ಮ ಮನೆಯನ್ನು ದುರಸ್ತಿ ಮಾಡುವ ಕಾರಣ ಹಳೆಯ ಮನೆಯಲ್ಲಿ ಈ ಕುಟುಂಬ ಬಾಡಿಗೆಯಿಂದ ವಾಸವಾಗಿತ್ತು.
ನಿನ್ನೆ ರಾತ್ರಿ ಭಾರೀ ಗಾಳಿ ಸಹಿತ ಸುರಿದ ಮಳೆಗೆ ಹಳೆಯ ಮನೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಆಗ ಮನೆಯಲ್ಲಿದ್ದ ನಾಲ್ವರು ಕಲ್ಲು, ಮಣ್ಣಿನ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನಾಲ್ವರ ಶವ ಹೊರ ತೆಗೆಯಲು ಕ್ರಿಪ್ರ ಕಾರ್ಯಾಚರಣೆ ಕೈಗೊಂಡರು. ಬಹಳ ಹೊತ್ತಿನವರೆಗೆ ಕಾರ್ಯಾಚರಣೆ ನಂತರ ಕಲ್ಲು ಮಣ್ಣಿನ ಅಡಿಯಲ್ಲಿ ಸಿಲುಕಿದ ನಾಲ್ವರ ಶವಗಳನ್ನು ಹೊರ ತೆಗೆಯಲಾಯಿತು.
ಮೋರಟಗಿ ಗ್ರಾಮದ ಸ್ಥಳದಲ್ಲಿ ಕುಟುಂಬಸ್ಥರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮಸ್ಥರ ಕಣ್ಣಲ್ಲಿ ಕಣ್ಣೀರ ಕೋಡಿ ಹರಿಯಿತು. ಇಡೀ ಗ್ರಾಮ ದುಃಖದ ಮಡುವಿನಲ್ಲಿ ಮುಳುಗಿತ್ತು.
ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share this