ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 15: ಆಲಮೇಲ ತಾಲೂಕಿನ ಮೊರಟಗಿ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಸಾವಿಗೀಡಾದವರ ನಾಲ್ಕು ಜನರು ಸಾವಿಗೀಡಾದ ಘಟನಾ ಸ್ಥಳಕ್ಕೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಇಂದು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಡಾ. ಆನಂದ ಕೆ., ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಅವರು ಸಚಿವರಿಗೆ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಈ ಅವಘಡದಲ್ಲಿ ದಂಪತಿಯಾದ ಗುರುನಾಥ ಬಡಿಗೇರ(35), ಜ್ಯೋತಿ ಬಡಿಗೇರ(28) ಮತ್ತು ಅವರ ಮಕ್ಕಳಾದ ಕಾಳಮ್ಮ ಬಡಿಗೇರ(13) ಹಾಗೂ ಕೀರ್ತಿ ಬಡಿಗೇರ(9) ಸಾವಿಗೀಡಾಗಿದ್ದಾರೆ.
ಗುರುನಾಥ ಬಡಿಗೇರ ತಾಯಿ ಶಾಂತಾಬಾಯಿ ಮತ್ತು ಮಗ ವೀರೇಶ(10) ಮತ್ತೊಂದು ಮನೆಯಲ್ಲಿ ಮಲಗಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕುಟುಂಬ ಸದಸ್ಯರಿಗೆ ಸಾಂತ್ವನ, ಪರಿಹಾರ ಘೋಷಣೆ
ಬಳಿಕ ಬಡಿಗೇರ ಗುರುನಾಥ ಬಡಿಗೇರ ತಾಯಿ ಶಾಂತಾಬಾಯಿ ಮತ್ತು ಪುತ್ರ ವೀರೇಶ ಹಾಗೂ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಸಚಿವರು ಸಾಂತ್ವನ ಹೇಳಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಈ ದುರ್ಘಟನೆ ನಡೆಯಬಾರದಿತ್ತು. ಗುರುನಾಥ ಬಡಿಗೇರ ದಂಪತಿ ತಮ್ಮ ಮನೆಯ ದುರಸ್ಥಿ ಹಿನ್ನೆಲೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಂದು ತಮ್ಮ ಮನೆಗೆ ಮರಳುವವರಿದ್ದರು. ಆದರೆ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಸಾವಿಗೀಡಾದ ನಾಲ್ಕು ಜನರ ಕುಟುಂಬಕ್ಕೆ ತಲಾ ರೂ. 5 ಲಕ್ಷದಂತೆ ಒಟ್ಟು ರೂ. 20 ಲಕ್ಷ ಪರಿಹಾರ ನೀಡಲಾಗುವುದು ಮತ್ತು ಬದುಕುಳಿದಿರುವ ಬಾಲಕ ವೀರೇಶ ಬಡಿಗೇರ ವಿದ್ಯಾಭ್ಯಾಸಕ್ಕೆ ನೆರವಾಗಲಿದೆ. ಪರಿಹಾರದ ಹಣವನ್ನು ಬಾಲಕನ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿ ಇಡಲಾಗುವುದು. ಸಾವಿಗೀಡಾದವರ ಶವಪರೀಕ್ಷೆ ಮೊರಟಗಿಯಲ್ಲಿಯೇ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿಂದಗಿ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ, ಜಿ. ಪಂ. ಮಾಜಿ ಸದಸ್ಯ ನರಸಿಂಗಸಾ ತಿವಾರಿ, ಮುಖಂಡ ಅಶೋಕ ವಾರದ, ಜಿಲ್ಲಾ ಆರೋಗ್ಯಾಧಿಕಾರಿ ಸಂಪತಕುಮಾರ ಗುಣಾರಿ, ಕಂದಾಯ, ಆರೋಗ್ಯ, ಜಿ. ಪಂ
ಪೊಲೀಸ್, ಅಗ್ನಿಶಾಮಕ ದಳ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


