17ರಿಂದ 23ರ ವರೆಗೆ ಗುಮ್ಮಟನಗರಿಯಲ್ಲಿ ಬ್ಯಾಡ್ಮಿಂಟನ್‌ ಪಂದ್ಯ: 7 ದಿನಗಳವರೆಗೆ ಕ್ರೀಡಾ ಪ್ರೇಮಿಗಳಿಗೆ ಬ್ಯಾಡ್ಮಿಂಟನ್ ಆಕ್ಷನ್ ರಸದೌತಣ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ 16:
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ (KBA) ಅಧಿಕೃತ ಮಾನ್ಯತೆಯೊಂದಿಗೆ, ಯೋನೆಕ್ಸ್ ಸನ್‌ರೈಸ್ ಪ್ರಾಯೋಜಕತ್ವದಲ್ಲಿ ರಾಜ್ಯ ಮಟ್ಟದ ಯು-15 ಮತ್ತು ಯು-17 ಬ್ಯಾಡ್ಮಿಂಟನ್ ಪಂದ್ಯಾವಳಿ-2026 ಮೇ 17 ರಿಂದ ಮೇ 23 ರವರೆಗೆ ಐತಿಹಾಸಿಕ ನಗರಿ ವಿಜಯಪುರದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದು ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಅಧ್ಯಕ್ಷ ಹಾಗೂ ಮಾಜಿ ಸಚಿವ ಕುಮಾರ ಬಂಗಾರಪ್ಪ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಾದ್ಯಂತ ಇರುವ ಉದಯೋನ್ಮುಖ ಹಾಗೂ ಖ್ಯಾತ ಬ್ಯಾಡ್ಮಿಂಟನ್ ಆಟಗಾರರು ತಮ್ಮ ಕೌಶಲ್ಯ ಪ್ರದರ್ಶಿಸಲು ವಿಜಯಪುರಕ್ಕೆ ಲಗ್ಗೆ ಇಡುತ್ತಿದ್ದು, ಮುಂದಿನ 7 ದಿನಗಳ ಕಾಲ ಕ್ರೀಡಾ ಪ್ರೇಮಿಗಳಿಗೆ ತಡೆರಹಿತ ಬ್ಯಾಡ್ಮಿಂಟನ್ ಆಕ್ಷನ್ ರಸದೌತಣ ಸಿಗಲಿದೆ ಎಂದರು.
ಕ್ರೀಡಾಕೂಟವನ್ನು ಎರಡು ಹಂತಗಳಲ್ಲಿ ಆಯೋಜಿಸಲಾಗಿದೆ.
ಕ್ವಾಲಿಫೈಯಿಂಗ್ ರೌಂಡ್ಸ್ (ಮೇ 17 – ಮೇ 20): ಹೊಸ ಪ್ರತಿಭೆಗಳು ಮೇನ್ ಡ್ರಾ ಪ್ರವೇಶಿಸಲು ಈ ಹಂತದಲ್ಲಿ ಸೆಣಸಾಡಲಿದ್ದಾರೆ ಎಂದರು.
ಮೇನ್ ಡ್ರಾ ಪಂದ್ಯಗಳು (ಮೇ 21 – ಮೇ 23): ಪ್ರಮುಖ ಶ್ರೇಯಾಂಕದ ಆಟಗಾರರ ನಡುವೆ ಕ್ವಾರ್ಟರ್ ಫೈನಲ್, ಸೆಮಿಫೈನಲ್ (ಮೇ 22) ಹಾಗೂ ರೋಮಾಂಚಕ ಫೈನಲ್ ಪಂದ್ಯಗಳು (ಮೇ 23) ನಡೆಯಲಿವೆ ಎಂದರು.
ವಿಶ್ವದರ್ಜೆಯ ಕ್ರೀಡಾ ಸೌಲಭ್ಯ
ವಿಜಯಪುರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣ ಮತ್ತು ಬಿಎಲ್ ಡಿ ಇ ಅಸೋಸಿಯೇಷನ್ ಶ್ರೀಮತಿ ಬಂಗಾರಮ್ಮ ಸಜ್ಜನ ಕ್ಯಾಂಪಸ್ ನಲ್ಲಿ ಪಂದ್ಯಗಳನ್ನು ಆಯೋಜಿಸಲಾಗುವುದು ಎಂದರು.
ಅಂತರರಾಷ್ಟ್ರೀಯ ಗುಣಮಟ್ಟದ ಸಿಂಥೆಟಿಕ್ ಮ್ಯಾಟ್ ಅಂಕಣಗಳು, ಅತ್ಯಾಧುನಿಕ ಬೆಳಕಿನ ವ್ಯವಸ್ಥೆ ಹಾಗೂ ಸಾವಿರಾರು ವೀಕ್ಷಕರಿಗೆ ಆಸನದ ಸೌಕರ್ಯವನ್ನು ಕಲ್ಪಿಸಲಾಗಿದೆ ಎಂದರು.
ಆಕರ್ಷಕ ಪ್ರಾಯೋಜಕತ್ವ ಪ್ಯಾಕೇಜ್‌ ಗಳು ಸ್ಥಳೀಯ ಮತ್ತು ರಾಷ್ಟ್ರೀಯ ಬ್ರ್ಯಾಂಡ್‌ಗಳಿಗೆ ತಮ್ಮ ಪ್ರಚಾರಕ್ಕಾಗಿ ಈ ಪಂದ್ಯಾವಳಿ ದೊಡ್ಡ ವೇದಿಕೆ ಕಲ್ಪಿಸಿದೆ. ಪಂದ್ಯಾವಳಿಯುದ್ದಕ್ಕೂ 10,000ಕ್ಕೂ ಹೆಚ್ಚು ನೇರ ವೀಕ್ಷಕರು, 2 ದಶಲಕ್ಷಕ್ಕೂ (2M+) ಹೆಚ್ಚು ಡಿಜಿಟಲ್ ವೀಕ್ಷಕರು ಹಾಗೂ 5 ದಶಲಕ್ಷಕ್ಕೂ (5M+) ಹೆಚ್ಚು ಸೋಶಿಯಲ್ ಮೀಡಿಯಾ ಇಂಪ್ರೆಷನ್‌ಗಳನ್ನು ತಲುಪುವ ಗುರಿ ಹೊಂದಲಾಗಿದೆ.
ಪಂದ್ಯಾವಳಿಯ ಹೆಚ್ಚಿನ ವಿವರಗಳಿಗೆ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ (ಜಸ್ಮಾ ಭವನ ರಸ್ತೆ, ವಸಂತನಗರ, ಬೆಂಗಳೂರು) ಕಚೇರಿಯನ್ನು ಸಂಪರ್ಕಿಸಬಹುದು.
ಮೊಬೈಲ್ ಸಂಖ್ಯೆ: 9108354547 / 9845615105 ವೆಬ್‌ಸೈಟ್: www.kba.org.in
ಇಮೇಲ್: Secretary@kba.org.in
ವಿಜಯಪುರದ ವಿಶೇಷ ಕರೆ: ಜಗತ್ಪ್ರಸಿದ್ಧ ಗೋಲಗುಮ್ಮಟ ನಗರಿಗೆ ಬರುವ ಕ್ರೀಡಾಪಟುಗಳು ಹಾಗೂ ಪ್ರವಾಸಿಗರು ಇಲ್ಲಿನ ಸಾಂಪ್ರದಾಯಿಕ ಆಹಾರಗಳಾದ ‘ಜೋಳದ ರೊಟ್ಟಿ – ಎಣ್ಣೆಗಾಯಿ’ ಹಾಗೂ ‘ಕರೆದಂಟು’ ಸವಿಯುವ ಮೂಲಕ ವಿಜಯಪುರದ ಶ್ರೀಮಂತ ಸಂಸ್ಕೃತಿಯನ್ನು ಆಸ್ವಾದಿಸಬಹುದಾಗಿದೆ. ಬನ್ನಿ, ವಿಜಯಪುರದಲ್ಲಿ ಕ್ರೀಡಾ ಇತಿಹಾಸ ನಿರ್ಮಿಸೋಣ ಎಂದು ಕುಮಾರ ಬಂಗಾರಪ್ಪ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರಿಂದ ಪರಿಶೀಲನೆ

ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ನಗರದ ಡಾ. ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಕ್ರೀಡೆ ಜಿಲ್ಲೆಯಲ್ಲಿ ಏಳು ದಿನಗಳ ನಡೆಯಲಿರುವುದರಿಂದ ಒಳಾಂಗಣ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕ್ರಿಡಾಂಗಣದಲ್ಲಿ ಸ್ಥಾಪಿಸಲಾಗಿರುವ ನಾಲ್ಕು ಬ್ಯಾಡ್ಮಿಂಟನ್ ಅಂಗಳ,ಕೈಗೊಂಡಿರುವ ಮೂಲಭೂತ ಸೌಲಭ್ಯಗಳ ವೇದಿಕೆ ,ಕ್ರೀಡಾಪಟುಗಳಿಗೆ ಊಟೋಪಚಾರ ಸೇರಿದಂತೆ ಅಗತ್ಯ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡ ಅವರು, ಜಿಲ್ಲೆಯ ಹೆಮ್ಮೆಯಾಗಿರುವ ಈ‌ ಕ್ರೀಡಾಕೂಟ ಅತ್ಯಂತ ಯಶ್ವಸ್ವಿಗೊಳಿಸಿಲುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರಾದ ಕುಮಾರ‌ ಬಂಗಾರಪ್ಪ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಗಂಗಾಧರ ಸಂಬಣ್ಣಿ, ಜಿಲ್ಲಾಧಿಕಾರಿಗಳಾದ ಡಾ. ಆನಂದ‌.ಕೆ,ಮಹಾಂತೇಶ ಬಿರಾದಾರ, ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ ಸೇರಿದಂತೆ ಕೋಚ್ ಕ್ರೀಡಾಪಟುಗಳು ಉಪಸ್ಥಿತರಿದ್ದರು.

Share this