ನೀಟ್ ಪರೀಕ್ಷೆಯನ್ನು ವಿರೋಧಿಸುವ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲು ವಿದ್ಯಾರ್ಥಿ ಸಂಘಟನೆ ಆಗ್ರಹ

ಸಪ್ತಸಾಗರ ವಾರ್ತೆ, ವಿಜಯಪುರ,ಮೇ. 16 :
ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮದಿಂದಾಗಿ ನೀಟ್ ಅವ್ಯವಸ್ಥೆ ಆಗರವಾಗಿದೆ. ಬಡ ವಿದ್ಯಾರ್ಥಿಗಳಿಗೆ ದೊಡ್ಡ ಮೋಸವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಸ್ತುತ ರೂಪದಲ್ಲಿರುವ ನೀಟ್ ಪರೀಕ್ಷೆಯನ್ನು ವಿರೋಧಿಸುವ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲ ತೇಲಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವೈದ್ಯರಾಗ ಬಯಸುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅದರಲ್ಲೂ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ದೊಡ್ಡ ಅನ್ಯಾಯ ಮಾಡಿದೆ. ಈ ರೀತಿಯ ಪರೀಕ್ಷಾ ಅಕ್ರಮದಲ್ಲಿ ತೊಡಗಿ ದೇಶದ ಭವಿಷ್ಯ ಹಾಗೂ ವಿದ್ಯಾರ್ಥಿಗಳ ಜೀವನ ಹಾಳು ಮಾಡುವವರಿಗೆ ವರ್ಷಗಟ್ಟಲೇ ಜೈಲಿನಲ್ಲಿ ಕೊಳೆಯುವಂತೆ ಮಾಡಿ ಗಲ್ಲು ಶಿಕ್ಷೆ ಒದಗಿಸುವ ಕೆಲಸ ನಡೆಯಬೇಕಿದೆ ಎಂದರು.
ಎಂಬಿಬಿಎಸ್, ಬಿಡಿಎಸ್ ಹಾಗೂ ಆಯುಷ್ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆಯನ್ನು ರಾಜ್ಯದ ನೀತಿ ಆಧರಿಸಿ ನಿರ್ಧರಿಸುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ಪುನರ್ ಹಸ್ತಾಂತರಿಸುವುದು ಸೂಕ್ತ, ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಹೆಜ್ಜೆ ಇರಿಸಬೇಕು ಎಂದರು.
ನೀಟ್ ಅಕ್ರಮದಿಂದ ಒಬ್ಬರ ಜೀವನ ಹಾಳಾಗುವುದಿಲ್ಲ, ಲಕ್ಷಾಂತರ ವಿದ್ಯಾರ್ಥಿಗಳ ಜೀವನವೇ ಬುಡಮೇಲು, ಅನೇಕ ವಿದ್ಯಾರ್ಥಿಗಳು ನೊಂದು ಮಾನಸಿಕ ಆಘಾತ ಎದುರಿಸುವುದುಂಟು. ಹೀಗಾಗಿ ಪರೀಕ್ಷಾ ಅಕ್ರಮ ಎನ್ನುವುದು ಗಂಭೀರ ಸ್ವರೂಪದ ಅಪರಾಧ ಪ್ರಕರಣವಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಪರೀಕ್ಷೆ ಅಕ್ರಮವನ್ನು ತನಿಖೆ ನಡೆಸಲು ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ಪಾರದರ್ಶಕವಾಗಿ ನಡೆಯಬೇಕು. ಕೇಂದ್ರಿಕೃತ ಪರೀಕ್ಷಾ ವ್ಯವಸ್ಥೆಯಿಂದ ಉಂಟಾಗುತ್ತಿರುವ ಅಸಮಾನತೆಯನ್ನು ನಿವಾರಿಸುವ ಕೆಲಸ ನಡೆಯಬೇಕಿದೆ ಎಂದರು.
ಸಂಘಟನೆ ಪ್ರಮುಖ ಸಿದ್ದು ಕೇರಿ ಮಾತನಾಡಿ, ಪಿ.ಎಸ್.ಐ, ಪಶು ವೈದ್ಯಕೀಯ ಹೀಗೆ ಎಲ್ಲದರಲ್ಲೂ ಅಕ್ರಮ ನಡೆಯುತ್ತಿದೆ. ದುಡ್ಡು ಕೊಟ್ಟು ವೈದ್ಯಕೀಯ ಪದವಿ ಪಡೆದರೆ ಆರೋಗ್ಯ ಸೇವೆ ಯಾವ ರೀತಿ ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ನೀಟ್ ಪರೀಕ್ಷೆ ವ್ಯವಸ್ಥೆಯನ್ನು ಸರಿದೂಗಿಸಲು ಪ್ರಧಾನಿ ಮೋದಿ ಅವರಿಂದ ಸಾಧ್ಯವಾಗುತ್ತಿಲ್ಲ, ಅತ್ತ ಪ್ರತಿಪಕ್ಷಗಳು ಸಹ ಸರ್ಕಾರದ ವೈಫಲ್ಯ ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿಲ್ಲ ಎಂದರು.
ಕರ್ನಾಟಕ ಸರ್ಕಾರ ಸಹ ಉದ್ಯೋಗ ಭರ್ತಿಗಾಗಿ ಗಂಭೀರ ಹೆಜ್ಜೆ ಇರಿಸಿಲ್ಲ, ಬದಲಾಗಿ ವಿದ್ಯಾರ್ಥಿಗಳ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದೇ ರೀತಿ ತಮಿಳುನಾಡು ಮಾದರಿಯಲ್ಲಿ ಪರ್ಯಾಯ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂದರು.
ಪ್ರಮುಖರಾದ ಸಂತೋಷ ಚೌರಿ, ಪ್ರಭು ಕಾರಜೋಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share this