ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ ಒಪ್ಪಿಗೆ ಕೇಳುವ ಮೋದಿ: ದುರ್ಬಲ ರಾಷ್ಟ್ರದ ಸಂಕೇತ- ಸಚಿವ ಎಂ. ಬಿ. ಪಾಟೀಲ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 16:ರಷ್ಯಾದಿಂದ ತೈಲ ಖರೀದಿಗೆ ಪ್ರಧಾನಿ ಅಮೆರಿಕ ಒಪ್ಪಿಗೆ ಕೇಳುವುದು ಸರಿಯಲ್ಲ. ಇದು ಭಾರತ ಎಷ್ಟು ದುರ್ಬಲವಾಗಿದೆ ಎಂಬುದರ ಸಂಕೇತವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನಮ್ಮದು ಸ್ವತಂತ್ರ್ಯ ರಾಷ್ಟ್ರ ಏನು ಮಾಡಬೇಕು. ಎಲ್ಲಿ ಖರೀದಿ ಮಾಡಬೇಕು ಎಂಬುದನ್ನು ಅಮೆರಿಕ ಬಳಿ ಅಡವಿಟ್ಟಿದ್ದರೆ ಇದು ನಮ್ಮ ದುರ್ಭಾಗ್ಯ ಎಂದರು.
ಮನಮೋಹನ್ ಸಿಂಗ್ ಪ್ರಧಾನಿ ಇದ್ದಾಗ ಆರ್ಥಿಕ ಪರಿಸ್ಥಿತಿ ಉತ್ತಮವಾಗಿತ್ತು.
ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ಎಣ್ಣೆ ದರ ಕಡಿಮೆ ಇದ್ದವು. ಮೋದಿ ಅವರ ಅಧಿಕಾರದಲ್ಲಿ ಎಲ್ಲ ದರಗಳು ಏರಿಕೆಯಾಗಿವೆ. ಈಗ ಯುದ್ದದ ನೆಪವಿದೆ. ಆದರೆ ಯುದ್ದ ಆರಂಭವಾಗುವ ಮುಂಚೆಯೇ ದರ ಏರಿಕೆಯಾಗಿದೆ ಎಂದರು.
ವಿದೇಶಾಂಗ ನೀತಿ ಮೋದಿ ಅವರ ವೈಯುಕ್ತಿಕ ನೀತಿಯಾಗಿದೆ. ನೆಹರು ಕಾಲದಿಂದ ವಾಜಪೇಯಿ ಅವರ ಕಾಲದವರೆಗೆ ಪ್ಯಾಲಿಸ್ತೇನ್, ಇರಾನ್ ಜೊತೆಗೆ ನಮ್ಮ ಸಾಮ್ಯತೆ ಇತ್ತು.
ಪ್ರಧಾನಿ ಯಾವುದಾದರೂ ದೇಶಕ್ಕೆ ಹೋಗಿ ಏನೆನೋ ಮಾತನಾಡುತ್ತಾರೆ.
ಮೋದಿ ಫಾದರ್ ಲ್ಯಾಂಡ್ ಮದರ್ ಲ್ಯಾಂಡ್ ಎಂದೆಲ್ಲ ಮಾತಾಡಿದರು.
ಭಾರತದ ಬಗ್ಗೆ ಅಮೆರಿಕ ಮಾತನಾಡಿದಾಗ ಇರಾನ್ ಭಾರತದ ಪರ ಗೌರವದ ಮಾತನಾಡಿದೆ. ಇದೆಲ್ಲಾ ಮೋದಿ ಅವರಿಗೆ ಅಂಧ ಭಕ್ತರಿಗೆ ಯಾವಾಗ ಗೊತ್ತಾಗುತ್ತದೆಯೋ ಎಂದು ಕುಟುಕಿದರು.
ಡಾಲರ್ ವಿರುದ್ದ ರೂಪಾಯಿ ಮೌಲ್ಯ ಕುರಿತು ಇದೇ ಮೋದಿ ಅವರು ಸಿಎಂ ಆಗಿದ್ದಾಗ ಟೀಕೆ ಮಾಡುತ್ತಿದ್ದರು.
ನೆಹರು, ಇಂದಿರಾ, ನರಸಿಂಹರಾಯರು ಮನಮೋಹನ್ ಸಿಂಗ್ ಅವರು ಭಾರತಕ್ಕೆ ಉತ್ತಮ ಆರ್ಥಿಕ ವ್ಯವಸ್ಥೆ ಮಾಡಿದ್ದರು.
ಕಚ್ಚಾ ತೈಲದ ದರ ಏರಿದಾಗ ತೈಲ ಬೆಲೆ ಏರಬೇಕು. ಕಡಿಮೆಯಾದಾಗ ದರ ಇಳಿಯಬೇಕು. ಆದರೆ ಬಿಜೆಪಿ ಕಾಲದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಿದ್ದಾಗ ತೈಲ ಬೆಲೆ ಏರಿಕೆಯಾಗಿದ್ದು ಯಾಕೆ?
ಇವರು ಹಿಂದೂ, ಮುಸಲ್ಮಾನ ಎಂದು ಮಾತನಾಡಿ, ಬಾರಾಖೂನ್ ಮಾಫ ಮಾಡಿಕೊಂಡು ಹೊರಟಿದ್ದಾರೆ ಎಂದರು.
ಕಚ್ಚಾತೈಲ ಬೆಲೆ ಕಡಿಮೆಯಿದ್ದಾಗ ಪೆಟ್ರೊಲ್, ಡಿಸೇಲ್ ಬೆಲೆ ಕಡಿಮೆ ಮಾಡಿಲ್ಲ. ಲಕ್ಷಾಂತರ ಕೋಟಿ ಹಣ ಸಂಗ್ರಹ ಮಾಡಿದ್ದಾರೆ. 56 ಲಕ್ಷ ಕೋಟಿ ಹಣ ದರ ಏರಿಕೆಯಿಂದ ಗಳಿಸಿದ್ದಾರೆಂದು ಸುರ್ಜೆವಾಲಾ ಹೇಳಿದ್ದಾರೆ. ಆ ಹಣ ಜನೋಪಯೋಗಿ ಕೆಲಸಕ್ಕೆ ಬಳಕೆ ಮಾಡಿದ್ದಾರಾ ಎಂದು ಎಂ.ಬಿ. ಪಾಟೀಲ ಪ್ರಶ್ನಿಸಿದರು.
ಪಾಕಿಸ್ತಾನ, ಬಾಂಗ್ಲಾದೇಶ, ಬರ್ಮಾದಲ್ಲಿ ತೈಲ ಬೆಲೆ ಕಡಿಮೆ ಇದ್ದಾಗ ನಮ್ಮಲ್ಲಿ ದರ ಹೆಚ್ಚಿತ್ತು. ಭಾರತದ ಜಿಡಿಪಿ ದರಕ್ಕಿಂತ ಬಾಂಗ್ಲಾದೇಶದ ಜಿಡಿಪಿ ದರ ಉತ್ತಮವಾಗಿದೆ. ನಾವೆಲ್ಲಾ ಅವರಿಗಿಂತ ಕಡೆಯಾಗಿದ್ದೇವೆ. ಜನರನ್ನು ಮರಳು ಮಾಡುತ್ತಿದ್ದಾರೆ. ಕೊರೋನಾ ಬಂದಾಗ ತಮಟೆ ಬಡೆಯೋದಕ್ಕೆ ಹಚ್ಚಿದ್ದರು. ಮೋದಿ ಅವರು ವಿಶ್ವಗುರು ಎಂದು ಲೇವಡಿ ಮಾಡಿದರು.
ಭ್ರಷ್ಟಾಚಾರದ ಬಗ್ಗೆ ಮೋದಿ ಮಾತನಾಡುತ್ತಾರೆ. ಆದರೆ ಬೇರೆಯದ್ದೇ ಮಾಡುತ್ತಾರೆ. ಪಶ್ಚಿಮ ಬಂಗಾಳ, ಆಸ್ಸಾಂ, ಸಿಎಂ ಬಗ್ಗೆ ಮೋದಿ ಹಿಂದೆ ಏನೆಲ್ಲಾ ಮಾತನಾಡಿದ್ದರು. ಅಶೋಕ ಚವ್ಹಾಣ, ಅಜೀತ್ ಪವಾರ್ ಬಗ್ಗೆ ಮೋದಿ ಏನೆಲ್ಲಾ ಮಾತನಾಡಿದ್ದರು. ಎಲ್ಲವನ್ನು ವಾಷಿಂಗ್ ಮಷಿನ್ ನಲ್ಲಿ ಹಾಕಿ ಶುಭ್ರ ಮಾಡುತ್ತಾರೆಂದು ಎಂ.ಬಿ. ಪಾಟೀಲ ಟಾಂಗ್ ಕೊಟ್ಟಿದ್ದಾರೆ.

Share this