ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 16:
ವಿಶ್ವದ ಆರೋಗ್ಯ ಕ್ಷೇತ್ರದಲ್ಲಿ ದಾದಿಯರ ಪಾತ್ರ ಅನನ್ಯವಾದದ್ದು. ಅವರ ತ್ಯಾಗವನ್ನ ಜಗತ್ತು ಅತ್ಯಂತ ಕೃತಜ್ಞತೆಯಿಂದ ಸ್ಮರಿಸುತ್ತದೆ. ಪ್ರತಿ ವರ್ಷ ಮೇ 12 ರಂದು ವಿಶ್ವಾದ್ಯಂತ ದಾದಿಯರ ದಿನವನ್ನು, ತನ್ನ ನಿಸ್ವಾರ್ಥ ಸೇವೆಯ ಮೂಲಕ ಜಗತ್ತಿನ ಗಮನ ಸೆಳೆದಿದ್ದ ದೀಪದ ಕನ್ಯೆ ಎಂದೇ ಸುಪ್ರಸಿದ್ಧಳಾಗಿದ್ದ ದಾದಿ ಪ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಅಂತರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳು ಶ್ರೇಷ್ಠ ದಾದಿಯರಾಗಬೇಕಾದರೆ ಪ್ಲಾರೆನ್ಸ್ ನೈಟಿಂಗೇಲ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಎಕ್ಸಲೆಂಟ್ ಕಾಲೇಜ್ ಆಫ್ ನರ್ಸಿಂಗ್ ಮಹಾವಿದ್ಯಾಲಯದ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎಕ್ಸಲೆಂಟ್ ಕಾಲೇಜ್ ಆಫ್ ನರ್ಸಿಂಗ್ ಮಹಾ ವಿದ್ಯಾಲಯದಲ್ಲಿ ನಡೆದ ವಿಶ್ವದಾದಿಯರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನರ್ಸಗಳು ಎಂದರೆ ಎರಡನೆಯ ತಾಯಿ ಇದ್ದ ಹಾಗೆ. ನೂರಾರು ಜನ ರೋಗಿಗಳ ಜೀವ ಉಳಿಸಲು ಸದಾ ಪ್ರಯತ್ನಿಸುವ ನಿಮ್ಮ ಸೇವೆ ನಿಜಕ್ಕೂ ಸದಾ ಸ್ಮರಣೀಯವಾದದ್ದು ಎನ್ನುವುದನ್ನು ಕೊರೋನಾ ಕಾಲಘಟ್ಟದಲ್ಲಿ ದಾದಿಯರು ವಿಶ್ವಕ್ಕೆ ನೆನಪಿಸಿದ್ದಾರೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರಕಾರಿ ನರ್ಸಿಂಗ್ ಕಾಲೇಜಿನ ನಿವೃತ್ತ ಪ್ರಾಚಾರ್ಯೆ ಡಾ.ಪ್ರಭಾವತಿ ಕಾಳೆ ಅವರು ಮಾತನಾಡಿ, ಎಕ್ಸಲೆಂಟ್ ನರ್ಸಿಂಗ್ ಮಹಾವಿದ್ಯಾಲಯವು ಅತ್ಯಂತ ಗುಣಮಟ್ಟದ ಹಾಗೂ ಸಂಸ್ಕಾರಯುತ ಶಿಕ್ಷಣವನ್ನು ನರ್ಸಿಂಗ್ ವಿದ್ಯಾರ್ಥಿಗಳಿಗೆ ನೀಡುತ್ತಿದ್ದು, ನೀವೆಲ್ಲರೂ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಕಲಿಕೆ ಜೊತೆಗೆ ಶಿಸ್ತನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ವಿಶ್ವದಾದಿಯರ ದಿನಾಚರಣೆಯ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯೆ ಶ್ವೇತಾ ಬಿರಾದಾರ ವಹಿಸಿದ್ದರು.
ಸಮಾರಂಭದಲ್ಲಿ ರಾಜಕುಮಾರ ತಿಡುಗುಂದಿ. ಪ್ರಿಯಾಂಕಾ ಮಡಗಿ, ಸಂತೋಷಿ ನಿಕ್ಕಮ, ವಿಶ್ವನಾಥ ಕುಲಕರ್ಣಿ, ಐಶ್ವರ್ಯ ಜಂಬಗಿ, ಶಶಿಧರ ತಳ್ಳಿ, ದೀಪಾ ಭಾರ್ಗಣಿ, ಸನಾಜುಮ್ ಪಟೇಲ್, ಸುಮಯ್ಯ, ಅಮೃತಾ ಪತ್ತಾರ, ಶಿವಾನಂದ ಗಿರ್ಗೆ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ನರ್ಸ್ ಗಳ ಸೇವೆಯನ್ನು ಪ್ರತಿಬಿಂಬಿಸುವ ಬಣ್ಣ ಬಣ್ಣದ ರಂಗೋಲಿಯನ್ನು ಬಿಡಿಸುವುದರ ಮೂಲಕ ವಿದ್ಯಾರ್ಥಿಗಳು ತಾವು ತೆಗೆದಿದ್ದ ರಂಗೋಲಿಯ ಚಿತ್ತಾರ ಗಳಲ್ಲಿ ದಾದಿಯರ ತ್ಯಾಗದ ಬಗ್ಗೆ ವಿಶೇಷ ಸಂದೇಶ ನೀಡುವ ಮೂಲಕ ಎಲ್ಲರ ಗಮನ ಸೆಳೆದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


