ಬಸವನ ಬಾಗೇವಾಡಿಯಲ್ಲಿ ಇಂಧನ, ಅಡುಗೆ ಅನಿಲ ಕೃತಕ ಅಭಾವ: ದಾಸ್ತಾನು ಪರಿಶೀಲಿಸಲು ಶಂಕರಗೌಡ ಬಿರಾದಾರ ಆಗ್ರಹ

ಸಪ್ತಸಾಗರ ವಾರ್ತೆ,ಬಸವನಬಾಗೇವಾಡಿ, ಮೇ. 20:
ಪಟ್ಟಣದಲ್ಲಿ ಕಳೆದ ಕೆಲವು ದಿನಗಳಿಂದ ಪೆಟ್ರೋಲ್, ಡೀಸೆಲ್ ಹಾಗೂ ವಾಣಿಜ್ಯ ಅಡುಗೆ ಅನಿಲದ ತೀವ್ರ ಕೃತಕ ಅಭಾವ ಸೃಷ್ಟಿಯಾಗುತ್ತಿದ್ದು, ಸಾರ್ವಜನಿಕರು, ರೈತರು ಹಾಗೂ ಬಡ ವ್ಯಾಪಾರಸ್ಥರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಪಟ್ಟಣದ ಪೆಟ್ರೋಲ್ ಬಂಕ್‌ಗಳಲ್ಲಿ ಸಕಾಲಕ್ಕೆ ಇಂಧನ ಸಿಗದೆ ಸಾರ್ವಜನಿಕರು ಹಾಗೂ ಕೃಷಿ ಚಟುವಟಿಕೆಗಳಿಗಾಗಿ ಡೀಸೆಲ್ ನಂಬಿಕೊಂಡಿರುವ ರೈತರು ನಿತ್ಯ ಪರದಾಡುವಂತಾಗಿದೆ. ಇನ್ನೊಂದೆಡೆ, ಪಟ್ಟಣದ ಗ್ಯಾಸ್ ಏಜೆನ್ಸಿಗಳು ಹೋಟೆಲ್, ಕ್ಯಾಂಟೀನ್ ನಡೆಸುವ ಸಣ್ಣ ಮತ್ತು ಬಡ ವ್ಯಾಪಾರಸ್ಥರಿಗೆ ಕಮರ್ಷಿಯಲ್ ಸಿಲಿಂಡರ್‌ಗಳನ್ನು ವಿತರಿಸುತ್ತಿಲ್ಲ. ಇದರಿಂದಾಗಿ ದಿನದ ದುಡಿಮೆಯನ್ನೇ ನಂಬಿಕೊಂಡಿರುವ ಬಡ ಹೋಟೆಲ್ ಮಾಲೀಕರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ನಿಜಕ್ಕೂ ಇಂಧನ ಮತ್ತು ಅನಿಲದ ಕೊರತೆ ಇದೆಯೇ ಅಥವಾ ಉದ್ದೇಶಪೂರ್ವಕವಾಗಿ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಸಂಚು ನಡೆಯುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಆದ್ದರಿಂದ ತಹಸೀಲ್ದಾರರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ತಕ್ಷಣವೇ ಕಾರ್ಯಪ್ರವೃತ್ತರಾಗಿ ಪಟ್ಟಣದ ಎಲ್ಲಾ ಪೆಟ್ರೋಲ್ ಬಂಕ್ ಹಾಗೂ ಗ್ಯಾಸ್ ಏಜೆನ್ಸಿಗಳ ದಾಸ್ತಾನು (Stock Register) ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅಧಿಕಾರಿಗಳು ವಿಳಂಬ ಮಾಡದೆ ಬಂಕ್ ಹಾಗೂ ಏಜೆನ್ಸಿಗಳಿಗೆ ಭೇಟಿ ನೀಡಿ ಕಟ್ಟುನಿಟ್ಟಿನ ತಪಾಸಣೆ ನಡೆಸುವ ಮೂಲಕ ಸಾರ್ವಜನಿಕರಿಗೆ ಹಾಗೂ ರೈತರಿಗೆ ಆಗುತ್ತಿರುವ ತೊಂದರೆಯನ್ನು ತಕ್ಷಣವೇ ಬಗೆಹರಿಸಬೇಕು. ಇಲ್ಲದಿದ್ದರೆ ಬಡ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಪರವಾಗಿ ರಾಷ್ಟ್ರೀಯ ಬಸವಸೈನ್ಯದ ವತಿಯಿಂದ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಶಂಕರಗೌಡ ಬಿರಾದಾರ ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Share this