ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 20:
ನಗರದ ಪ್ರಮುಖ ಸಾರಿಗೆ ಕೇಂದ್ರವಾಗಿರುವ ರಾಣಿ ಚೆನ್ನಮ್ಮ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಪ್ರತಿನಿತ್ಯ ಅನುಭವಿಸುತ್ತಿರುವ ಮೂಲಭೂತ ಸಮಸ್ಯೆಗಳು, ಅಕ್ರಮ ಶುಲ್ಕ ವಸೂಲಿ ಹಾಗೂ ಕುಡಿಯುವ ನೀರಿನ ಅವ್ಯವಸ್ಥೆ ವಿರುದ್ಧ ದ್ರಾವಿಡ ವಿದ್ಯಾರ್ಥಿ ಪರಿಷತ್ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಅಕ್ಷಯ್ ಕುಮಾರ್ ಅಜಮನಿ ಮಾತನಾಡಿ, ನಿತ್ಯ ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಕಾರ್ಮಿಕರು ಬಸ್ ನಿಲ್ದಾಣವನ್ನು ಅವಲಂಬಿಸಿಕೊಂಡಿದ್ದರೂ, ಅಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಸ್ಪಷ್ಟವಾಗಿ ಎದ್ದು ಕಾಣಿಸುತ್ತಿದೆ ಎಂದು ಪರಿಷತ್ ಆರೋಪಿಸಿದೆ.
ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಗ್ರಂಥಾಲಯದ ವ್ಯವಸ್ಥೆಯೇ ಇಲ್ಲದಿರುವುದರಿಂದ ದೂರ ಪ್ರಯಾಣ ಮಾಡುವ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ಅನಾನುಕೂಲ ಉಂಟಾಗಿದೆ. ಅಲ್ಲದೆ ಸುರಕ್ಷಿತ ಲಗೇಜ್ ಲಾಕರ್ ವ್ಯವಸ್ಥೆಯ ಕೊರತೆಯನ್ನು ದುರುಪಯೋಗಪಡಿಸಿಕೊಂಡು ಕೆಲವು ಖಾಸಗಿ ವ್ಯಕ್ತಿಗಳು ಯಾವುದೇ ನಿಯಮಗಳಿಲ್ಲದೆ ಸಾರ್ವಜನಿಕರಿಂದ ಮನಬಂದಂತೆ ಹಣ ವಸೂಲಿ ಮಾಡುತ್ತಿರುವುದು ಖಂಡನೀಯ ಎಂದು ಪರಿಷತ್ ತಿಳಿಸಿದೆ.
ಇನ್ನೂ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಅತ್ಯಂತ ಕಳಪೆಯಾಗಿದ್ದು, ನಿಗದಿತ ದರಕ್ಕಿಂತ ಹೆಚ್ಚಿನ ಶುಲ್ಕವನ್ನು ಸಾರ್ವಜನಿಕರಿಂದ ಕಾನೂನುಬಾಹಿರವಾಗಿ ವಸೂಲಿ ಮಾಡಲಾಗುತ್ತಿದೆ. ಇದು ಬಡ ಮತ್ತು ಸಾಮಾನ್ಯ ಪ್ರಯಾಣಿಕರ ಮೇಲೆ ಆರ್ಥಿಕ ಹೊರೆ ಹಾಕುವ ಕೆಲಸವಾಗಿದೆ ಎಂದು ಆರೋಪಿಸಲಾಗಿದೆ.
ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಇಂದಿರಾ ಕ್ಯಾಂಟೀನ್ ಆವರಣದ ಉಚಿತ ಶುದ್ಧ ಕುಡಿಯುವ ನೀರಿನ ಘಟಕ ದೀರ್ಘಕಾಲದಿಂದ ದುರಸ್ತಿಯಾಗದೆ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಕಲುಷಿತ ನೀರು ಸೇವಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರಿಂದ ಆರೋಗ್ಯ ಸಮಸ್ಯೆಗಳು ಹಾಗೂ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ದ್ರಾವಿಡ ವಿದ್ಯಾರ್ಥಿ ಪರಿಷತ್ ಎಚ್ಚರಿಸಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೇಶಿಸಿ ಬಸ್ ನಿಲ್ದಾಣದಲ್ಲಿನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕು.
ಸಾರ್ವಜನಿಕ ಗ್ರಂಥಾಲಯ ಸ್ಥಾಪನೆ, ಲಗೇಜ್ ಲಾಕರ್ ಹಾಗೂ ಶೌಚಾಲಯಗಳಲ್ಲಿ ನಡೆಯುತ್ತಿರುವ ಅಕ್ರಮ ವಸೂಲಿ ತಡೆ, ಹೊಸ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪರಿಷತ್ ಆಗ್ರಹಿಸಿದೆ.
ಇಲ್ಲವಾದಲ್ಲಿ ಸಾರ್ವಜನಿಕರೊಂದಿಗೆ ಸೇರಿ ಹೋರಾಟ ನಡೆಸಲಾಗುವುದು ಎಂದು ದ್ರಾವಿಡ ವಿದ್ಯಾರ್ಥಿ ಪರಿಷತ್ ಎಚ್ಚರಿಸಿದೆ.
ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗೌಡಪಗೌಡ ಬಡಿಗೇರ, ಮಂಜುನಾಥ ಕವಳೆ, ಹುಲಗಪ್ಪ ಹಾಂದ್ರಳ ಮುಂತಾದವರು ಭಾಗಿಯಾಗಿದ್ದರು.
ವಿಜಯಪುರದ ರಾಣಿ ಚೆನ್ನಮ್ಮ ಕೇಂದ್ರ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಅವ್ಯವಸ್ಥೆ ವಿರುದ್ಧ ದ್ರಾವಿಡ ವಿದ್ಯಾರ್ಥಿ ಪರಿಷತ್ ಮನವಿ


