ಸಪ್ತಸಾಗರ ವಾರ್ತೆ, ವಿಜಯಪುರ, ಮೇ 25:
ನಗರ ನಿವಾಸಿ-ಕೇಂದ್ರಿತ ಆಧಾರ್ ಸೇವೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಬೆಂಗಳೂರು ಪ್ರಾದೇಶಿಕ ಕಚೇರಿ ಮತ್ತೊಂದು ಮಹತ್ವದ ಹೆಜ್ಜೆಯನ್ನಿರಿಸಿದ್ದು, ನಗರದ ಆಶ್ರಮ ರಸ್ತೆಯಲ್ಲಿರುವ ಬಿಎಲ್ ಡಿಇ 2ನೇ ಗೇಟ್ ಎದುರಿಗಿರುವ ಬಜಾಜ್ ಶೋರೂಂ ಮೇಲಿನ ಕಟ್ಟಡದಲ್ಲಿ ಹೊಸ ಆಧಾರ್ ಸೇವಾ ಸೇವಾ ಕೇಂದ್ರವನ್ನು ಕಾರ್ಯಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ತಡೆರಹಿತ ಆಧಾರ್ ಸೇವೆ:
ವಿಜಯಪುರ ಆಧಾರ್ ಸೇವಾ ಕೇಂದ್ರಗಳ ಪೈಕಿ ಇದು ‘ಮಾಡೆಲ್-ಬಿ’ ಕೇಂದ್ರವಾಗಿದ್ದು,ನಿವಾಸಿಗಳಿಗೆ ತಡೆರಹಿತ ಆಧಾರ್ ಸಂಬಂಧಿತ ಸೇವೆ ಒದಗಿಸಲು ಎಂದು ಕಾರ್ಯಾಚರಣಾ ಕಿಟ್ ಗಳನ್ನು ಈ ಕೇಂದ್ರದಲ್ಲಿ ಅಳವಡಿಸಲಾಗಿದೆ.
ಈ ಆಧಾರ್ ಸೇವಾ ಕೇಂದ್ರವು ಆಧಾರ್ ನೋಂದಣಿ, ಬಯೋಮೆಟ್ರಿಕ್ ನವೀಕರಣಗಳು,ದೋಷ ತಿದ್ದುಪಡಿ ಮತ್ತು ಕುಂದುಕೊರತೆ ನಿವಾರಣಾ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುತ್ತದೆ. ಈ ಕೇಂದ್ರವು ವಾರದ ಎಲ್ಲ ದಿನಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.
ಈ ಆಧಾರ್ ಸೇವಾ ಕೇಂದ್ರವು ನೇರವಾಗಿ ಯುಐಡಿಎಐ ನಡಿ ಕಾರ್ಯ ನಿರ್ವಹಿಸುತ್ತದೆ. ಈ ಕೇಂದ್ರವನ್ನು ಸಂಪೂರ್ಣವಾಗಿ ಅಂತರ್ಗತ ಮತ್ತು ಜನಸ್ನೇಹಿಯಾಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಗಾಲಿಕುರ್ಚಿ, ಪ್ರವೇಶದ ಸೌಕರ್ಯ, ಸುಲಭವಾಗಿ ಬಳಸಬಹುದಾದ ಶೌಚಾಲಯಗಳು ಮತ್ತು ಪ್ರತ್ಯೇಕ ಕುಂದುಕೊರತೆ ನಿವಾರಣಾ ವ್ಯವಸ್ಥೆಗಳಿವೆ. ಪ್ರತಿಯೊಂದು ಆಧಾರ್ ಸೇವಾ ಕೇಂದ್ರವನ್ನು ಒಬ್ಬ ವ್ಯವಸ್ಥಾಪಕ ನಿರ್ವಹಿಸುತ್ತಾರೆ. ಇವರು ನಿವಾಸಿಗಳಿಂದ ಕುಂದುಕೊರತೆಗಳನ್ನು ಸ್ವೀಕರಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಿ, ಸಕಾಲಕ್ಕೆ ಪರಿಹಾರ ಕಲ್ಪಿಸುತ್ತಾರೆ.
ನಿವಾಸಿಗಳು ಆನ್ ಲೈನ್‌ನಲ್ಲಿ ಯುಐಡಿಎಐ ಆಧಾರ್ ಅಪಾಯಿಂಟ್‌ಮೆಂಟ್ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಆಧಾರ್ ಸೇವೆಗಳಿಗಾಗಿ ಮುಂಚಿತವಾಗಿಯೇ ಅಪಾಯಿಂಟ್ ಮೆಂಟ್ ಕಾಯ್ದಿರಿಸಬಹುದಾಗಿದೆ.
ಮಕ್ಕಳಿಗೆ ಉಚಿತ ಸೌಲಭ್ಯ:
ಜಿಲ್ಲೆಯ 5 ರಿಂದ 17 ವರ್ಷದ ಒಟ್ಟು 68,000 ಮಕ್ಕಳ ಕಡ್ಡಾಯ ಬಯೋಮೆಟ್ರಿಕ್ ಅಪಡೇಟ್ ಸೌಲಭ್ಯವನ್ನು ಸೆಪ್ಟೆಂಬರ್ 30ರವರೆಗೆ ಉಚಿತವಾಗಿ ಅವಕಾಶ ಕಲ್ಪಿಸಲಾಗಿದೆ. ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ್ ಹಾಗೂ ಸಂಬಂಧಿಸಿದ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ನವೀಕರಿಸಿಕೊಳ್ಳಬಹುದಾಗಿದೆ. ಇದರಿಂದಾಗಿ ಮಕ್ಕಳ ಶಾಲೆಯ ದಾಖಲಾತಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು, ಸರ್ಕಾರದ ವಿವಿಧ ಯೋಜನೆಗಳು, ವಿದ್ಯಾರ್ಥಿ ವೇತನ, ತರಬೇತಿಗಳು ಸೇರಿದಂತೆ ಇತ್ಯಾದಿ ಯೋಜನೆಗಳ ಲಾಭ ಪಡೆಯಲು ಅನುಕೂಲವಾಗಲಿದೆ.
ಜಿಲ್ಲೆಯ ಎಲ್ಲಾ ಪೋಷಕರು 5 ರಿಂದ 17 ವಯೋಮಿತಿಯ ಮಕ್ಕಳ ಆಧಾರ್ ಸಂಖ್ಯೆಗೆ ಕಡ್ಡಾಯ ಬಯೋಮೆಟ್ರಿಕ್ ಅಪ್ಲೋಡ್ ಪ್ರಕ್ರಿಯೆಯನ್ನು ಜವಾಬ್ದಾರಿಯಿಂದ ನಿರ್ವಹಿಸಿ ತಮ್ಮ ಮಕ್ಕಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಕೇಂದ್ರದ ಲಾಭ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.


