ಯುವಕರಿಗೆ ಸದಾ ಬೆನ್ನೆಲುಬು:ಎಂಎಲ್ಸಿ ಸುನೀಲಗೌಡ ಅಭಯ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 25:
ದೇಶದ ಬೆನ್ನೆಲುಬಾಗಿರುವ ಯುವಕರಿಗೆ ನಾವು ಸದಾ ಬೆಂಬಲವಾಗಿ ನಿಂತಿದ್ದೇವೆ ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ರವಿವಾರ ಮುಸ್ಸಂಜೆ ತಿಕೋಟಾ ಪಟ್ಟಣದಲ್ಲಿ ನಡೆದ ಯುವ ಶಕ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ಕಾರ್ಯಕ್ರಮ ಯುವಕರ ಶಕ್ತಿ ಪ್ರದರ್ಶನ ಮಾತ್ರವಲ್ಲ. ಯುವಕರ ಬೃಹತ್ ಜಾತ್ರೆಯಾಗಿದೆ. ತಮ್ಮೆಲ್ಲರ ಪ್ರೀತಿ, ವಿಶ್ವಾಸ, ಅಭಿಮಾನ ಕಂಡು ಮಂತ್ರಮುಗ್ದನಾಗಿದ್ದೇನೆ. ತಾವು ನಮ್ಮ ಮೇಲೆ ಇಟ್ಟಿರುವ ಪ್ರೀತಿಗೆ ಋಣಿಯಾಗಿದ್ದೇನೆ. ಈ ಕಾರ್ಯಕ್ರಮ ವಿರೋಧಿಗಳಿಗೆ ನಿದ್ದೆಗೆಡಿಸಲಿದೆ. ತಮ್ಮೆಲ್ಲರ ಒಳಿತಿಗಾಗಿ ನಾವು ಸದಾ ಶ್ರಮಿಸುತ್ತೇನೆ ಎಂದು ಅವರು ಹೇಳಿದರು.
ಭಾರತದ ಜನಸಂಖ್ಯೆಯಲ್ಲಿ ಶೇ. 65ರಷ್ಟು ಯುವಕರಿದ್ದಾರೆ. ಹೀಗಾಗಿ ಹಿರಿಯರ ಮಾರ್ಗದರ್ಶನದಲ್ಲಿ ಯುವಕರನ್ನು ಬೆಳೆಸುವ ಕೆಲಸವನ್ನು ಮಾಡುತ್ತಿದ್ದೇವೆ. ಸಚಿವ ಎಂ. ಬಿ. ಪಾಟೀಲ ಅವರು ಮಾಡಿರುವ ನೀರಾವರಿ ಯೋಜನೆಗಳು ಯುವ ಜನತೆ ಕೃಷಿ, ತೋಟಗಾರಿಕೆ ಸೇರಿದಂತೆ ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬಿಯಾಗಿ ಬದುಕು ಸಾಗಿಸಲು ನೆರವಾಗಿವೆ. ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಯುವಕರು ಕೃಷಿಯಲ್ಲಿ ಹೆಚ್ಚೆಚ್ಚು ಆದಾಯ ಕಂಡುಕೊಳ್ಳಬಹುದಾಗಿದೆ. ಹೊಸ ಹೊಸ ಯೋಚನೆಗಳನ್ನು ಹೊಂದಿರುವ ಯುವಕರು ರಾಜಕೀಯಕ್ಕೆ ಬರಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಬೇಕು. ಅಲ್ಲದೇ, ಯುವಕರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ರಾಜಕೀಯದಲ್ಲಿಯೂ ಉಜ್ವಲ ಭವಿಷ್ಯವನ್ನು ಕಂಡುಕೊಳ್ಳಬೇಕು. ನಿರ್ಭಿತಿಯಿಂದ ಕೆಲಸ ಮಾಡಬೇಕು ಎಂದರು.
ಮುಂಬರುವ ಸ್ಥಳೀಯ ಚುನಾವಣೆಗಳಾದ ಗ್ರಾಮ ಪಂಚಾಯಿತಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಸಚಿವ ಎಂ. ಬಿ. ಪಾಟೀಲ ಮತ್ತು ನಾನು ಸದಾ ತಮ್ಮೊಂದಿಗೆ ಇರುತ್ತೇವೆ ಎಂದು ಸುನೀಲಗೌಡ ಪಾಟೀಲ ಯುವಕರಿಗೆ ಅಭಯ ನೀಡಿದರು.
ತೊರವಿ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಯುವಕರ ಇಂದಿನ ಉತ್ಸಾಹ ಹಂಡೆ ಹಾಲು ಕುಡಿದಷ್ಟು ಸಂತೋಷವಾಗಿದೆ. ಇದು ಎಂ. ಬಿ. ಪಾಟೀಲ ಮತ್ತು ಸುನೀಲಗೌಡ ಪಾಟೀಲ ಅವರ ಮೇಲೆ ಯುವಕರಿಗೆ ಇರುವ ಪ್ರೀತಿಗೆ ಸಾಕ್ಷಿಯಾಗಿದೆ. ತಮ್ಮನ್ನು ಹೃದಯಲ್ಲಿ ಇಟ್ಟುಕೊಂಡಿರುವ ಯುವಕರಿಗೆ ಸುನೀಲಗೌಡರು ಬೆನ್ನೆಲುಬಾಗಿ ನಿಂತಿದ್ದಾರೆ. ಸಂತರ ಬಗ್ಗೆ ಅಪಾರ ಗೌರವ ಹೊಂದಿರುವ ಅವರು ಜನಪರ ಕಾಳಜಿಯುಳ್ಳ ನಾಯಕರಾಗಿದ್ದಾರೆ. ಸಚಿವ ಎಂ. ಬಿ. ಪಾಟೀಲರು ರೈತರಿಗಾಗಿ ಮಾಡಿರುವ ಕೆಲಸ ಕಾರ್ಯಗಳು ಇಡೀ ರಾಜ್ಯಾದ್ಯಂತ ಮನೆಮಾತಾಗಿವೆ. ಇಂಥ ಸಹೋದರರು ಜಿಲ್ಲೆಯಲ್ಲಿದ್ದರೆ ಜನರಿಗೆ ಯಾವುದೇ ಕೊರತೆ ಇರುವುದಿಲ್ಲ. ಇಬ್ಬರೂ ಸಹೋದರರು ಇನ್ನೂ ಉತ್ತರೋತ್ತರವಾಗಿ ಬೆಳೆಯಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ತಿಕೋಟಾ ಶ್ರೀ ಶಿವಬಸವ ಶಿವಾಚಾರ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದು ಗೌಡನವರ, ಈರನಗೌಡ ಬಿರಾದಾರ, ಮುಖಂಡರಾದ ರಾಮು ದೇಸಾಯಿ, ಬಸಯ್ಯ ವಿಭೂತಿ, ಲೇಪು ಕೊಣ್ಣೂರ, ಭಾಗೀರಥಿ ತೇಲಿ, ಶೋಭಾ ಹುಲ್ಯಾಳ, ಪ್ರಶಾಂತ ಪಾಟೀಲ ಕನಮಡಿ, ಕಿರಣ ದಳವಾಯಿ(ದೇಸಾಯಿ), ವಿ. ಎಂ. ಪಾಟೀಲ, ರಾಮರಾವ ದೇಸಾಯಿ, ಬಾಬು ಹಂಚಿನಾಳ, ಪ್ರಕಾಶ ಜಲಗೇರಿ, ಸುರೇಶ ಕೊಣ್ಣೂರ, ಅರುಣ ಖೈರಾವ, ಸಚಿನ ಪಾಟೀಲ, ಅಮರ ಬಿಸನಾಳ, ಸಚಿನ ಚಿನವಾಲ, ಆಕಾಶ ಕಲಬುರ್ಗಿ, ರಾಜು ಚವ್ಹಾಣ ಸೇರಿದಂತೆ ತಿಕೋಟಾ, ಬಬಲೇಶ್ವರ ಮತ್ತು ವಿಜಯಪುರ ತಾಲೂಕುಗಳ ನಾನಾ ಗ್ರಾಮಗಳ ಸಾವಿರಾರು ಯುವಕರು ಉಪಸ್ಥಿತರಿದ್ದರು.
ಯುವ ಮುಖಂಡರಾದ ಶಿವಾನಂದ ಹಂಜಗಿ ಸ್ವಾಗತಿಸಿದರು. ಪ್ರಶಾಂತ ಝಂಡೆ ನಿರೂಪಿಸಿದರು.

ಗಮನ ಸೆಳೆದ ಭವ್ಯ ಮೆರವಣಿಗೆ
ಈ ಕಾರ್ಯಕ್ರಮಕ್ಕೂ ಮುಂಚೆ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರನ್ನು ಯುವಕರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ದಾರಿಯುದ್ದಕ್ಕೂ ಹೂಮಳೆ ಸುರಿಸಿದ ಯುವಕರು, ಅಬ್ಬರದ ಸಂಗೀತ, ಹಲಗೆ ವಾದನ ಸೇರಿದಂತೆ ನಾನಾ ಸಂಗೀತ ವಾದ್ಯಗಳೊಂದಿಗೆ ವೇದಿಕೆ ವರೆಗೆ ಮೆರವಣಿಗೆ ನಡೆಸಿದರು.

Share this