ಸಪ್ತಸಾಗರ ವಾರ್ತೆ,ವಿಜಯಪುರ, ಮೇ 25:
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳಲ್ಲಿ ಅನಧಿಕೃತವಾಗಿ ಜಾನುವಾರುಗಳ ಸಾಗಣೆಯಾಗದಂತೆ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೌಡ ಹಟ್ಟಿ ಹೇಳಿದರು.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಹಯೋಗದಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದಾಖಲೆಗಳಿಲ್ಲದೆ ಜಾನುವಾರುಗಳ ಸಾಗಣೆ ಮಾಡುವುದು ಕಾನೂನಿನ ವಿರುದ್ಧವಾಗಿದೆ. ಹಾಗಾಗಿ ಅಕ್ರಮವಾಗಿ ಜಾನುವಾರುಗಳ ಸಾಗಣೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಜಾನುವಾರು ಖರೀದಿ ಹಾಗೂ ಮಾರಾಟ ಮಾಡುವ ವೇಳೆ ಜಾನುವಾರುಗಳಿಗೆ ಕಿವಿಯೋಲೆ ಇರುವುದು ಕಡ್ಡಾಯ. ಸಾಗಾಣಿಕೆ ಸಂಬಂಧಪಟ್ಟಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಧೃಡೀಕರಣ ಪತ್ರ ಕಡ್ಡಾಯವಾಗಿದೆ. ಎಲ್ಲ ಜಾನುವಾರುಗಳ ಮಾಲೀಕರಿಗೆ ಮನವೊಲಿಸಿ ಕಿವಿಯೋಲೆ ಹಾಕುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.
ಬಕ್ರೀದ್ ಹಬ್ಬದ ಮುನ್ನಾ ದಿನವಾದ ಮೇ 27 ಹಾಗೂ ಮೇ 28ರಂದು ಜಾನುವಾರುಗಳ ಅಕ್ರಮ ವಧೆ ಹಾಗೂ ಸಾಗಣೆ ತಡೆಗಟ್ಟಲು ನಗರಪಾಲಿಕೆ, ಪಶುಪಾಲನಾ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳ ತಂಡ ರಚಿಸಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಕೈಕೊಳ್ಳಬೇಕು. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಆಯುಕ್ತರು ತಂಡಗಳನ್ನು ರಚಿಸಿ ಅದರ ಮೇಲುಸ್ತುವಾರಿ ವಹಿಸಿಕೊಳ್ಳಬೇಕು ಎಂದು ಅವರು ಸಭೆಗೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಮಾತನಾಡಿ, ಜಿಲ್ಲೆಯ ತಾಲೂಕಾ ವ್ಯಾಪ್ತಿಯಲ್ಲಿರುವ ತಹಶೀಲ್ದಾರ ನೇತೃತ್ವದಲ್ಲಿ ನಗರ, ಪುರಸಭೆ, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಆಯುಕ್ತರು ಹಾಗೂ ಮುಖ್ಯ ಅಧಿಕಾರಿಗಳ ನೇತೃತ್ವದಲ್ಲಿ, ಪಶು ಸಂಗೋಪನಾ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಒಳಗೊಂಡಂತೆ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಬೇಕು. ತಿಡಗುಂದಿ ಟೋಲ್ ಗೇಟ್, ಧೂಳಖೇಡ, ಸೊಲ್ಲಾಪುರ ನಾಕಾ, ಹಾಗೂ ಜಮಖಂಡಿ ನಾಕಾಗಳಲ್ಲಿ ಹೆಚ್ಚುವರಿ ತಂಡಗಳನ್ನು ರಚಿಸಬೇಕು ಎಂದು ಸೂಚಿಸಿದರು.
ವಶಪಡಿಸಿಕೊಂಡ ಗೋವುಗಳನ್ನು ತಕ್ಷಣ ಹತ್ತಿರದ ಗೋಶಾಲೆಗಳಿಗೆ ಹಸ್ತಾಂತರಿಲು ಕ್ರಮ ವಹಿಸಬೇಕು ಎಂದೂ ಹೇಳಿದರು.
ಪಶು ಸಂಗೋಪನಾ ಇಲಾಖೆಯಲ್ಲಿ ವಾಹನಗಳ ಕೊರತೆ ಇದ್ದು ಈ ಸಂದರ್ಭದಲ್ಲಿ ಪ್ರತಿ ತಂಡಕ್ಕೆ ಒಂದರಂತೆ ವಾಹನಗಳನ್ನು ಒದಗಿಸಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಅನಧಿಕೃತವಾಗಿ ಜಾನುವಾರು ಸಾಗಣೆ ಮಾಡುವ ವಾಹನಗಳ ನೋಂದಣಿ ರದ್ದುಪಡಿಸಬೇಕು.
ಕರ್ನಾಟಕ ಜಾನುವಾರು ಹತ್ಯೆ ಪ್ರಬಂಧಕ ಮತ್ತು ಸಂರಕ್ಷಣಾ ಕಾಯ್ದೆಯನ್ವಯ ಯಾವುದೇ ರೀತಿಯ ಜಾನುವಾರುಗಳು ಎಲ್ಲ ವಯಸ್ಸಿನ ಆಕಳು, ಆಕಳು ಕರು, ಹೋರಿ, ಎತ್ತು ಅಲ್ಲದೆ 13 ವರ್ಷದೊಳಗಿನ ಎಮ್ಮೆ ಕೋಣಗಳನ್ನು ಹತ್ಯೆ ಮಾಡುವಂತಿಲ್ಲ. ಉಚ್ಚ ನ್ಯಾಯ್ಯಾಲಯದ ಆದೇಶದನ್ವಯ ಒಂಟಿಗಳನ್ನು ಕೂಡ ಬಕ್ರೀದ ಸಂದರ್ಭದಲ್ಲಿ ಹತ್ಯೆ ಮಾಡುವಂತಿಲ್ಲ. ಬಕ್ರೀದ್ ಹಿನ್ನೆಲೆಯಲ್ಲಿ ಜಾನುವಾರುಗಳ ಅಕ್ರಮ ಸಾಗಣೆ ಹಾಗೂ ವಧೆಗಳ ಬಗ್ಗೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಇಲ್ಲವೇ ಹತ್ತಿರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಬೇಕು ಎಂದರು.
ಬಕ್ರೀದ ಸಂದರ್ಭದಲ್ಲಿ ಯಾವುದೇ ರೀತಿಯ ಕಾಯ್ದೆ ಉಲ್ಲಂಘನೆಯಾಗದಂತೆ ಯಾವುದೇ ಸಮಸ್ಯೆಗಳಾಗದಂತೆ ಕರ್ತವ್ಯ ರ್ನಿಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಪ್ರಾಣಿ ಕಲ್ಯಾಣ ಮಂಡಳಿಯು ಭಾರತದ ಪ್ರಾಣಿ ಕಲ್ಯಾಣ ಮತ್ತು ಸಂರಕ್ಷಣಾ ಕಾನೂನು, ಪ್ರಾಣಿಗಳ ಜನನ ನಿಯಂತ್ರಣ ನಿಯಮ -2023 ಹಾಗೂ ಭಾರತದಲ್ಲಿ ನೀವು ತಿಳಿದಿರಲೇಬೇಕಾದಂಥಹ ಪ್ರಾಣಿಗಳ ಕಾನೂನು ಕುರಿತು ಕರ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಪ್ರಭಾರಿ ಉಪ ನಿರ್ದೇಶಕ ಡಾ. ಪ್ರಲ್ಹಾದ ಪಾಟೀಲ, ಮುಖ್ಯ ಪಶು ವೈದ್ಯಾಧಿಕಾರಿ ಡಾ. ಸುಜಾತಾ, ಡಾ. ಶಿವಾನಂದ ಮೇಟಿ, ಡಾ. ಯು.ಜೆ. ನಾಲಾ, ಡಾ. ಬಿ.ಎಸ್ ಕನಮಡಿ, ಡಾ. ವೆಂಕಟೇಶ ವಾಲಿಕಾರ, ಡಾ. ಶರಣಗೌಡ ಬಿರಾದಾರ,ಡಾ. ಧರಮಪ್ಪ ರಾಠೋಡ, ಡಾ. ತಜಪಶೆಟ್ಟಿ, ಡಾ. ರಾಮು ರಾಠೋಡ, ಡಾ. ಹಿರೇಮಠ, ಡಾ. ಪ್ರವೀಣ ಸುರಪುರ, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ, ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಬಕ್ರೀದ್ ಹಿನ್ನೆಲೆ ಜಿಲ್ಲಾದ್ಯಂತ ಕಟ್ಟೆಚ್ಚರಕ್ಕೆ ರಾಮನಗೌಡ ಹಟ್ಟಿ ಸೂಚನೆ


