ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 25:
ಭಟ್ಕಳ ತಾಲೂಕಿನ ಪಳ್ಳಿಹೊಳೆಯಲ್ಲಿ ಏಕಾಏಕಿ ನೀರಿನ ಮಟ್ಟ ಹೆಚ್ಚಾಗಿ ಹತ್ತು ಜನ ಸಾವಿಗೀಡಾಗಿದ್ದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ದುರ್ಘಟನೆಯಿಂದಾಗಿ 24 ಜನ ಮಕ್ಕಳ ಬದುಕು ಅತಂತ್ರವಾಗಿದೆ. ಈ ಮಕ್ಕಳು ಅನಾಥರಾಗಿದ್ದು, ತಕ್ಷಣ 24 ಮಕ್ಕಳಿಗೆ ಅವರ ಶಿಕ್ಷಣ ಮುಗಿಯುವವರೆಗೆ ವಸತಿಯುತ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಬೇಕು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಮಾಜಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಈ ಕುಟುಂಬಗಳಿಗೆ ತುರ್ತು ಪರಿಹಾರ ಘೋಷಿಸಿರುವ ಮುಖ್ಯಮಂತ್ರಿಗಳ ಕಳಕಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಕರ್ನಾಟಕದಲ್ಲಿ ಇರುವ ಅನಾಥ ಮಕ್ಕಳು ಸರಕಾರ ನಡೆಸುವ ಬಾಲಮಂದಿರದಲ್ಲಿ ಹಾಗೂ ವಿವಿಧ ಮಠಮಾನ್ಯಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ನಾಡಿನ ಎಲ್ಲಾ ಅನಾಥ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಮೀಸಲಾತಿ ಕಲ್ಪಿಸುವುದರ ಮೂಲಕ ಅವರ ಬಾಳಿಗೆ ಮುಖ್ಯಮಂತ್ರಿಗಳು ಬೆಳಕಾಗಬೇಕೆಂದು ಬಬಲೇಶ್ವರ ಆಗ್ರಹಿಸಿದ್ದಾರೆ. “ಮುಖ್ಯಮಂತ್ರಿಗಳು ಅತ್ಯಂತ ತಾಯಿ ಹೃದಯದವರು, ಹಲವಾರು ಭಾಗ್ಯಗಳನ್ನು ನೀಡುವುದರ ಮೂಲಕ ರಾಜ್ಯದ ಭಾಗ್ಯವಿಧತರಾಗಿರುವ ಅವರು. ಈ ನಾಡಿನ ಎಲ್ಲಾ ಅನಾಥ ಮಕ್ಕಳ ಬಾಳಿಗೆ, ತಂದೆ ತಾಯಿಯ ಸ್ಥಾನದಲ್ಲಿ ನಿಂತು ಆ ಪ್ರೀತಿಯನ್ನು ನೀಡಿದ ತಾಯಿ ಹೃದಯದ ಮುಖ್ಯಮಂತ್ರಿಯಾಗಿ ಅನಾಥ ಮಕ್ಕಳ ಪಾಲಿನ ಭಾಗ್ಯವಿದಾತರಾಗಬೇಕೆಂದು ಬಬಲೇಶ್ವರ ಕಳಕಳಿಯಿಂದ ವಿನಂತಿಸಿಕೊಂಡಿದ್ದಾರೆ. ರಾಜ್ಯದ ಹಿರಿಯ ಅಧಿಕಾರಿಗಳ ತಂಡವನ್ನು ಪಕ್ಕದ ಮಹಾರಾಷ್ಟ್ರಕ್ಕೆ ಕಳಿಸಿ, ಮಹಾರಾಷ್ಟ್ರ ಸರಕಾರ ಅನಾಥ ಮಕ್ಕಳಿಗಾಗಿ ವಿಶೇಷ ಮೀಸಲಾತಿ ಕಲ್ಪಿಸಿರುವ ಕುರಿತಾದ ಸಮಗ್ರ ವರದಿಯನ್ನು ತರಿಸಿ, ಅದರಲ್ಲಿರುವ ಅಂಶಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ, ನಮ್ಮ ರಾಜ್ಯದಲ್ಲಿ ಅನಾಥ ಮಕ್ಕಳಿಗಾಗಿ ವಿಶೇಷ ಸವಲತ್ತುಗಳಿರುವ ವಿಶೇಷ ಮೀಸಲಾತಿಯನ್ನು ಕಲ್ಪಿಸಬೇಕೆಂದು ಬಬಲೆಶ್ವರ ಸರಕಾರವನ್ನು ಒತ್ತಾಯಿಸಿದ್ದಾರೆ.
ಭಟ್ಕಳ್ ದುರ್ಘಟನೆಯಲ್ಲಿ ಅನಾಥರಾಗಿರುವ 24 ಮಕ್ಕಳಿಗೆ ವಿಶೇಷ ನೆರವು ಕಲ್ಪಿಸಿ : ಸಂಗಮೇಶ ಬಬಲೇಶ್ವರ


