ಸಪ್ತಸಾಗರ ವಾರ್ತೆ,ವಿಜಯಪುರ, ಮೇ 25:
ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಷಿ ಆನಂದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂಡಿ ತಾಲೂಕಿನ ಹೊರ್ತಿ ಮತ್ತು ಇತರೆ 31 ಗ್ರಾಮಗಳಿಗೆ ಹಾಗೂ ಚಡಚಣ ತಾಲೂಕಿನ ಇಂಚಗೇರಿ ಮತ್ತು ಇತರೆ 41 ಗ್ರಾಮಗಳಿಗೆ ನೀರು ಪೂರೈಸುವ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳ ಜಲಮೂಲಗಳು ಹಾಗೂ ನೀರು ಸಂಸ್ಕರಣಾ ಘಟಕಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ಇಂಡಿ ತಾಲೂಕಿನ ಅರ್ಜನಾಳ ಮತ್ತು ಹಂಜಗಿ ಕೆರೆಗಳಿಗೆ ಭೇಟಿ ನೀಡಿದ ಅವರು, ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳ ಪ್ರಮುಖ ಜಲಮೂಲಗಳಾದ ಕೆರೆ ಹಾಗೂ ಜಲಾಶಯ ಒತ್ತುವರಿ ಹಾಗೂ ಸಂಗ್ರಹವಾಗಿರುವ ನೀರಿನ ಪ್ರಮಾಣವನ್ನು ಪರಿಶೀಲಿಸಿದ ಅವರು, ಮುಂಬರುವ ದಿನಗಳಲ್ಲಿ ನೀರಿನ ಕೊರತೆ ಉಂಟಾಗದಂತೆ ಭೀಮಾ ನದಿ ಹಾಗೂ ಇಂಡಿ ಶಾಖಾ ಕಾಲುವೆ ಮೂಲಕ ಸಮರ್ಪಕ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ ಸಿಇಒ ಅವರು, ಪಂಪ್ ಹೌಸ್, ಕ್ಲಾರಿನೇಶನ್ ಘಟಕ ಸೇರಿದಂತೆ ವಿವಿಧ ತಾಂತ್ರಿಕ ಘಟಕಗಳ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಎಲ್ಲಾ ಘಟಕಗಳು ಸುಸೂತ್ರವಾಗಿ ಕಾರ್ಯ ನಿರ್ವಹಿಸುವಂತೆ ನಿರ್ವಹಣೆ ಮಾಡಬೇಕು ಎಂದರು.
ಯಾವುದೇ ತಾಂತ್ರಿಕ ದೋಷ ಕಂಡುಬಂದಲ್ಲಿ ತಕ್ಷಣ ಸರಿಪಡಿಸಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇಂಡಿ ತಾಲೂಕಿನ ಹೊರ್ತಿ ಸೇರಿದಂತೆ 31 ಗ್ರಾಮಗಳು ಹಾಗೂ ಚಡಚಣ ತಾಲೂಕಿನ ಇಂಚಗೇರಿ ಸೇರಿದಂತೆ 41 ಗ್ರಾಮಗಳಿಗೆ ಶುದ್ಧ ಹಾಗೂ ಸಮರ್ಪಕ ಪ್ರಮಾಣದ ಕುಡಿಯುವ ನೀರನ್ನು ನಿರಂತರವಾಗಿ ಪೂರೈಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಬೇಡಿಕೆ ಹೆಚ್ಚಾಗುವ ಹಿನ್ನೆಲೆ ಯಾವುದೇ ಗ್ರಾಮದಲ್ಲಿ ಸಮಸ್ಯೆ ಉಂಟಾಗದಂತೆ ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಗ್ರಾಮಗಳಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆಯಿರುವ ಪ್ರದೇಶಗಳನ್ನು ಮುಂಚಿತವಾಗಿ ಗುರುತಿಸಿ ಪರ್ಯಾಯ ವ್ಯವಸ್ಥೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಪೈಪ್ಲೈನ್, ಮೋಟಾರ್ ದುರಸ್ತಿ, ವಿದ್ಯುತ್ ವ್ಯತ್ಯಯ ಸೇರಿದಂತೆ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕು. ಸಾರ್ವಜನಿಕರಿಂದ ಕುಡಿಯುವ ನೀರಿನ ಸಮಸ್ಯೆ ಕುರಿತು ದೂರುಗಳು ಬಂದಲ್ಲಿ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತ್ವರಿತ ಪರಿಹಾರ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ಸಂಜಯ ಕೋಟೆನ್ನವರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಮಚಂದ್ರ ಬಂಡಿ, ಶಾಖಾಧಿಕಾರಿಗಳಾದ ಚಂದ್ರಶೇಖರ ಚವ್ಹಾಣ, ಗುಲ್ನಾಜ ಜಮಾದಾರ, ಶಶಿಧರ ಮೇಡೇದಾರ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಜಿ. ಪಂ. ಸಿಇಒ ರಿಷಿ ಆನಂದ ಸೂಚನೆ


