ಮಯೂರವರ್ಮ ಕನ್ನಡದ ಸ್ವಾಭಿಮಾನದ ಸಂಕೇತ-ಸಂತೋಷ ಬಂಡೆ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 28:
ಕನ್ನಡಿಗರ ಸಾಮೂಹಿಕ ಪ್ರಜ್ಞೆಯಲ್ಲಿ ‘ಅಸ್ಮಿತೆ’ಯ ಬೀಜ ಬಿತ್ತಿ, ಕನ್ನಡ ಭಾಷೆ, ನೆಲ, ಸಂಸ್ಕೃತಿಯ ಸಂಕೇತವಾದ ಮಯೂರವರ್ಮನ ಆದರ್ಶಗಳು ಇಂದಿನ ಜಾಗತೀಕರಣದಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವಲ್ಲಿ ನಮಗೆ ದಾರಿದೀಪವಾಗಿವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಗುರುವಾರ ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ೧೬೮೧ ನೇ ಕನ್ನಡ ಸಾಮ್ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಯೂರವರ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕನ್ನಡಾಭಿಮಾನದ ಕುರಿತು ಅವರು ಮಾತನಾಡಿದರು.
ಕದಂಬರ ಮಯೂರವರ್ಮನು ಕನ್ನಡದ ಸ್ವಾಭಿಮಾನದ ಸಂಕೇತ. ಆಡಳಿತ ಭಾಷೆಯಾಗಿ ಕನ್ನಡವನ್ನು ಬಳಸಿದ ಮೊದಲಿಗನಾಗಿ, ಇಂದಿನ ಆಧುನಿಕತೆಯಲ್ಲಿ ಕನ್ನಡದ ಸಾಂಸ್ಕೃತಿಕ ಅಸ್ಮಿತೆ ಮತ್ತು ಶಾಸ್ತ್ರೀಯ ಸ್ಥಾನಮಾನಕ್ಕೆ ಆತ ಹಾಕಿದ ಬುನಾದಿ ಅತ್ಯಂತ ಪ್ರಸ್ತುತವಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿಯಲು ಕದಂಬರ ಮಯೂರವರ್ಮನ ಸ್ವಾಭಿಮಾನದ ಚಿಂತನೆ ಇಂದಿಗೂ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಯೂರವರ್ಮನ ಕನ್ನಡಾಭಿಮಾನ ಪ್ರತಿಯೊಬ್ಬ ಕನ್ನಡಿಗನಿಗೂ ಮಾತೃಭಾಷಾಭಿಮಾನ, ಸ್ವಾವಲಂಬನೆ ಮತ್ತು ಸಾಂಸ್ಕೃತಿಕ ಬದ್ಧತೆಯನ್ನು ಕಲಿಸುವ ಜೀವಂತ ಆದರ್ಶವಾಗಿದೆ ಎಂದು ಹೇಳಿದರು.
ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕ್ಷಕರಾದ ಸಿದ್ದು ರತ್ನಾಕರ, ರೇಣುಕಾ ಭಜಂತ್ರಿ, ವೀರೇಶ ಹುಣಶ್ಯಾಳ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.

Share this