ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಸಲ್ಲದು: ಶಾಸಕ ಯಶವಂತರಾಯಗೌಡ ಪಾಟೀಲ


ಸಪ್ತಸಾಗರ ವಾರ್ತೆ, ವಿಜಯಪುರ,ಜು.೯:
ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಸಲ್ಲದು. ಚುನಾವಣೆ ಬೇರೆ, ಅಭಿವೃದ್ಧಿ ಬೇರೆ. ಹಾಗಾಗಿ ನಾನು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡುವ ಜಾಯಮಾನ ನನ್ನದು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ನನ್ನ ಹೆಸರಿನಲ್ಲಿಯೇ ಚುನಾವಣೆ ಎದುರಿಸಿ ಗೆದ್ದಿದ್ದೇನೆ. ಆದರೆ ಅವರು ಬೇರೆಯವರ ಹೆಸರು ಹೇಳಿಕೊಂಡು ಚುನಾವಣೆ ಗೆಲ್ಲುತ್ತ ಬಂದಿದ್ದಾರೆ ಎಂದು ಅವರು ಸಂಸದ ರಮೇಶ ಜಿಗಜಿಣಗಿಗೆ ಛೇಡಿಸಿದರು.
ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ನಾನು ಮಾತಿಗೆ ತಕ್ಕಂತೆ ನಡೆದುಕೊಂಡಿದ್ದೇನೆ. ಭೀಮಾಶಂಕರ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ, ನುಡಿದಂತೆ ನಡೆದಿದ್ದೇನೆ. ಸದ್ಯ ಇಂಡಿ ಮತಕ್ಷೇತ್ರ ಮಾದರಿ ಕ್ಷೇತ್ರವಾಗಿಸುವ ನಿಟ್ಟಿನಲ್ಲಿ ೪ ಸಾವಿರ ಕೋಟಿಗೂ ಅಧಿಕ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ, ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜು. ೧೪ ರಂದು ನಡೆಯುತ್ತಿರುವ ಭವ್ಯ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಚಾಲನೆ ನೀಡಲಿದ್ದಾರೆ ಎಂದರು.
ಹೊರ್ತಿ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ಬಿಜೆಪಿ ಸರ್ಕಾರ ಅನುಮೋದನೆ ನೀಡಿದೆ ನಿಜ. ಆದರೆ ಹಣ ನೀಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಈ ವಿಷಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಸಂಸದ ಗೋವಿಂದ ಕಾರಜೋಳ ಅವರು ಕೆಲಸ ಮಾಡಿದ್ದಾರೆ. ಬೇರೆ ಪಕ್ಷದವರಿದ್ದರೂನ ಅವರು ಮಾಡಿದ್ದನ್ನು ಮಾಡಿದ್ದಾರೆ ಎನ್ನಲೇಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಬೆರೆಸುವುದು ಸರಿಯಲ್ಲ ಎಂದರು.
ವಿಶ್ವವಿಖ್ಯಾತ ಗೋಳಗುಮ್ಮಟ ಅನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವುದು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಸದ ರಮೇಶ ಜಿಗಜಿಣಗಿ ಅವರು ಹೆಚ್ಚು ಗಮನ ಹರಿಸಲಿ ಎಂದು ಕಿವಿಮಾತು ಹೇಳಿದರು.

Share