ಪರಿಸರ ರಕ್ಷಣೆಗಾಗಿ ಪಣ ತೊಡೋಣ-ಸಂತೋಷ ಬಂಡೆ

ಸಪ್ತಸಾಗರ ವಾರ್ತೆ,ಇಂಡಿ, ಜೂ. 5: ಪ್ರಕೃತಿ ನಮಗೆ ಬದುಕಲು ಬೇಕಾದ ಗಾಳಿ, ನೀರು, ಆಹಾರ, ನೆರಳನ್ನು ನೀಡಿದೆ. ಪರಿಸರ ಹಾಳಾದರೆ ಮಾನವನ ಅಸ್ತಿತ್ವವೇ ಪ್ರಶ್ನಾರ್ಥಕವಾಗುತ್ತದೆ. “ಇಂದಿನ ಮರ, ನಾಳಿನ ಜೀವ” ಎಂಬ ಧ್ಯೇಯವಾಕ್ಯದೊಂದಿಗೆ ನಾವೆಲ್ಲರೂ ಪರಿಸರ ರಕ್ಷಣೆಗಾಗಿ ಪಣ ತೊಡೋಣ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶುಕ್ರವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಟ್ಟು ಅವರು ಮಾತನಾಡಿದರು.
ಇಂದಿನ ಮಕ್ಕಳಿಗೆ ಪ್ರಕೃತಿಯ ಮಹತ್ವ ತಿಳಿಸಿಕೊಟ್ಟು, ಸ್ವಚ್ಛತೆಯ ಅಭ್ಯಾಸ ಕಲಿಸುವುದು ಅತ್ಯಗತ್ಯ. ಹೆಚ್ಚುತ್ತಿರುವ ಮಾಲಿನ್ಯ, ಅರಣ್ಯನಾಶದಿಂದಾಗಿ ಇಂದು ಭೂಮಿ ಗಂಭೀರ ಸಮಸ್ಯೆ ಎದುರಿಸುತ್ತಿದೆ. ಪ್ರಕೃತಿಯ ಸಮತೋಲನಕ್ಕಾಗಿ ಎಲ್ಲರೂ ಒಗ್ಗೂಡಿ ಕಾರ್ಯ ನಿರ್ವಹಿಸಬೇಕಿದೆ ಎಂದರು.
ಮುಖ್ಯ ಶಿಕ್ಷಕ ಕೆ.ಐ. ಮಕಾನದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸುವುದರ ಮೂಲಕ ಮರುಬಳಕೆಗೆ ಒತ್ತು ನೀಡಬೇಕು. ಪರಿಸರದ ಸ್ವಚ್ಛತೆಗೆ ನಮ್ಮ ಮೊದಲಾದ್ಯತೆ ನೀಡಬೇಕು ಎಂದು ಹೇಳಿದರು.
ಶಿಕ್ಷಕರಾದ ಎಸ್ ಎಸ್ ಅರಬ, ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಜತೆಗೆ ಮಕ್ಕಳು ಪರಿಸರ ಸಂರಕ್ಷಣೆಯ ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಿದರು.

Share this